ADVERTISEMENT

ಪಾರ್ಶ್ವವಾಯು ಚಿಕಿತ್ಸಾ ಸೌಲಭ್ಯ ಬಲಪಡಿಸಲು ಡಬ್ಲ್ಯುಎಚ್‌ಒ ಬದ್ಧ

ಪಿಟಿಐ
Published 28 ಅಕ್ಟೋಬರ್ 2021, 12:28 IST
Last Updated 28 ಅಕ್ಟೋಬರ್ 2021, 12:28 IST
ಡಾ.ಪೂನಂ ಖೇತ್ರಪಾಲ್ ಸಿಂಗ್
ಡಾ.ಪೂನಂ ಖೇತ್ರಪಾಲ್ ಸಿಂಗ್   

ನವದೆಹಲಿ: ‘ಕಡಿಮೆ ಮತ್ತು ಮಧ್ಯಮ ಆದಾಯ ಹೊಂದಿರುವ ದೇಶಗಳಲ್ಲಿ ಅಂದಾಜು ಶೇ 70ರಷ್ಟು ಪಾರ್ಶ್ವವಾಯು ಹಾಗೂ ಶೇ 87ರಷ್ಟು ಪಾರ್ಶ್ವವಾಯುಗೆ ಸಂಬಂಧಿಸಿದ ಕಾಯಿಲೆಗಳಿಂದ ಸಾವುಗಳುಂಟಾಗುತ್ತಿವೆ’ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಆಗ್ನೇಯ ಏಷ್ಯಾದ ಪ್ರಾದೇಶಿಕ ನಿರ್ದೇಶಕಿ ಡಾ.ಪೂನಂ ಖೇತ್ರಪಾಲ್ ಸಿಂಗ್ ಗುರುವಾರ ಹೇಳಿದ್ದಾರೆ.

‘ವಿಶ್ವ ಆರೋಗ್ಯ ಸಂಸ್ಥೆಯು ಆಗ್ನೇಯ ಏಷ್ಯಾದ ಎಲ್ಲಾ ದೇಶಗಳಲ್ಲೂ ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಪಾರ್ಶ್ವವಾಯು ತಡೆಗಟ್ಟಲು, ಚಿಕಿತ್ಸೆ ಮತ್ತು ಪಾರ್ಶ್ವವಾಯು ಸಂಬಂಧಿತ ಅಂಗವೈಕಲ್ಯಕ್ಕೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಬಲಪಡಿಸಲು ಬದ್ಧವಾಗಿದೆ’ ಎಂದು ಅವರು ವಿಶ್ವ ಪಾರ್ಶ್ವವಾಯು ದಿನಕ್ಕೂ (ಅ. 29) ಮುನ್ನ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಆಗ್ನೇಯ ಏಷ್ಯಾದ ಪ್ರದೇಶಗಳಲ್ಲಿ ಸಾಂಕ್ರಾಮಿಕವಲ್ಲದ ಕಾಯಿಲೆಗಳನ್ನು ತಡೆಗಟ್ಟುವ, ನಿಯಂತ್ರಿಸುವ (ಎನ್‌ಸಿಡಿ) ಮತ್ತು ಸಾರ್ವತ್ರಿಕ ಆರೋಗ್ಯ ರಕ್ಷಣೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ. 2016ರ ಕೊಲಂಬೊ ಘೋಷಣೆಗೆ ಅನುಗುಣವಾಗಿ ಪ್ರಾಥಮಿಕ ಹಂತದಲ್ಲಿ ಎನ್‌ಸಿಡಿಯ ಸೇವೆಯನ್ನು ವಿಸ್ತರಿಸಲಾಗುತ್ತಿದೆ’ ಎಂದೂ ಅವರು ಹೇಳಿದ್ದಾರೆ.

ADVERTISEMENT

‘ಪ್ರಾಥಮಿಕ ಹಂತದಲ್ಲಿಯೇ ಪಾರ್ಶ್ವವಾಯುವಿನ ಲಕ್ಷಣಗಳನ್ನು ಪತ್ತೆಹಚ್ಚುವುದರಿಂದ ಅದರಿಂದ ಉಂಟಾಗುವ ಪರಿಣಾಮಗಳನ್ನು ತಡೆಯಬಹುದು. ಸೂಕ್ತ ಚಿಕಿತ್ಸಾ ಸೌಲಭ್ಯ ಮತ್ತು ಜೀವನಶೈಲಿಯ ಬದಲಾವಣೆಯಿಂದ ಕನಿಷ್ಠ 50 ಪ್ರತಿಶತದಷ್ಟು ಪಾರ್ಶ್ವವಾಯು ಘಟನೆಗಳನ್ನು ತಡೆಯಬಹುದು. ಪಾರ್ಶ್ವವಾಯು ಚಿಕಿತ್ಸೆಗೆ ಸಂಬಂಧಿಸಿದ ಔಷಧಿಗಳನ್ನು ಡಬ್ಲ್ಯುಎಚ್‌ಒ ಅಗತ್ಯ ಔಷಧಿಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದೆ. ಇದನ್ನು ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿಯಲ್ಲೂ ಸೇರಿಸುವ ಅಗತ್ಯವಿದೆ’ ಎಂದೂ ಡಾ.ಪೂನಂ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.