ADVERTISEMENT

‘ಬಾಂಬ್‌ ಸೈಕ್ಲೋನ್‌’ ಪರಿಣಾಮ: ಅಮೆರಿಕ ತತ್ತರ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2022, 22:30 IST
Last Updated 24 ಡಿಸೆಂಬರ್ 2022, 22:30 IST
   

ಷಿಕಾಗೊ:ಕ್ರಿಸ್‌ಮಸ್‌ ಸಂಭ್ರಮಾಚರಣೆಗೆ ಸಿದ್ಧವಾಗುತ್ತಿರುವ ಅಮೆರಿಕಕ್ಕೆ ತೀವ್ರ ಶೀತ ಚಂಡಮಾರುತ (ಬಾಂಬ್‌ ಸೈಕ್ಲೋನ್‌) ಅಪ್ಪಳಿಸಿದ್ದು,ತಾಪಮಾನ ‘ಮೈನಸ್‌ 40’ ಡಿಗ್ರಿವರೆಗೆ ಕುಸಿದಿದೆ. ಎಲ್ಲ ರಾಜ್ಯಗಳ ಮೇಲೂ ಪರಿಣಾಮ ಬೀರಿದೆ.

ಹಲವು ಕಡೆಗಳಲ್ಲಿ ಹೆದ್ದಾರಿ ಸಂಪರ್ಕ ಬಂದ್‌ ಆಗಿದೆ. ಸಾವಿರಾರು ವಿಮಾನಗಳ ಸಂಚಾರ ರದ್ದಾಗಿದ್ದು, ಕ್ರಿಸ್‌ಮಸ್‌ ಸಂದರ್ಭದಲ್ಲಿ ಪ್ರಯಾಣಿಕರು ಪರಿತಪಿಸುತ್ತಿದ್ದಾರೆ. ಹಲವು ರಾಜ್ಯಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.

ಕೆಲ ಸ್ಥಳಗಳಲ್ಲಿ ತಾಪಮಾನ ವಿಪರೀತ ಕುಸಿದಿದ್ದು, ಜನರು ತತ್ತರಿಸಿದ್ದಾರೆ. ಲಕ್ಷಾಂತರ ಮನೆಗಳಿಗೆ ವಿದ್ಯುತ್‌ ವ್ಯತ್ಯಯವಾಗಿದೆ.

ADVERTISEMENT

ಡಲ್ಲಾಸ್, ಟೆಕ್ಸಾಸ್‌ನಲ್ಲಿ ಶುಕ್ರವಾರ –10 ಡಿಗ್ರಿ ದಾಖಲಾಗಿದೆ. ಭಾರಿ ಚಳಿಯ ಪರಿಣಾಮ ಮನೆಯಿಂದ ಹೊರಗೆ ಬಂದರೆ ನಿಮಿಷಗಳಲ್ಲಿ ಫ್ರಾಸ್ಟ್‌ಬೈಟ್‌ (ಚಳಿಯ ಹೊಡೆತಕ್ಕೆ ಚರ್ಮಕ್ಕೆ ಆಗುವ ಗಾಯ) ಎದುರಿಸಬೇಕಾಗುತ್ತದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಉತ್ತರ ಮತ್ತು ದಕ್ಷಿಣ ಡಕೋಟಾ, ಓಕ್ಲಹಾಮ, ಅಯೋವಾ ಮತ್ತು ಇತರೆಡೆ ರಸ್ತೆಗಳು ಮಂಜುಗಡ್ಡೆಯಿಂದ ಆವೃತವಾಗಿದೆ. ಜನರಿಗೆ ಮನೆಯಿಂದ ಹೊರಗೆ ಬಾರದಂತೆ ಎಚ್ಚರಿಕೆ ನೀಡಲಾಗಿದೆ.

ನ್ಯೂಯಾರ್ಕ್, ಸಿಯಾಟಲ್ ಮತ್ತು ಷಿಕಾಗೋದ ಓ'ಹೇರ್‌ನಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಸುಮಾರು 3,520 ವಿಮಾನಗಳ ಸಂಚಾರವನ್ನು ಶುಕ್ರವಾರ ರದ್ದುಗೊಳಿಸಲಾಗಿದೆ ಮತ್ತು 1,900 ವಿಮಾನಗಳು ವಿಳಂಬವಾಗಿದೆ. ದಕ್ಷಿಣದ ರಾಜ್ಯಗಳಲ್ಲೂ ವಿಪರೀತ ಚಳಿ ಆವರಿಸಿದೆ.

ಏನಿದು ಬಾಂಬ್ ಸೈಕ್ಲೋನ್: ಭೂಮಿಯ ಮೇಲ್ಮೈ ಭಾಗದ ಬೆಚ್ಚನೆಯ ಗಾಳಿಗೆ ಭಾರಿ ಶೀತಗಾಳಿ ಡಿಕ್ಕಿ ಹೊಡೆದಾಗ ಉಂಟಾಗುವ ಒತ್ತಡಕ್ಕೆ ಬಾಂಬ್‌ ಸೈಕ್ಲೋನ್‌ ಎಂದು ಕರೆಯಲಾಗುತ್ತದೆ. 24 ಗಂಟೆಯೊಳಗೆ ಗಾಳಿಯ ಒತ್ತಡ 20 ಮಿಲಿಬಾರ್‌ ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕುಸಿದಾಗ ಉಂಟಾಗುವ ತೀವ್ರಗತಿಯ ಮಾರುತವನ್ನು ಸಹ ಇದೇ ಹೆಸರಿನಿಂದ ಕರೆಯಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.