ADVERTISEMENT

ಚಾಕೊಲೇಟ್ ಇಲ್ಲದಿದ್ದರೂ ಪರವಾಗಿಲ್ಲ; ಸಂತ್ರಸ್ತರಿಗೆ ಕೂಡಿಟ್ಟ ಹಣ ನೀಡಿದ 9ರ ಬಾಲಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಫೆಬ್ರುವರಿ 2023, 14:09 IST
Last Updated 12 ಫೆಬ್ರುವರಿ 2023, 14:09 IST
ಟರ್ಕಿ ಭೂಕಂಪದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ನೆರವು ನೀಡುವ ಬಗ್ಗೆ ಬಾಲಕ ಬರೆದಿರುವ ಪತ್ರ
ಟರ್ಕಿ ಭೂಕಂಪದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ನೆರವು ನೀಡುವ ಬಗ್ಗೆ ಬಾಲಕ ಬರೆದಿರುವ ಪತ್ರ    

ಕಹ್ರಾಮನ್ಮಾರಾಸ್: ತಾನು ಕೂಡಿಟ್ಟ ಹಣವನ್ನು ಟರ್ಕಿ ಭೂಕಂಪದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ನೆರವು ನೀಡುವ ಮೂಲಕ 9 ವರ್ಷದ ಅಲ್‌ಪರ್‌ಸ್ಲಾನ್ ಇಫೆ ಗಮನ ಸೆಳೆದಿದ್ದಾನೆ.

ಕಳೆದ ವರ್ಷ ಸಂಭವಿಸಿದ್ದ ಭೂಕಂಪದಲ್ಲಿ ಇಫೆ ಬದುಕುಳಿದಿದ್ದ. ಕಳೆದ ವರ್ಷ ನವೆಂಬರ್‌ನಲ್ಲಿ ವಾಯುವ್ಯ ಡಚ್‌ ಪ್ರಾಂತ್ಯದಲ್ಲಿ 5.9 ತೀವ್ರತೆಯ ಭೂಕಂಪ ಸಂಭವಿಸಿದ್ದ ಸಂದರ್ಭದಲ್ಲಿ ಇಫೆಯನ್ನು ರಕ್ಷಿಸಲಾಗಿತ್ತು. ಟರ್ಕಿಯ ವಿಪತ್ತು ಮತ್ತು ತುರ್ತು ನಿರ್ವಹಣಾ ಪ್ರೆಸಿಡೆನ್ಸಿ (ಎಎಫ್‌ಎಡಿ) ಸ್ಥಾಪಿಸಿದ್ದ ತಾತ್ಕಾಲಿಕ ಶಿಬಿರದಲ್ಲಿ ಈತನನ್ನು ಆರೈಕೆ ಮಾಡಲಾಗಿತ್ತು.

ಇದೀಗ ಇಫೆ, ಟರ್ಕಿಯಲ್ಲಿ ಭೂಕಂಪದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಸಹಾಯ ಮಾಡುವ ಇಂಗಿತವನ್ನು ತನ್ನ ತಾಯಿ ಬಳಿ ವ್ಯಕ್ತಪಡಿಸಿದ್ದ. ಬಳಿಕ ತಾನು ಕೂಡಿಟ್ಟ ಹಣವನ್ನು ಡಚ್ ಪ್ರಾಂತ್ಯದ ವಿಪತ್ತು ನಿರ್ವಹಣಾ ಅಧಿಕಾರಿಗಳಿಗೆ ನೀಡಿದ್ದು, ಸಂತ್ರಸ್ತರಿಗೆ ತಲುಪಿಸುವಂತೆ ಮನವಿ ಮಾಡಿದ್ದಾನೆ.

ADVERTISEMENT

ಹಣದ ಜತೆಗೆ ಭಾವನಾತ್ಮಕ ಪತ್ರವೊಂದನ್ನು ಬರೆದಿರುವ ಇಫೆ, ‘ಡಚ್‌ನಲ್ಲಿ ಭೂಕಂಪವಾದಾಗ ನನಗೆ ತುಂಬಾ ಹೆದರಿಕೆಯಾಗಿತ್ತು. ನಮ್ಮ ಅನೇಕ ನಗರಗಳಲ್ಲಿ ಉಂಟಾಗುವ ಭೂಕಂಪನದ ಬಗ್ಗೆ ಕೇಳಿದಾಗಲೂ ನನಗೆ ಅದೇ ಭಯವಿತ್ತು. ಹಾಗಾಗಿ ನಮ್ಮ ಹಿರಿಯರು ಕೊಟ್ಟಿದ್ದ ಪಾಕೆಟ್ ಮನಿಯನ್ನು ಅಲ್ಲಿನ ಮಕ್ಕಳಿಗೆ ಕಳುಹಿಸಲು ನಿರ್ಧರಿಸಿದೆ’ ಎಂದು ವಿವರಿಸಿದ್ದಾನೆ.

‘ನಾನು ಚಾಕೊಲೇಟ್ ಖರೀದಿಸದಿದ್ದರೂ ಪರವಾಗಿಲ್ಲ. ಅಲ್ಲಿನ ಮಕ್ಕಳು ಚಳಿ ಮತ್ತು ಹಸಿವಿನಿಂದ ಇರಬಾರದು. ಅಲ್ಲಿನ ಮಕ್ಕಳಿಗೆ ನನ್ನ ಬಟ್ಟೆ, ಆಟಿಕೆಗಳನ್ನು ಕಳುಹಿಸುತ್ತೇನೆ’ ಎಂದು ಇಫೆ ಪತ್ರದಲ್ಲಿ ಉಲ್ಲೇಖಿಸಿದ್ದಾನೆ.

ಟರ್ಕಿ, ಸಿರಿಯಾದಲ್ಲಿ ಭಾರಿ ಭೂಕಂಪನದಿಂದ ಮೃತಪಟ್ಟವರ ಸಂಖ್ಯೆ ಭಾನುವಾರ 28,191ಕ್ಕೆ ಏರಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಹಲವು ಮಾನವೀಯ ಘಟನೆಗಳೂ ಅನಾವರಣಗೊಳ್ಳುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.