ADVERTISEMENT

ಎಚ್‌–1ಬಿ ವೀಸಾ ಅಮಾನತು: ನ್ಯಾಯಾಲಯಕ್ಕೆ ಭಾರತೀಯರ ಮೊರೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆದೇಶದ ವಿರುದ್ಧ ಅರ್ಜಿ

ಪಿಟಿಐ
Published 16 ಜುಲೈ 2020, 6:30 IST
Last Updated 16 ಜುಲೈ 2020, 6:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌:ಈ ವರ್ಷದ ಅಂತ್ಯದವರೆಗೆ ಎಚ್‌–1ಬಿ ವೀಸಾ ವಿತರಿಸುವುದನ್ನು ಅಮಾನತು ಮಾಡಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೊರಡಿಸಿರುವ ಆದೇಶದ ವಿರುದ್ಧ 174 ಭಾರತೀಯರು ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಕೊಲಂಬಿಯಾ ಜಿಲ್ಲಾ ನ್ಯಾಯಾಲಯದಲ್ಲಿ ಈ ಬಗ್ಗೆ ಅರ್ಜಿ ಸಲ್ಲಿಸಲಾಗಿದೆ. ಅರ್ಜಿಯನ್ನು ಸ್ವೀಕರಿಸಿರುವ ನ್ಯಾಯಾಧೀಶ ಕೇತಂಜಿ ಬ್ರೌನ್ ಜ್ಯಾಕ್ಸನ್, ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಮತ್ತು ಹೋಮ್‌ಲ್ಯಾಂಡ್ ಭದ್ರತಾ ವಿಭಾಗದ ಹಂಗಾಮಿ ಕಾರ್ಯದರ್ಶಿ ಚಾದ್‌ ಎಫ್‌ ವಾಲ್ಫ್‌ ಹಾಗೂ ಕಾರ್ಮಿಕ ಕಾರ್ಯದರ್ಶಿ ಇಯುಗೆನ್‌ ಸ್ಕಾಲಿಯಾ ಅವರಿಗೆ ಸಮನ್ಸ್‌ ಜಾರಿಗೊಳಿಸಿದೆ.

ಎಚ್-1ಬಿ ಅಥವಾ ಎಚ್-4 ವೀಸಾಗಳ ವಿತರಣೆಯನ್ನು ವರ್ಷಾಂತ್ಯದವರೆಗೆ ರದ್ದುಗೊಳಿಸುವ ಆದೇಶದಿಂದ ಅಮೆರಿಕದ ಆರ್ಥಿಕತೆಗೆ ಧಕ್ಕೆಯಾಗುತ್ತದೆ. ಜತೆಗೆ ಕುಟುಂಬಗಳನ್ನು ಬಲವಂತವಾಗಿ ಬೇರ್ಪಡಿಸಿದಂತಾಗುತ್ತದೆ ಎಂದು ಭಾರತೀಯರ ಪರ ವಕೀಲ ವಾಸ್ಡೆನ್ ಬನಿಯಾಸ್ ಪ್ರತಿಪಾದಿಸಿದ್ದಾರೆ.

ADVERTISEMENT

ಎಚ್‌–1ಬಿ ಅಥವಾ ಎಚ್‌4 ವೀಸಾಗಳ ಮೇಲೆ ನಿರ್ಬಂಧ ಹೇರುವುದು ಕಾನೂನುಬಾಹಿರವಾಗಿದೆ. ಈಗಾಗಲೇ ಬಾಕಿ ಉಳಿದಿರುವ ಎಚ್‌–1ಬಿ ಮತ್ತು ಎಚ್‌4 ವೀಸಾಗಳ ಕುರಿತಾದ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿಗೊಳಿಸುವಂತೆ ವಿದೇಶಾಂಗ ಇಲಾಖೆಗೆ ಸೂಚಿಸಬೇಕು ಎಂದು ನ್ಯಾಯಾಲಯವನ್ನು ಕೋರಲಾಗಿದೆ.

ಜೂನ್‌ 22ರಂದು ಆದೇಶ ಹೊರಡಿಸಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಎಚ್-1ಬಿ ಉದ್ಯೋಗದ ವೀಸಾ ವಿತರಿಸುವುದನ್ನು ವರ್ಷಾಂತ್ಯದವರೆಗೆ ರದ್ದುಗೊಳಿಸಿದ್ದರು.

ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಕ್ರಮಕೈಗೊಳ್ಳಲಾಗಿದೆ ಎಂದು ಟ್ರಂಪ್‌ ಪ್ರತಿಪಾದಿಸಿದ್ದರು. ಆದರೆ, ಈ ಆದೇಶದಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅಪಾರ ಸಂಖ್ಯೆಯಲ್ಲಿರುವ ಭಾರತೀಯರಿಗೆ ಮಾರಕವಾಗಿ ಪರಿಣಮಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.