ಆಫ್ಗಾನಿಸ್ತಾನದ ಕಾಬೂಲ್‌ನಲ್ಲಿ ಶಸ್ತ್ರಸಜ್ಜಿತ ತಾಲಿಬಾನ್ ಪಡೆ
ರಾಯಿಟರ್ಸ್ ಚಿತ್ರ
ಕಾಬೂಲ್: ಆಫ್ಗಾನಿಸ್ತಾನದಲ್ಲಿ ಸೆರೆ ಹಿಡಿಯಲಾಗಿದ್ದ ಇಬ್ಬರು ಅಮೆರಿಕನ್ನರನ್ನು ಬಿಡುಗಡೆ ಮಾಡಿದ ಫಲವಾಗಿ, ಮಾದಕ ವಸ್ತು ಕಳ್ಳಸಾಗಣೆ ಹಾಗೂ ಭಯೋತ್ಪಾದನೆಯಂಥ ಗಂಭೀರ ಪ್ರಕರಣಗಳಲ್ಲಿ ಅಮೆರಿಕ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾಗಿದ್ದ ಆಫ್ಗಾನಿಸ್ತಾನದ ಇಬ್ಬರು ವ್ಯಕ್ತಿಗಳು ಬಿಡುಗಡೆಗೊಂಡಿದ್ದಾರೆ ಎಂದು ಆಫ್ಗಾನಿಸ್ತಾನದ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
‘ಅಮೆರಿಕದಿಂದ ಬಿಡುಗಡೆಗೊಂಡ ಈ ಇಬ್ಬರು ಕಾಬೂಲ್‌ಗೆ ಬಂದಿಳಿದಿದ್ದಾರೆ. ಈ ಇಬ್ಬರ ವಿರುದ್ಧ ಅಮೆರಿಕ ನ್ಯಾಯಾಲಯವು 2008ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅಮೆರಿಕದ ನ್ಯಾಯಾಂಗ ವ್ಯವಸ್ಥೆಯಲ್ಲಿ ಡ್ರಗ್ಸ್ ಭಯೋತ್ಪಾದನೆಯ ಅಡಿಯಲ್ಲಿ ಶಿಕ್ಷೆ ವಿಧಿಸಲಾದ ಮೊದಲ ಪ್ರಕರಣ ಇದಾಗಿದೆ. ಆಫ್ಗಾನಿಸ್ತಾನ ಹಾಗೂ ಅಮೆರಿಕ ವಿದೇಶಾಂಗ ಸಚಿವರ ನಡುವೆ ದೀರ್ಘಕಾಲದ ಚರ್ಚೆಯ ನಂತರ ಉಭಯ ರಾಷ್ಟ್ರಗಳು ಪರಸ್ಪರ ಇಬ್ಬರು ವ್ಯಕ್ತಿಗಳನ್ನು ಬಿಡುಗಡೆ ಮಾಡುವ ಒಪ್ಪಂದಕ್ಕೆ ಬಂದಿದ್ದವು’ ಎಂದಿದ್ದಾರೆ.
ಅಧ್ಯಕ್ಷ ಹುದ್ದೆಯ ಕೊನೆಯ ಕ್ಷಣದಲ್ಲಿ ಜೋ ಬೈಡನ್ ಅವರು ತೆಗೆದುಕೊಂಡ ನಿರ್ಧಾರಗಳಲ್ಲಿ ಇದೂ ಒಂದು. ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅವರು ನೂತನ ಅಧ್ಯಕ್ಷರಾಗಿ ಸೋಮವಾರ ಅಧಿಕಾರ ವಹಿಸಿಕೊಂಡರು.
ಅಮೆರಿಕದ ರ‍್ಯಾನ್ ಕಾರ್ಬೆಟ್ ಅವರು 2022ರಿಂದ ತಾಲಿಬಾನ್ ಸೆರೆಯಲ್ಲಿದ್ದರು. ಅವರು ಹಿಂದಿರುಗಿದ್ದು ಕುಟುಂಬದ ಹರ್ಷವನ್ನು ಇಮ್ಮಡಿಗೊಳಿಸಿದೆ ಎಂದು ಅವರ ಕುಟುಂಬದವರು ಹೇಳಿದ್ದಾರೆ. ಜತೆಗೆ ಹಿಂದಿನ ಅಧ್ಯಕ್ಷ ಬೈಡನ್ ಹಾಗೂ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಉಭಯ ರಾಷ್ಟ್ರಗಳ ನಾಗರಿಕರ ಬಿಡುಗಡೆಯ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಿದ್ದ ಕತಾರ್‌ಗೆ ಧನ್ಯವಾದ ಎಂದು ಆಫ್ಗಾನಿಸ್ತಾನ ಹೇಳಿದೆ.
ಆಫ್ಗಾನಿಸ್ತಾನದಲ್ಲಿ ರಾಕೆಟ್ ಬಳಿಸಿದ್ದ ಅಮೆರಿಕದ ಸೈನಿಕರನ್ನು ಕೊಲ್ಲಲು ಡ್ರಗ್ಸ್ ಭಯೋತ್ಪಾದನೆ ನಡೆಸಲು ತಾಲಿಬಾನ್ ಗುಂಪಿನ ಸದಸ್ಯ ಮೊಹಮ್ಮದ್ ನಿಯೋಜನೆಗೊಂಡಿದ್ದ.
ಅಮೆರಿಕದ ಮೆಕ್‌ಕೆಂಟಿ ಬಿಡುಗಡೆಗೊಂಡ ವ್ಯಕ್ತಿ. ಆದರೆ ಇವರ ಕುರಿತ ಮಾಹಿತಿಯನ್ನು ಗೋಪ್ಯವಾಗಿಡುವಂತೆ ಅವರ ಕುಟುಂಬವು ಅಮೆರಿಕ ಸರ್ಕಾರವನ್ನು ಕೋರಿದ್ದಾರೆ.
ಅಲ್ ಕೈದಾ ನಾಯಕ ಅಯುಮನ್ ಅಲ್ ಝವಾರಿ ಹತ್ಯೆ ನಂತರ ಏರ್‌ಲೈನ್ ಮೆಕ್ಯಾನಿಕ್ ಆಗಿದ್ದ ಜಾರ್ಜ್ ಗ್ಲೇಜ್‌ಮನ್ ಹಾಗೂ ಮಹಮೂದ್ ಹಬಿಬಿ ಅವರನ್ನು ಬಂಧಿಸಲಾಗಿತ್ತು. ಆದರೆ ಈ ಇಬ್ಬರ ಬಿಡುಗಡೆಯಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.