ADVERTISEMENT

ಶಸ್ತ್ರಾಸ್ತ್ರಕ್ಕಾಗಿ ಅಮೆರಿಕವನ್ನು ಬೇಡಿದ ತಾಲಿಬಾನ್‌ ವಿರೋಧಿ ಹೋರಾಟಗಾರನ ಮಗ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಆಗಸ್ಟ್ 2021, 12:40 IST
Last Updated 19 ಆಗಸ್ಟ್ 2021, 12:40 IST
ಅಹ್ಮದ್ ಮಸೂದ್
ಅಹ್ಮದ್ ಮಸೂದ್   

ತಾಲಿಬಾನ್‌ನಿಂದ ಹತ್ಯೆಗೀಡಾದ ಹೋರಾಟಗಾರನ ಮಗನೊಬ್ಬ ತನಗೆ ಹೆಚ್ಚಿನ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಒದಗಿಸಬೇಕೆಂದು ಅಮೆರಿಕವನ್ನು ಕೇಳಿಕೊಂಡಿದ್ದಾನೆ. ಆ ಮೂಲಕ ತಾಲಿಬಾನ್‌ನಿಂದ ಹತ್ಯೆಯಾಗಿರುವ ತನ್ನ ತಂದೆಯ ಮಾರ್ಗದಲ್ಲಿಯೇ ಸಂರ್ಘರ್ಷ ನಡೆಯಲು ಇಚ್ಛಿಸಿದ್ದಾನೆ ಎಂದು 'ವಾಷಿಂಗ್ಟನ್‌ ಪೋಸ್ಟ್‌' ವರದಿ ಮಾಡಿದೆ.

ಅಫ್ಗಾನಿಸ್ತಾನದ ತಾಲಿಬಾನ್ ವಿರೋಧಿ ಹೋರಾಟಗಾರನಾಗಿದ್ದ ಶಾ ಮಸೂದ್ ಅವರ ಮಗ ಅಹ್ಮದ್ ಮಸೂದ್ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳಿಗಾಗಿ ಅಮೆರಿಕದ ಸಹಾಯ ಕೋರಿದ್ದಾನೆ. ಈ ಕುರಿತು ಯುಎಸ್‌ ಸರ್ಕಾರಕ್ಕೆ ಪತ್ರ ಬರೆದಿರುವ ಆತ, 'ಪ್ರಜಾತಂತ್ರದ ಉಳಿವಿನ ಸಂಘರ್ಷಕ್ಕೆ ಬೆನ್ನುಲುಬಾಗಿ ಅಮೆರಿಕ ನಿಲ್ಲಬಲ್ಲದು' ಎಂದು ತಿಳಿಸಿದ್ದಾನೆ.

'ನಾನು ಪಂಜ್‌ಶಿರ್ ಕಣಿವೆಯಿಂದ ಈ ಪತ್ರವನ್ನು ಬರೆಯುತ್ತಿದ್ದೇನೆ. ನನ್ನ ತಂದೆಯ ಹೋರಾಟದ ಹಾದಿಯನ್ನು ನಾನು ಅನುಸರಿಸುತ್ತೇನೆ. ನಮ್ಮ ಹೋರಾಟಗಾರರು ಮತ್ತೊಮ್ಮೆ ತಾಲಿಬಾನ್ ಅನ್ನು ಎದುರಿಸಲು ಸಿದ್ಧರಾಗಿದ್ದಾರೆ' ಎಂದು ಅಹ್ಮದ್ ಮಸೂದ್ ಹೇಳಿದ್ದಾನೆ.

ADVERTISEMENT

ಪಂಜ್‌ಶಿರ್‌ನ ಸಿಂಹ ಎಂದೇ ಖ್ಯಾತರಾಗಿದ್ದ ಆತನ ತಂದೆ ಶಾ ಮಸೂದ್ ಅವರನ್ನು 2001ರಲ್ಲಿ ಹತ್ಯೆ ಮಾಡಲಾಗಿತ್ತು. ಕಾಬೂಲ್‌ನ ಈಶಾನ್ಯದಲ್ಲಿರುವ ಕಣಿವೆಯಲ್ಲಿ ತಾಲಿಬಾನ್ ವಿರುದ್ಧ ಪ್ರಬಲ ಪ್ರತಿರೋಧವನ್ನು ಶಾ ಮಸೂದ್‌ ಒಡ್ಡಿದ್ದರು.

'ಅಫ್ಗಾನಿಸ್ತಾನದ ಸರ್ಕಾರ ಮತ್ತು ಸೈನಿಕರು ತಾಲಿಬಾನಿಗಳಿಗೆ ಶರಣಾಗಿರುವುದು ನಾಚಿಕೆಗೇಡಿನ ವಿಷಯವಾಗಿದೆ. ತಾಲಿಬಾನಿಗಳ ವಿರುದ್ಧ ಹೋರಾಡಲು ನಮಗೆ ಹೆಚ್ಚಿನ ಶಸ್ತ್ರಾಸ್ತ್ರಗಳು ಮತ್ತು ಗುಂಡುಗಳ ಅವಶ್ಯಕತೆ ಇದೆ. ಅವುಗಳನ್ನು ಅಮೆರಿಕ ಒದಗಿಸಬೇಕು' ಎಂದು ಮಸೂದ್ ಹೇಳಿದ್ದಾನೆ.

ಅಫ್ಗಾನಿಸ್ತಾನ ಸೇನೆಗೆ ಅಮೆರಿಕ ಪಡೆಗಳ ಬೆಂಬಲ ಕ್ಷೀಣಿಸುತ್ತಿದ್ದಂತೆ ಒಂದೇ ತಿಂಗಳಲ್ಲಿ ತಾಲಿಬಾನಿಗಳು ಮತ್ತೆ ಅಧಿಕಾರ ಸ್ಥಾಪಿಸಿದ್ದಾರೆ. 20 ವರ್ಷಗಳ ಬಳಿಕ ಅಫ್ಗಾನಿಸ್ತಾನ ತಾಲಿಬಾನಿಗಳ ಕೈವಶವಾಗಿದೆ. ಸೇನಾ ಪಡೆಗಳ ನಿಯೋಜನೆಗೆ ತಗಲುವ ವೆಚ್ಚವೂ ಸಹ ಯುದ್ಧ ಪೀಡಿತ ಭೂಮಿಯಿಂದ ಅಮೆರಿಕ ಹಿಂದೆ ಸರಿಯಲು ಕಾರಣ ಎಂದು ವಿಶ್ಲೇಷಿಸಲಾಗಿದೆ.

ಅಫ್ಗಾನಿಸ್ತಾನದ ಪಂಜ್‌ಶಿರ್ ಕಣಿವೆಗೆ ಪಲಾಯನ ಮಾಡುತ್ತಿರುವ ವಿರೋಧ ಪಕ್ಷದ ವ್ಯಕ್ತಿಗಳು, ‘ನಾರ್ದರನ್ ಅಲಯನ್ಸ್‌‘ ಬ್ಯಾನರ್ ಅಡಿಯಲ್ಲಿ ಸಶಸ್ತ್ರ ಪ್ರತಿರೋಧ ತೋರುವ ಬಗ್ಗೆ ಯೋಚಿಸುತ್ತಿದ್ದಾರೆ. ಇವರೆಲ್ಲ 2001ರ ಆಕ್ರಮಣದ ವೇಳೆ ಅಮೆರಿಕದೊಂದಿಗೆ ಮೈತ್ರಿ ಮಾಡಿಕೊಂಡಿದ್ದರು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.