ADVERTISEMENT

ಕೋವಿಡ್–19ನಿಂದ ಜಗತ್ತಿನಾದ್ಯಂತ 2.5 ಕೋಟಿ ಉದ್ಯೋಗ ನಷ್ಟ ಸಾಧ್ಯತೆ: ವಿಶ್ವಸಂಸ್ಥೆ

ಏಜೆನ್ಸೀಸ್
Published 19 ಮಾರ್ಚ್ 2020, 9:38 IST
Last Updated 19 ಮಾರ್ಚ್ 2020, 9:38 IST
ಉದ್ಯೋಗ ಕಡಿತ– ಸಾಂಕೇತಿಕ ಚಿತ್ರ
ಉದ್ಯೋಗ ಕಡಿತ– ಸಾಂಕೇತಿಕ ಚಿತ್ರ   

ವಿಶ್ವಸಂಸ್ಥೆ: ಕೊರೊನಾ ವೈರಸ್‌ ಸಾಂಕ್ರಾಮಿಕದಿಂದಾಗಿ ವಿಶ್ವದಾದ್ಯಂತ ಸುಮಾರು 2.5 ಕೋಟಿ ಉದ್ಯೋಗಗಳು ಕಡಿತಗೊಳ್ಳಬಹುದು ಎಂದು ವಿಶ್ವಸಂಸ್ಥೆ ಹೇಳಿದೆ.

ಕೋವಿಡ್‌–19ನಿಂದ ಜಾಗತಿಕವಾಗಿ ಕೆಲಸಗಳ ಮೇಲೆ ಉಂಟಾಗಿರುವ ಪರಿಣಾಮ ಮತ್ತು ಪ್ರತಿಕ್ರಿಯೆಗಳ ಕುರಿತು ಪ್ರಾಥಮಿಕ ವರದಿಯಲ್ಲಿ ವಿಶ್ವಸಂಸ್ಥೆ ಉದ್ಯೋಗಗಳ ಕುರಿತು ಪ್ರಸ್ತಾಪಿಸಿದೆ. ಸಂಸ್ಥೆಗಳಲ್ಲಿ ಉದ್ಯೋಗಿಗಳ ರಕ್ಷಿಸಿಸುವುದು, ಆರ್ಥಿಕತೆ ಮತ್ತು ಉದ್ಯೋಗ ಹೆಚ್ಚಳ ಹಾಗೂ ಕೆಲಸ ಮತ್ತು ಆದಾಯಗಳಿಗೆ ಬೆಂಬಲಿಸುವ ಸಮನ್ವಯಕಾರಿ ಕ್ರಮಗಳನ್ನು ಕೈಗೊಳ್ಳುವುದರಿಂದ ನಿರುದ್ಯೋಗ ತಪ್ಪಿಸಬಹುದು ಎಂದು ಸಲಹೆ ನೀಡಿದೆ.

ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ (ಐಎಲ್‌ಒ) ಪ್ರಕಾರ, ಸಾಮಾಜಿಕ ಭದ್ರತೆ ಹೆಚ್ಚಳ, ಕಾರ್ಯಾಚರಣೆ ಅವಧಿ ಕಡಿತಗೊಳಿಸುವುದು, ವೇತನ ಸಹಿತ ರಜೆ ಸೌಲಭ್ಯ ಹಾಗೂ ಸಣ್ಣ, ಕಿರು ಮತ್ತು ಮಧ್ಯಮ ಉದ್ಯಮಗಳಿಗೂ ತೆರಿಗೆ ಕಡಿತಗೊಳಿಸುವ ಕ್ರಮಗಳನ್ನು ಅನ್ವಯಿಸಬೇಕೆಂದುಸೂಚಿಸಿದೆ.

ADVERTISEMENT

ನಿರ್ದಿಷ್ಟ ಆರ್ಥಿಕ ವಲಯಗಳಿಗೆ ಹಣಕಾಸು ಸಹಕಾರ ನೀಡುವ ಪ್ರಸ್ತಾವನೆಯನ್ನೂ ನೀಡಿದೆ.

ಕೋವಿಡ್‌–19 ಸಾಂಕ್ರಾಮಿಕವಾಗಿರುವುದು ಆರ್ಥಿಕಮತ್ತು ಕಾರ್ಮಿಕಬಿಕ್ಕಟ್ಟು ಸೃಷ್ಟಿಸಿದ್ದು, ಜಗತ್ತಿನಾದ್ಯಂತ ನಿರುದ್ಯೋಗಿಗಳ ಸಂಖ್ಯೆ 2.5 ಕೋಟಿಯಷ್ಟು ಹೆಚ್ಚಳವಾಗಬಹುದು ಎಂದು ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ ಹೇಳಿದೆ.

2008–09ರ ಜಾಗತಿಕ ಆರ್ಥಿಕ ಬಿಕ್ಕಟ್ಟು ಪರಿಸ್ಥಿತಿಯಲ್ಲಿ ಕೈಗೊಂಡಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಮನ್ವಯಗೊಳಿಸಿದ ನೀತಿಗಳನ್ನು ಅನುಸರಿಸಿದರೆ, ಜಾಗತಿಕವಾಗಿ ನಿರುದ್ಯೋಗ ಪ್ರಮಾಣ ಕಡಿಮೆ ಮಾಡಬಹದು ಎಂದು ಸಲಹೆ ನೀಡಿದೆ.

2008–09ರಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟು ಸಂದರ್ಭದಲ್ಲಿ ನಿರುದ್ಯೋಗ ಪ್ರಮಾಣ 2.2 ಕೋಟಿ ಏರಿಕೆಯಾಗಿತ್ತು. ಈಗ ಕೋವಿಡ್‌–19 ಪ್ರಮಾಣ ಅಧಿಕವಾದರೆ, 2.47 ಕೋಟಿ ನಿರುದ್ಯೋಗ ಹೆಚ್ಚಳವಾಗಲಿದೆ ಹಾಗೂ ಸೋಂಕು ಪ್ರಮಾಣ ಇಳಿಕೆಯಾದರೆ ನಿರುದ್ಯೋಗ ಸಂಖ್ಯೆ 53 ಲಕ್ಷ ಹೆಚ್ಚಲಿದೆ ಎಂದುಐಎಲ್‌ಒ ಅಂದಾಜಿಸಿದೆ.

ನಿರುದ್ಯೋಗದಿಂದ ಆದಾಯ ಇಳಿಮುಖವಾಗಲಿದ್ದು, 860 ಬಿಲಿಯನ್‌ ಡಾಲರ್‌ನಿಂದ 3.4 ಟ್ರಿಲಿಯನ್‌ ಡಾಲರ್‌ನಷ್ಟು ಗಳಿಕೆ ಇಲ್ಲವಾಗಲಿದೆ. ಸರಕು ಸಾಗಣೆ ಮತ್ತು ಸೇವಾ ವಲಯದಲ್ಲಿಯೂ ಭಾರೀ ಇಳಿಕೆಯಾಗಿದೆ.

ಕೊರೊನಾ ವೈರಸ್‌ ಸೋಂಕು ಹರಡುವಿಕೆಯು ಜಗತ್ತಿನಾದ್ಯಂತ 8,809 ಜನರನ್ನು ಬಲಿ ಪಡೆದಿದೆ ಹಾಗೂ 157 ರಾಷ್ಟ್ರಗಳಲ್ಲಿ 2,18,631 ಮಂದಿ ಸೋಂಕಿತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.