ADVERTISEMENT

9/11ರ ದಾಳಿಗೆ ಭದ್ರತಾ ವೈಫಲ್ಯ ಕಾರಣ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2011, 19:30 IST
Last Updated 17 ಸೆಪ್ಟೆಂಬರ್ 2011, 19:30 IST

ನ್ಯೂಯಾರ್ಕ್, (ಪಿಟಿಐ): ಯುನೈಟೆಡ್ ಏರ್‌ಲೈನ್ಸ್ ಸಂಸ್ಥೆಯ ಭದ್ರತಾ ಲೋಪದಿಂದಲೇ 9/11ರ ಭಯೋತ್ಪಾದಕ ದಾಳಿ ನಡೆಯಲು ಸಾಧ್ಯವಾಯಿತು ಎಂದು ಮ್ಯಾನ್‌ಹಟನ್ ಜಿಲ್ಲಾ ನ್ಯಾಯಾಲಯದಲ್ಲಿ ಹೂಡಲಾಗಿರುವ ಪ್ರಕರಣದಲ್ಲಿ ದೂರಲಾಗಿದೆ.

ಇಂಗ್ಲಿಷ್ ಮಾತನಾಡಲು ಬಾರದ ಹಾಗೂ ಇಂಗ್ಲಿಷ್ ಅರ್ಥ ಮಾಡಿಕೊಳ್ಳಲಾಗದ ಐವರು ಭದ್ರತಾ ಸಿಬ್ಬಂದಿ ಭಯೋತ್ಪಾದಕರು ವಿಮಾನವೇರಲು ಅನುಮತಿ ನೀಡಿದ್ದಾರೆ ಎಂದು ಮೊಕದ್ದಮೆಯ ದಾಖಲೆ ಪತ್ರದಲ್ಲಿ ಹೇಳಲಾಗಿದೆ.

ವಿಶ್ವ ವಾಣಿಜ್ಯ ಕೇಂದ್ರಕ್ಕೆ ಡಿಕ್ಕಿ ಹೊಡೆದ ಯುನೈಟೆಡ್ ಏರ್‌ಲೈನ್ಸ್ ಸಂಸ್ಥೆಯ ವಿಮಾನದಲ್ಲಿದ್ದ ಮಾರ್ಕ್ ಬೆವಿಸ್ ಕುಟುಂಬದ ಸದಸ್ಯರ ಪರವಾಗಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿರುವ ವಕೀಲರು ವಿಮಾನ ಸಂಸ್ಥೆಯ ಭದ್ರತಾ ತಪಾಸಣೆ ವೈಫಲ್ಯವೇ ಭಯೋತ್ಪಾದಕ ಕೃತ್ಯಕ್ಕೆ ಮೂಲ ಕಾರಣ ಎಂದು ದೂರಿದ್ದಾರೆ.

ದಾಳಿ ನಂತರ ದೋಷದಿಂದ ಅಥವಾ ವೈಫಲ್ಯದಿಂದಾದ ಸಾವಿಗೆ ಸಂಬಂಧಿಸಿದಂತೆ ಹೂಡಲಾಗಿದ್ದ ನೂರು ಪ್ರಕರಣಗಳ ಪೈಕಿ ಈಗ ಉಳಿದಿರುವ ಒಂದು ಪ್ರಕರಣದ ದಾಖಲೆಗಳು ಈಗ ಬಹಿರಂಗವಾಗಿದ್ದು, ವಿಮಾನ ಸಂಸ್ಥೆಯ ಭದ್ರತಾ ವೈಫಲ್ಯವನ್ನು ಮುಖ್ಯವಾಗಿ ಟೀಕಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.