ADVERTISEMENT

ಹಿಮಾಲಯನ್ ವಯಾಗ್ರ ಹುಡುಕಲು ಹೋದ ನಾಲ್ವರು ಮಹಿಳೆಯರು, ಒಬ್ಬ ಪುರುಷ ಹಿಮ ಸಮಾಧಿ?

ಕಾಣೆಯಾದವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು 8 ತಂಡಗಳ ಕಾರ್ಯಾಚರಣೆ ನಡೆದಿದೆ’ ಎಂದು ಡಾರ್ಕುಲಾ ಎಸ್‌ಪಿ ಪ್ರದೀಪ್ ಸಿಂಗ್ ಧಾಮಿ ತಿಳಿಸಿದ್ದಾರೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಮೇ 2023, 4:57 IST
Last Updated 3 ಮೇ 2023, 4:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಠ್ಮಂಡು: ಕಾಮೋತ್ತೆಜಕ ಔಷಧಿ ಗಿಡಮೂಲಿಕೆಯಾದ ‘ಹಿಮಾಲಯನ್ ವಯಾಗ್ರ’ವನ್ನು (Yarsagumba) ಹುಡುಕಲು ಹೋದ ಐವರು ಹಿಮಕುಸಿತದಲ್ಲಿ ಕಾಣೆಯಾಗಿರುವ ಘಟನೆ ನೇಪಾಳದ ಪರ್ವತ ಜಿಲ್ಲೆಯಾದ ಡಾರ್ಕುಲಾ ವ್ಯಾಪ್ತಿಯಲ್ಲಿ ನಡೆದಿದೆ.

‘ಕಾಣೆಯಾದವರಲ್ಲಿ ಒಬ್ಬ ಪುರುಷ ಹಾಗೂ ನಾಲ್ವರು ಮಹಿಳೆಯರು ಸೇರಿದ್ದಾರೆ. ಅವರೆಲ್ಲ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು 8 ತಂಡಗಳ ಕಾರ್ಯಾಚರಣೆ ನಡೆದಿದೆ’ ಎಂದು ಡಾರ್ಕುಲಾ ಎಸ್‌ಪಿ ಪ್ರದೀಪ್ ಸಿಂಗ್ ಧಾಮಿ ತಿಳಿಸಿದ್ದಾರೆ.

ಈ ಕುರಿತು ಎಎನ್‌ಐ ಸುದ್ದಿಸಂಸ್ಥೆ ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.

ADVERTISEMENT

ಸೋಮವಾರ ಮಧ್ಯಾಹ್ನ ಬ್ಯಾನಸ್ ಎಂಬ ಹಳ್ಳಿಯ ಪರ್ವತ ಪ್ರದೇಶದಲ್ಲಿ ಹಿಮ ಕುಸಿತವಾಗಿದೆ. ಇದೇ ಸಂದರ್ಭದಲ್ಲಿ ಅಲ್ಲಿ ಹಿಮಾಲಯನ್ ವಯಾಗ್ರ ಹೆಕ್ಕಲು ಹೋಗಿದ್ದ ಐವರು ಹಿಮ ಕುಸಿತಕ್ಕೆ ಸಿಲುಕಿದ್ದಾರೆ ಎಂದು ಧಾಮಿ ತಿಳಿಸಿದ್ದಾರೆ.

ಹಿಮಾಲಯನ್ ವಯಾಗ್ರ ಅಥವಾ ಯರ್ಸ್‌ಗುಂಬಾ ಎಂಬ ಅಣಬೆ ಜಾತಿಯ ಪರಾವಲಂಬಿ ಸಸ್ಯ ಸುಮಾರು 3000 ಮೀಟರ್‌ನಿಂದ 5000 ಮೀಟರ್‌ನ ಎತ್ತರದ ಪರ್ವತ ಪ್ರದೇಶಗಳಲ್ಲಿ ಬೆಳೆಯುತ್ತದೆ. ಇದನ್ನು ಸಂಪ್ರದಾಯಿಕ ಚೀನಿ ಔಷಧಿ ತಯಾರಿಕೆಯಲ್ಲಿ ಹೆಚ್ಚು ಬಳಸುತ್ತಾರೆ. ಇದಕ್ಕೆ ಹೆಚ್ಚು ಬೆಲೆಯಿದ್ದು, ಕಾಮೋತ್ತೆಜಕ ಮಾತ್ರೆಗಳಲ್ಲಿ ಹಾಗೂ ಹೃದಯ, ಮೂತ್ರಪಿಂಡ ಸಮಸ್ಯೆಗಳಲ್ಲಿ ಬಳಸುತ್ತಾರೆ.

ಹಿಮಾಲಯನ್ ವಯಾಗ್ರವು ಟಿಬೆಟಿಯನ್ ಪ್ರಸ್ಥಭೂಮಿಯಲ್ಲಿ ಮಾತ್ರ ಸಿಗುವಂತ ಔಷಧಿ ಸಸ್ಯವಾಗಿದೆ. ನೇಪಾಳದಲ್ಲಿ ಮೇ ತಿಂಗಳಲ್ಲಿ ಸ್ಥಳೀಯರು ಯರ್ಸ್‌ಗುಂಬಾ ಉತ್ಸವ ಎಂದು ಆಚರಿಸಿ ಈ ಸಸ್ಯವನ್ನು ಆಯಲು ಪರ್ವತ ಪ್ರದೇಶಗಳಲ್ಲಿ ಅಲೆಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.