ADVERTISEMENT

ಕಡಿಮೆ ಬೆಲೆಯಲ್ಲಿ ಡ್ರೋನ್‌ ನಿರ್ಮಾಣ: ಯೋಜನೆಗೆ ಯುರೋಪ್‌ನ ಐದು ರಾಷ್ಟ್ರ ಒಪ್ಪಿಗೆ

ಉಕ್ರೇನ್‌ ಜೊತೆ ಕೈ ಜೋಡಿಸಲು ಮುಂದಾದ ಐದು ರಾಷ್ಟ್ರಗಳು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 16:18 IST
Last Updated 21 ಫೆಬ್ರುವರಿ 2026, 16:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾರ್ಸಾ: ಕಳೆದ ನಾಲ್ಕು ವರ್ಷಗಳಿಂದ ರಷ್ಯಾ ವಿರುದ್ದ ಯುದ್ಧದ ಪರಿಣತಿ ಪಡೆದಿರುವ‌ ಉಕ್ರೇನ್‌ನ ಅನುಭವ ಪಡೆದುಕೊಂಡು, ಕಡಿಮೆ ವೆಚ್ಚದ ವಾಯು ರಕ್ಷಣಾ ವ್ಯವಸ್ಥೆ ಹಾಗೂ ಸ್ವಾಯತ್ತ ಡ್ರೋನ್‌ ತಯಾರಿಸುವ ನಿಟ್ಟಿನಲ್ಲಿ ಹೊಸ ಯೋಜನೆಗೆ ಯುರೋಪ್‌ನ ಐದು ರಾಷ್ಟ್ರಗಳು ಒಪ್ಪಿಗೆ ಸೂಚಿಸಿವೆ.

ಫ್ರಾನ್ಸ್‌, ಪೋಲಂಡ್, ಜರ್ಮನಿ, ಬ್ರಿಟನ್‌ ಹಾಗೂ ಇಟಲಿ ದೇಶಗಳು ರಷ್ಯಾ ವಿರುದ್ಧ ‘ಡ್ರೋನ್‌ ತಡೆಗೋಡೆ’ ನಿರ್ಮಿಸುವ ಯೋಜನೆಗೆ ನಿರ್ಧರಿಸಿವೆ. ಯುರೋಪ್‌ನ ವಾಯುಪ್ರದೇಶ ಉಲ್ಲಂಘಿಸುವ ಡ್ರೋನ್‌ಗಳನ್ನು ಪತ್ತೆ ಹಚ್ಚಿ, ಅವುಗಳನ್ನು ನಾಶಪಡಿಸುವ ತಂತ್ರಜ್ಞಾನದಲ್ಲಿ ಉಕ್ರೇನ್‌ ಹೆಚ್ಚಿನ ನೈಪುಣ್ಯ ಸಾಧಿಸಿದ್ದು, ಉಳಿದ ರಾಷ್ಟ್ರಗಳು ಕೂಡ ಕೈ ಜೋಡಿಸಲು ನಿರ್ಧರಿಸಿವೆ.  

ಡ್ರೋನ್‌ ಯುದ್ಧ ಸಾಮರ್ಥ್ಯದಲ್ಲಿ ರಷ್ಯಾ ಹಾಗೂ ಉಕ್ರೇನ್ ಪ್ರಬಲ ಪೈಪೋಟಿ ನಡೆಸುತ್ತಿದ್ದು, ಯುದ್ಧ ತಂತ್ರವನ್ನೇ ಮರುರೂಪಿಸುವಂತೆ ಮಾಡಿದೆ. ಪೋಲಂಡ್‌ ಈಗಾಗಲೇ ಉಕ್ರೇನ್‌ ಜೊತೆಗೆ ಸೇನಾ ತರಬೇತಿ ಹಾಗೂ ಡ್ರೋನ್‌ ಉತ್ಪಾದನಾ ಕಾರ್ಯವನ್ನು ಆರಂಭಿಸಿದೆ.  

ADVERTISEMENT

ಯುರೋಪ್‌ನ ಗಡಿ ಹಾಗೂ ವಿಮಾನ ನಿಲ್ದಾಣಗಳ ಮೇಲೆ ಹೆಚ್ಚು ಸಾಮರ್ಥ್ಯದ ಡ್ರೋನ್‌ಗಳು ಹಾರಾಟ ನಡೆಸಿದ್ದವು. ರಷ್ಯಾವೇ ಈ ಡ್ರೋನ್‌ಗಳನ್ನು ಹಾರಿಸಿತ್ತು ಎಂದು ಐರೋಪ್ಯ ರಾಷ್ಟ್ರಗಳು ದೂರಿದ್ದವು. ಇದಕ್ಕೆ ತಿರುಗೇಟು ನೀಡಿದ್ದ ರಷ್ಯಾ, ಡ್ರೋನ್‌ಗಳನ್ನು ಉದ್ದೇಶಪೂರ್ವಕವಾಗಿ ಹಾರಿಸಿರಲಿಲ್ಲ ಎಂದು ತಿಳಿಸಿತ್ತು. ಈ ಬೆಳವಣಿಗೆಗಳಿಂದ ಎಚ್ಚೆತ್ತ ಈ ರಾಷ್ಟ್ರಗಳು ಇದೀಗ ಉಕ್ರೇನ್ ಜೊತೆಗೆ ಡ್ರೋನ್‌ ನಿರ್ಮಾಣ ಯೋಜನೆಗೆ ಕೈ ಜೋಡಿಸಿವೆ.

‘ಮುಂದಿನ ಪೀಳಿಗೆಯ ವಾಯುರಕ್ಷಣೆ ಹಾಗೂ ಸ್ವಾಯತ್ತ ಡ್ರೋನ್‌ ತಯಾರಿಸಿ, ನ್ಯಾಟೊ ಪಡೆಯನ್ನು ಮತ್ತಷ್ಟು ಬಲಪಡಿಸಲು ಬ್ರಿಟನ್‌ ಸೇರಿದಂತೆ ಐದು ರಾಷ್ಟ್ರಗಳು ಜೊತೆಯಾಗಿ ಹೂಡಿಕೆ ಮಾಡಲಿದೆ’ ಎಂದು ಬ್ರಿಟನ್‌ನ ರಕ್ಷಣಾ ಸಚಿವ ಲ್ಯುಕ್ ಪೊಲ್ಲಾರ್ಡ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.