ADVERTISEMENT

ಅಫ್ಘಾನಿಸ್ತಾನದಲ್ಲಿ ಕಾರು ಬಾಂಬ್ ಸ್ಫೋಟ, 8 ಜನರ ಸಾವು; ವಿಶ್ವಸಂಸ್ಥೆ ಖಂಡನೆ

ಪಿಟಿಐ
Published 13 ಮಾರ್ಚ್ 2021, 5:07 IST
Last Updated 13 ಮಾರ್ಚ್ 2021, 5:07 IST
ಅಫ್ಘಾನಿಸ್ತಾನದಲ್ಲಿ ಬಾಂಬ್ ಸ್ಫೋಟ: ರಾಯಿಟರ್ಸ್ ಸಂಗ್ರಹ ಚಿತ್ರ
ಅಫ್ಘಾನಿಸ್ತಾನದಲ್ಲಿ ಬಾಂಬ್ ಸ್ಫೋಟ: ರಾಯಿಟರ್ಸ್ ಸಂಗ್ರಹ ಚಿತ್ರ   

ಕಾಬೂಲ್: ಅಫ್ಘಾನಿಸ್ತಾನದ ಪಶ್ಚಿಮ ಭಾಗದ ಹೆರಾತ್ ಪ್ರಾಂತ್ಯದಲ್ಲಿ ಪ್ರಬಲ ಕಾರು ಬಾಂಬ್ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದು, 47 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಶುಕ್ರವಾರ ತಡರಾತ್ರಿ ನಡೆದ ಸ್ಫೋಟದಲ್ಲಿ 14 ಮನೆಗಳು ನಾಶವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಇದೆ. ಏಕೆಂದರೆ, ಗಾಯಗೊಂಡವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಪ್ರಾಂತೀಯ ಆಸ್ಪತ್ರೆಯ ವಕ್ತಾರ ರಫೀಕ್ ಶೆರ್ಜೈ ಹೇಳಿದ್ದಾರೆ.

ಮೃತಪಟ್ಟವರಲ್ಲಿ ಒಬ್ಬರು ಮತ್ತು ಗಾಯಗೊಂಡವರಲ್ಲಿ 11 ಮಂದಿ ಅಫ್ಘಾನ್ ಭದ್ರತಾ ಪಡೆಗಳ ಸಿಬ್ಬಂದಿಯಾಗಿದ್ದು, ಉಳಿದವರು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನಾಗರಿಕರು ಎಂದು ಆಂತರಿಕ ಸಚಿವಾಲಯದ ವಕ್ತಾರ ತಾರಿಕ್ ಏರಿಯನ್ ಹೇಳಿದ್ದಾರೆ.

ADVERTISEMENT

ಯಾವುದೇ ಸಂಘಟನೆ ಸ್ಫೋಟದ ಹೊಣೆ ಹೊತ್ತಿಲ್ಲ.

ದಾಳಿಯಾದ ಕೆಲವೇ ಗಂಟೆಗಳಲ್ಲಿ, ವಿಶ್ವಸಂಸ್ಥೆ ಭದ್ರತಾ ಮಂಡಳಿಯು ನ್ಯೂಯಾರ್ಕ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದು, ತಾಲಿಬಾನ್ ಮತ್ತು ಅಫ್ಘಾನ್ ಸರ್ಕಾರವು ಕತಾರ್‌ನಲ್ಲಿ ಮತ್ತೆ ಮತ್ತೆ ಮಾತುಕತೆ ನಡೆಸುತ್ತಿದ್ದರೂ ಸಹ ಅಫ್ಘಾನಿಸ್ತಾನದಲ್ಲಿ ನಾಗರಿಕರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ದಾಳಿಗಳಲ್ಲಿ ಹೆಚ್ಚಳವಾಗಿರುವುದನ್ನು ವಿಶ್ವಸಂಸ್ಥೆ ಖಂಡಿಸಿದೆ.

"ಈ ಭೀಕರ ದಾಳಿಗಳು ಪೌರಕಾರ್ಮಿಕರು, ನ್ಯಾಯಾಂಗ, ಮಾಧ್ಯಮ, ಆರೋಗ್ಯ ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಗುರಿಯಾಗಿಸಿವೆ, ಪ್ರಮುಖವಾಗಿ ಮಹಿಳೆಯರು, ಮಾನವ ಹಕ್ಕುಗಳನ್ನು ರಕ್ಷಿಸುವ ಮತ್ತು ಉತ್ತೇಜಿಸುವವರು, ಜನಾಂಗೀಯ ಮತ್ತು ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಲಾಗಿದೆ" ಎಂದು ಕೌನ್ಸಿಲ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.