ADVERTISEMENT

ವಸ್ತುಸ್ಥಿತಿ ಚರ್ಚೆಗೆ ಅವಕಾಶ: 26/11 ಪ್ರಕರಣದ ಆರೋಪಿಯಿಂದ ಅರ್ಜಿ

ಪಿಟಿಐ
Published 30 ಮಾರ್ಚ್ 2023, 12:53 IST
Last Updated 30 ಮಾರ್ಚ್ 2023, 12:53 IST
   

ವಾಷಿಂಗ್ಟನ್: ಮುಂಬೈನಲ್ಲಿ 2008ರಲ್ಲಿ ನಡೆದಿದ್ದ ಭಯೋತ್ಪಾದಕರ ದಾಳಿ ಪ್ರಕರಣದಲ್ಲಿ ಬೇಕಾಗಿರುವ, ಪಾಕಿಸ್ತಾನ ಮೂಲದ ಕೆನಡಾ ಉದ್ಯಮಿ ತಹಾವ್ವುರ್ ರಾಣಾ, ಭಾರತಕ್ಕೆ ಒಪ್ಪಿಸಬೇಕು ಎಂಬ ಪ್ರಕರಣದ ವಿಚಾರಣೆ ಪೂರ್ವದಲ್ಲಿ ನ್ಯಾಯಮೂರ್ತಿಗಳ ಜೊತೆ ಚರ್ಚೆಗೆ ಅವಕಾಶ ಕೋರಿ ಸ್ಥಳೀಯ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ.

ಮುಂಬೈ ಪ್ರಕರಣದ ಸಂಬಂಧ ಈತನನ್ನು ಒಪ್ಪಿಸಬೇಕು ಎಂದು ಭಾರತ ಕೋರಿದೆ. ಈ ಸಂಬಂಧ ಕಳೆದ ವರ್ಷ ಜೂನ್‌ 10ರಂದು ಈತನನ್ನು ಬಂಧಿಸಲಾಗಿತ್ತು. ಪ್ರಕರಣದ ಸಂಬಂಧ ಈತ ತಲೆಮರೆಸಿಕೊಂಡಿದ್ದಾನೆ ಎಂದು ಭಾರತ ಘೋಷಿಸಿದೆ. 2008ರಲ್ಲಿ ನಡೆದಿದ್ದ ಕೃತ್ಯದಲ್ಲಿ ಅಮೆರಿಕದ ಎಂಟು ಮಂದಿ ಸೇರಿ 166 ಜನ ಮೃತಪಟ್ಟಿದ್ದರು.

ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿರುವ ಡಿಸ್ಟ್ರಿಕ್ಟ್‌ ಕೋರ್ಟ್‌ನಲ್ಲಿ ಕಡೆಯದಾಗಿ ಈ ಪ್ರಕರಣದ ವಿಚಾರಣೆ ಜೂನ್‌ 2021ರಲ್ಲಿ ನಡೆದಿತ್ತು. ರಾಣಾನನ್ನು ಭಾರತಕ್ಕೆ ಒಪ್ಪಿಸಬೇಕು ಎಂದು ಅಮೆರಿಕ ಸರ್ಕಾರವು ಮನವಿ ಮಾಡಿದ್ದು, ಕೋರ್ಟ್ ಈ ಸಂಬಂಧ ತನ್ನ ಆದೇಶವನ್ನು ಪ್ರಕಟಿಸಬೇಕಾಗಿದೆ.

ADVERTISEMENT

ತನ್ನ ವಕೀಲರ ಮೂಲಕ ಸದ್ಯ ಸ್ಟೇಟಸ್‌ ಕಾನ್ಫರೆನ್ಸ್‌ಗೆ (ನ್ಯಾಯಾಧೀಶರ ಭೇಟಿ) ಅವಕಾಶ ಕೋರಿ ರಾಣಾ ಅರ್ಜಿ ಸಲ್ಲಿಸಿದ್ದಾನೆ. ಪ್ರಕರಣದ ವಸ್ತುಸ್ಥಿತಿ ಕುರಿತು ಚರ್ಚಿಸುವುದು ಅಗತ್ಯವಾಗಿದೆ ಎಂದು ಆತನ ವಕೀಲರು ತಿಳಿಸಿದ್ದಾರೆ.

ಸ್ಟೇಟಸ್‌ ಕಾನ್ಫರೆನ್ಸ್‌ ಅನ್ನು ಏಪ್ರಿಲ್‌ 25ರಂದು ನಿಗದಿಪಡಿಸಬೇಕು ಎಂದೂ ಆತನ ವಕೀಲರು ಕೋರಿದ್ದಾರೆ. ಈ ಕುರಿತ ಅರ್ಜಿಗೆ ಅಮೆರಿಕದ ಸರ್ಕಾರ ವಿರೋಧ ವ್ಯಕ್ತಪಡಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.