ADVERTISEMENT

ವಲಸಿಗರಿಗೆ ಕೌಶಲ, ಇಂಗ್ಲಿಷ್ ಕಡ್ಡಾಯ

ಅರ್ಹತೆ ಆಧಾರಿತ ನೀತಿ ಜಾರಿಗೆ ಟ್ರಂಪ್‌ ಆಡಳಿತದ ಸಿದ್ಧತೆ: ಭಾರತೀಯರಿಗೆ ಅನುಕೂಲ

ಪಿಟಿಐ
Published 17 ಜನವರಿ 2018, 19:30 IST
Last Updated 17 ಜನವರಿ 2018, 19:30 IST
ವಲಸಿಗರಿಗೆ ಕೌಶಲ, ಇಂಗ್ಲಿಷ್ ಕಡ್ಡಾಯ
ವಲಸಿಗರಿಗೆ ಕೌಶಲ, ಇಂಗ್ಲಿಷ್ ಕಡ್ಡಾಯ   

ವಾಷಿಂಗ್ಟನ್: ‘ಕೌಶಲ, ಪ್ರತಿಭೆ ಹೊಂದಿರುವವರು ಹಾಗೂ ಇಂಗ್ಲಿಷ್ ಮಾತನಾಡುವ ವಲಸಿಗರು ಯಾವುದೇ ದೇಶದವರಾಗಿದ್ದರೂ ಅಂತಹವರಿಗೆ ಮಾತ್ರ ಅಮೆರಿಕಗೆ ಪ್ರವೇಶ ನೀಡಲು ಟ್ರಂಪ್ ಆಡಳಿತ ಬಯಸುತ್ತದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.‌

‘ಇಂತಹ ನೀತಿ ಭಾರತದಂತಹ ರಾಷ್ಟ್ರಗಳ ನಾಗರಿಕರಿಗೆ ಅನುಕೂಲವಾಗಲಿದೆ. ಈ ಎಲ್ಲ ಮಾನದಂಡಗಳಿಗೆ ಭಾರತೀಯರೇ ಅತಿ ಹೆಚ್ಚು ಅರ್ಹತೆ ಹೊಂದಿರುತ್ತಾರೆ’ ಎಂದು ವಿಶ್ಲೇಷಿಸಿದ್ದಾರೆ.

‘ಅರ್ಹತೆ ಆಧಾರಿತ ನೀತಿಯನ್ನು ಜಾರಿಗೊಳಿಸಲು ಟ್ರಂಪ್‌ ಆಡಳಿತ ಉದ್ದೇಶಿಸಿದೆ. ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿ ದೃಷ್ಟಿಯಿಂದ ವಲಸೆ ವ್ಯವಸ್ಥೆಯಲ್ಲಿ ಸುಧಾರಣೆ ತರಲಾಗುತ್ತಿದೆ. ಇದಕ್ಕಾಗಿ ವಲಸಿಗರ ಸಂಖ್ಯೆಗೆ ಕಡಿವಾಣ ಹಾಕಲು ಈ ನೀತಿ ಜಾರಿಗೊಳಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಾಮುಖ್ಯತೆ ನೀಡುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಭಯೋತ್ಪಾದನೆಗೆ ಸಂಬಂಧಿಸಿದ ಅಪರಾಧ ಎಸಗುವ ಅಥವಾ ಭಯೋತ್ಪಾದಕರಿಗೆ ಬೆಂಬಲ ನೀಡುವ ವಿದೇಶಿ ಪ್ರಜೆಗಳಿಗೆ ಅಮೆರಿಕಕ್ಕೆ ಪ್ರವೇಶ ನೀಡುವುದಿಲ್ಲ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸ್ತುತ ವಲಸೆ ಮಾನದಂಡಗಳಿಂದಾಗಿ, ಅಪರಾಧ ಕೃತ್ಯ ಎಸಗಿರುವ ನಾಲ್ವರಲ್ಲಿ ಮೂವರು ಉಗ್ರರು ಅಮೆರಿಕ ಪ್ರವೇಶಿಸುತ್ತಿದ್ದಾರೆ ಎಂದು ರಕ್ಷಣಾ ಇಲಾಖೆ ಹಾಗೂ ನ್ಯಾಯಾಂಗ ಇಲಾಖೆ ವರದಿ ಬಿಡುಗಡೆಗೊಳಿಸಿತ್ತು.

ಎಲ್ಲೆಡೆಯಿಂದ ವಲಸಿಗರು ಬರಬೇಕು: ಟ್ರಂಪ್

ವಾಷಿಂಗ್ಟನ್ (ಪಿಟಿಐ): ‘ಎಲ್ಲ ಸ್ಥಳಗಳಿಂದಲೂ ವಲಸಿಗರು ಅಮೆರಿಕಕ್ಕೆ ಬರಬೇಕು’ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ನಾರ್ವೆಯಿಂದ ಹೆಚ್ಚಿನ ಜನರು ವಲಸೆ ಬರಬೇಕು ಎಂದು ಟ್ರಂಪ್ ಅವರು ಇತ್ತೀಚೆಗೆ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಹೀಗಾಗಿ, ಟ್ರಂಪ್‌ ಈ ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.