ADVERTISEMENT

ಪಾಕಿಸ್ತಾನದ 6,500 ಉಗ್ರರು ಅಫ್ಗಾನಿಸ್ತಾನದಲ್ಲಿದ್ದಾರೆ: ವಿಶ್ವಸಂಸ್ಥೆ ವರದಿ

ಏಜೆನ್ಸೀಸ್
Published 26 ಜುಲೈ 2020, 1:51 IST
Last Updated 26 ಜುಲೈ 2020, 1:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನ್ಯೂಯಾರ್ಕ್‌:ಪಾಕಿಸ್ತಾನ ಉಗ್ರ ಸಂಘಟನೆಗಳಿಗೆ ಸೇರಿದ ಸುಮಾರು 6,000ದಿಂದ 6,500 ಉಗ್ರರು ಅಫ್ಗಾನಿಸ್ತಾನದಲ್ಲಿದ್ದಾರೆ. ಹೆಚ್ಚಿನವರು ತೆಹ್ರಿಕ್‌–ಇ–ತಾಲಿಬಾನ್‌ ಪಾಕಿಸ್ತಾನ್‌‌ (ಟಿಟಿಪಿ) ಸಂಘಟನೆಯ ಉಗ್ರರಾಗಿದ್ದು, ಎರಡೂ ದೇಶಗಳಿಗೆ ಅಪಾಯವನ್ನುಂಟುಮಾಡಿದ್ದಾರೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ವರದಿ ಮಾಡಿದೆ.

ಅಲ್ ಖೈದಾ, ಐಎಸ್‌ಐಎಸ್‌ ಮತ್ತಿತರ ಸಂಘಟನೆಗಳಿಗೆ ಸಂಬಂಧಿಸಿದ ವಿಶ್ಲೇಷಣಾತ್ಮಕ ವರದಿಯನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಮಿತಿಯು ಸಲ್ಲಿಸಿದೆ. ಅದರಲ್ಲಿಅಮಿರ್ ನೂರ್‌ ವಾಲಿ ಮೆಹ್ಸೂದ್‌ ನೇತೃತ್ವದ ಟಿಟಿಪಿಯು ಅಫ್ಗಾನಿಸ್ತಾನದಲ್ಲಿ ಕಾರ್ಯಾಚರಿಸುತ್ತಿರುವ ದೊಡ್ಡ ಸಂಘಟನೆಯಾಗಿದೆ ಎಂದು ಉಲ್ಲೇಖಿಸಲಾಗಿದೆ.

‘ಟಿಟಿಪಿ ಪಾಕಿಸ್ತಾನದಲ್ಲಿ ಹಲವು ಉನ್ನತ ಮಟ್ಟದ ದಾಳಿಯ ಹೊಣೆ ಹೊತ್ತಿದೆ. ಜೊತೆಗೆ ಜಮಾತ್‌–ಉಲ್‌–ಅಹ್ರಾರ್‌ (ಜೆಯುಎ) ಮತ್ತು ಲಷ್ಕರ್‌–ಎ–ಇಸ್ಲಾಂನಿಂದ ಮತ್ತಷ್ಟು ಕೃತ್ಯಗಳಿಗೆ ನೆರವಾಗಿದೆ. ಟಿಟಿಪಿಯ ಹಲವು ಮಾಜಿ ಸದಸ್ಯರು ಈಗಾಗಲೇ ಐಎಸ್‌ಎಲ್‌–ಕೆ (ಇಸ್ಲಾಮಿಕ್‌ ಸ್ಟೇಟ್‌ ಆಫ್‌ ಇರಾಕ್‌ ಮತ್ತು ಲೆವಂಟ್‌ ಖೋರಸಾನ್‌) ಜೊತೆ ಸೇರಿದ್ದಾರೆ’ ಎಂದು ತಿಳಿಸಿದೆ.

ADVERTISEMENT

‘ಅಫ್ಗಾನಿಸ್ತಾನದಲ್ಲಿ ಸಕ್ರಿಯವಾಗಿರುವ ಪಾಕಿಸ್ತಾನಿ ಉಗ್ರರ ಸಂಖ್ಯೆಯು ಎರಡೂ ದೇಶಗಳಲ್ಲಿ ಆತಂಕ ಉಂಟುಮಾಡಿದೆ. ಅಂದಾಜು6,000ದಿಂದ 6500 ಉಗ್ರರಿದ್ದಾರೆ ಎಂದು ಅಂದಾಜಿಸಲಾಗಿದ್ದು, ಹೆಚ್ಚಿನವರು ಟಿಟಿಪಿಗೆ ಸೇರಿದವರಾಗಿದ್ದಾರೆ’ ಎಂದು ವರದಿ ಮಾಹಿತಿ ನೀಡಿದೆ.

ಈ ಮೂಲಕ ಪಾಕಿಸ್ತಾನವು ತನ್ನ ನೆಲದಲ್ಲಿ ಭಯೋತ್ಪಾದಕರಿಗೆ ನೆರವು ನೀಡುತ್ತಿದೆ ಎಂಬುದು ಮತ್ತೊಮ್ಮೆ ಸಾಬೀತಾದಂತಾಗಿದೆ. ಕಳೆದ ತಿಂಗಳು ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್‌ ಖಾನ್‌ ಅವರು ದೇಶದ ಸಂಸತ್‌ ಅಧಿವೇಶನದಲ್ಲಿ ಭಯೋತ್ಪಾದಕ ಒಸಾಮ ಬಿನ್‌ ಲಾಡೆನ್‌ನನ್ನು ‘ಶಹೀದ್‌ (ಹುತಾತ್ಮ)’ ಎಂದು ಬಣ್ಣಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.