ADVERTISEMENT

9/11 ‘ಎಂದಿಗೂ ಮರೆಯದ’ ಘಟನೆ: ಅಮೆರಿಕ ಪ್ರತಿಜ್ಞೆ

ಏಜೆನ್ಸೀಸ್
Published 12 ಸೆಪ್ಟೆಂಬರ್ 2019, 20:00 IST
Last Updated 12 ಸೆಪ್ಟೆಂಬರ್ 2019, 20:00 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌    

ನ್ಯೂಯಾರ್ಕ್‌: ಅಮೆರಿಕ ನೆಲದಲ್ಲಿ 9/11ರಂದು ನಡೆದ ಭಯೋತ್ಪಾದನಾ ದಾಳಿಯನ್ನು ‘ಎಂದಿಂಗೂ ಮರೆಯದ’ ಘಟನೆ ಎಂದು ಅಮೆರಿಕನ್ನರು ಬುಧವಾರ ಪ್ರತಿಜ್ಞೆ ಮಾಡಿದರು.

18 ವರ್ಷಗಳ ಹಿಂದೆ ಸೆಪ್ಟೆಂಬರ್‌ 11ರಂದು ನಡೆದ ದಾಳಿಯಲ್ಲಿ ಅಸು ನೀಗಿದವರ ಸಂಬಂಧಿಕರು ಅಲ್ಲಿ ಜಮಾ ಯಿಸಿದ್ದರು. ಮೌನಾಚರಣೆ ಮೂಲಕ ಮೃತರಿಗೆ ಶ್ರದ್ಧಾಂಜಲಿ ಅರ್ಪಿಸಿದರು.

2001ರಲ್ಲಿ ವಿಮಾನ ಅಪಹರಣ ಮಾಡಿದ್ದ ಭಯೋತ್ಪಾದಕರು ವಿಶ್ವ ವ್ಯಾಪಾರ ಕೇಂದ್ರದ ಉತ್ತರ ಗೋಪುರಕ್ಕೆ ಅಪ್ಪಳಿಸಿ, ಹಲವರನ್ನು ಬಲಿ ಪಡೆದಿದ್ದರು.

ADVERTISEMENT

18ನೇ ವರ್ಷದ ಸ್ಮರಣೆಯಾದ್ದರಿಂದ ಮೃತರ ಬಹುತೇಕ ಸಂಬಂಧಿಕರು ಭಾಗವಹಿಸಿದ್ದರು. ಅವರೆಲ್ಲರು ತಮ್ಮ ನೋವು, ಭಾವನೆಗಳನ್ನು ಪರಸ್ಪರ ಹಂಚಿಕೊಂಡರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು, ಪೆಂಟಗಾನ್‌ನಲ್ಲಿ ಪುಷ್ಪ ಅರ್ಪಿಸಿ ಈ ದಿನವನ್ನು ಸ್ಮರಿಸಿದರು. ‘ಇದು ನಿಮ್ಮ ವೈಯಕ್ತಿಕ ಮತ್ತು ಶಾಶ್ವತ ನಷ್ಟದ ವಾರ್ಷಿಕೋತ್ಸವ’ ಎಂದು ಹೇಳಿದರು.

ಟಿಟಿಪಿಯ ಮೆಹ್ಸೂದ್‌ ಜಾಗತಿಕ ಉಗ್ರ–ಅಮೆರಿಕ ಘೋಷಣೆ: ನಿಷೇಧಿತ ಉಗ್ರ ಸಂಘಟನೆಯಾದ ಪಾಕಿಸ್ತಾನದ ತೆಹ್ರೀಕ್-ಎ-ತಾಲಿಬಾನ್ (ಟಿಟಿಪಿ) ನಾಯಕ ನೂರ್ ವಾಲಿ ಮೆಹ್ಸೂದ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಅಮೆರಿಕ ಘೋಷಿಸಿದೆ. 9/11ರ ಭಯೋತ್ಪಾದನಾ ದಾಳಿಯ 18ನೇ ವಾರ್ಷಿಕೋತ್ಸವದ ಮುನ್ನಾದಿನ ಅಮೆರಿಕ ವಿದೇಶಾಂಗ ವ್ಯವಹಾರಗಳ ಇಲಾಖೆ ಈ ಘೋಷಣೆ ಮಾಡಿದೆ.

ಆಫ್ಗಾನಿಸ್ತಾನದಲ್ಲಿ ಉಗ್ರ ಮುಲ್ಲಾ ಫಜಲುಲ್ಲಾ ಸಾವಿನ ನಂತರ 2018ರ ಜೂನ್‌ನಲ್ಲಿ ಮೆಹ್ಸೂದ್ ಟಿಟಿಪಿಯ ನಾಯಕತ್ವ ವಹಿಸಿಕೊಂಡಿದ್ದಾನೆ ಎಂದು ಅಮೆರಿಕ ಹೇಳಿದೆ.

ಪಾಶ್ಚಿಮಾತ್ಯ ರಾಷ್ಟ್ರಗಳ ಮೇಲೆ ದಾಳಿಗೆ ಕರೆ
ಕೈರೋ(ಎಪಿ):
ಪಾಶ್ಚಿಮಾತ್ಯ ರಾಷ್ಟ್ರಗಳಾದ ಅಮೆರಿಕ, ಯುರೋಪ್‌, ಇಸ್ರೇಲ್‌ ಹಾಗೂ ರಷ್ಯಾದ ಮೇಲೆ ಮುಸ್ಲಿಮರು ದಾಳಿ ನಡೆಸಬೇಕು ಎಂದು ಅಲ್‌ಖೈದಾ ಉಗ್ರ ಸಂಘಟನೆ ನಾಯಕ ಐಮನ್‌ ಅಲ್‌ ಜವಾಹ್ರಿ ಕರೆ ನೀಡಿದ್ದಾನೆ.

ವಿಶ್ವ ವಾಣಿಜ್ಯ ಕೇಂದ್ರ(ಡಬ್ಲ್ಯೂಟಿಸಿ) ಕಟ್ಟಡಗಳ ಮೇಲೆ ನಡೆದ ಉಗ್ರರ ದಾಳಿಯ 18ನೇ ವರ್ಷದ ಸಂದರ್ಭದಲ್ಲಿ ಮಾತನಾಡಿರುವ 33 ನಿಮಿಷದ ವಿಡಿಯೊದಲ್ಲಿ ಈ ವಿಷಯ ಪ್ರಸ್ತಾಪಿಸಿರುವ ಅಲ್‌ ಜವಾಹ್ರಿ, ದಾಳಿಯಲ್ಲಿ ಅಮಾಯಕ ನಾಗರಿಕರು ಬಲಿಯಾಗಿದ್ದಾರೆ ಎನ್ನುತ್ತಾ, ದಾಳಿ ಖಂಡಿಸಿದ ಜಿಹಾದಿಗಳನ್ನೂ ಟೀಕಿಸಿದ್ದಾನೆ. ‘ಸೇನೆಯನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಬೇಕಾದರೆ, ಪೂರ್ವದಿಂದ ಪಶ್ಚಿಮಕ್ಕೆ ಎಲ್ಲೆಲ್ಲೂ ಅಮೆರಿಕದ ಸೇನೆ ಇದೆ’ ಎಂದಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.