ADVERTISEMENT

Ahmedabad Plane Crash: ವಿಶ್ವದ ಕೆಲವು ಪ್ರಮುಖ ವಿಮಾನ ದುರಂತಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಜೂನ್ 2025, 2:14 IST
Last Updated 13 ಜೂನ್ 2025, 2:14 IST
   
ಜಾಗತಿಕವಾಗಿ ಜನರ ನಡುವೆ ವಿಮಾನಯಾನ ಈಗ ಹೆಚ್ಚು ಜನಪ್ರಿಯವಾಗುತ್ತಿದೆ. ಭಾರತ ಸೇರಿದಂತೆ ಪ್ರಪಂಚದಾದ್ಯಂತ ವಿಮಾನಗಳಲ್ಲಿ ಸಂಚರಿಸುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ  ಜಾಸ್ತಿಯಾಗುತ್ತಿದೆ. ಅದಕ್ಕೆ ಪೂರಕವಾಗಿ ವಿಮಾನಗಳ ಹಾರಾಟದಲ್ಲೂ ಗಣನೀಯವಾಗಿ ಹೆಚ್ಚಳವಾಗಿದೆ. ಇದರ ನಡುವೆಯೇ, ವಿಮಾನಗಳು ಅಪಘಾತಕ್ಕೀಡಾಗುತ್ತಿರುವುದು ಹೆಚ್ಚುತ್ತಿದೆ. 2023ಕ್ಕೆ ಹೋಲಿಸಿದರೆ, 2024ರಲ್ಲಿ ವಿಮಾನ ಅಪಘಾತಗಳು ಹೆಚ್ಚಾಗಿವೆ ಎಂದು ಐಎಟಿಎ ವಾರ್ಷಿಕ ಸುರಕ್ಷತಾ ವರದಿ–2024 ಹೇಳಿದೆ.

ವಿಶ್ವದ ಕೆಲವು ಪ್ರಮುಖ ವಿಮಾನ ದುರಂತಗಳು

2020, ಜ.8: ಉಕ್ರೇನ್ ಏರ್‌ಲೈನ್ಸ್ ವಿಮಾನವು ಇರಾನ್‌ ರಾಜಧಾನಿ ಟೆಹರಾನ್‌ನಿಂದ ಟೇಕ್ ಆಫ್ ಆದ ಕೆಲ ಹೊತ್ತಿನಲ್ಲೇ ಪತನಗೊಂಡಿತ್ತು. ವಿಮಾನದಲ್ಲಿದ್ದ 176 ಮಂದಿ ಸಾವಿಗೀಡಾಗಿದ್ದರು. ತಾನೇ ವಿಮಾನವನ್ನು ಹೊಡೆದುರುಳಿಸಿದ್ದಾಗಿ ಇರಾನ್ ಸರ್ಕಾರ ನಂತರ ಒಪ್ಪಿಕೊಂಡಿತ್ತು

2019, ಮಾ.10: ಇಥಿಯೋಪಿಯಾ ಏರ್‌ಲೈನ್‌ನ ಬೋಯಿಂಗ್ 737 ಮ್ಯಾಕ್ಸ್ ವಿಮಾನವು ಅಡೀಸ್ ಅಬಾಬಾದಿಂದ ಟೇಕ್‌ ಆಫ್ ಆದ ಆರು ನಿಮಿಷಗಳ ನಂತರ ಪತನಗೊಂಡಿತ್ತು. ವಿಮಾನದಲ್ಲಿದ್ದ 157 ಮಂದಿ ಮೃತಪಟ್ಟಿದ್ದರು

2018 ಅ.29: ಲಯನ್ ಏರ್‌ನ ಬೋಯಿಂಗ್ 737 ಮ್ಯಾಕ್ಸ್ ವಿಮಾನವು ಜಕಾರ್ತಾದಿಂದ ಹೊರಟ ಕೆಲವೇ ಕ್ಷಣಗಳಲ್ಲಿ ಜಾವಾ ಸಮುದ್ರದಲ್ಲಿ ಪತನಗೊಂಡಿತ್ತು. ಅದರಲ್ಲಿದ್ದ 189 ಮಂದಿ ಸಾವಿಗೀಡಾಗಿದ್ದರು

ADVERTISEMENT

2018 ಮೇ 18: ಹವಾನಾದ ಜೋಸ್ ಮಾರ್ಟಿ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಬೋಯಿಂಗ್ 737 ವಿಮಾನವು ಪತನಗೊಂಡಿತ್ತು. ವಿಮಾನದಲ್ಲಿದ್ದವರ ಪೈಕಿ 112 ಮಂದಿ ಸಾವಿಗೀಡಾದರೆ, ಒಬ್ಬರು ಮಾತ್ರ ಬದುಕುಳಿದಿದ್ದರು

2018 ಏ.11: ಅಲ್ಜೀರಿಯಾದ ರಾಜಧಾನಿ ಅಲ್ಜೀರ್ಸ್‌ನಿಂದ ಹೊರಟ ಸೇನಾ ವಿಮಾನ ಪತನಗೊಂಡು 257 ಮಂದಿ ಮೃತಪಟ್ಟಿದ್ದರು

2016, ನ.28: ಬ್ರೆಜಿಲ್‌ನ ಕ್ಲಬ್‌ವೊಂದರ ಫುಟ್‌ಬಾಲ್ ತಂಡವನ್ನು ಒಯ್ಯುತ್ತಿದ್ದ ವಿಮಾನವು ಇಂಧನ ಖಾಲಿ ಆಗಿದ್ದರಿಂದಾಗಿ ಕೊಲಂಬಿಯಾದ ಮೆಡೆಲ್ಲಿನ್ ಬಳಿ ಪತನಗೊಂಡಿತ್ತು. ಆಟಗಾರರು ಸೇರಿ 71 ಮಂದಿ ಮೃತಪಟ್ಟಿದ್ದರು

2015, ಅ.31: ರಷ್ಯನ್ ಏರ್‌ಲೈನ್ ಕೊಗಲಿಮೇವಿಯಾ ಕಾರ್ಯಾಚರಿಸುವ ಏರ್‌ಬಸ್ ಎ321 ವಿಮಾನವು ಶರ್ಮ್ ಅಲ್ ಶೇಖ್‌ನಿಂದ ಟೇಕ್‌ ಆಫ್ ಆದ 22 ಗಂಟೆಗಳ ನಂತರ ಪತನಗೊಂಡಿತ್ತು. ಅದರಲ್ಲಿದ್ದ 224 ಮಂದಿ ಮೃತರಾಗಿದ್ದರು. ಸಿರಿಯಾ ಮೇಲೆ ರಷ್ಯಾ ದಾಳಿ ಮಾಡಿದ್ದಕ್ಕೆ ಪ್ರತಿಯಾಗಿ ಈ ಕೃತ್ಯ ಎಸಗಿದ್ದಾಗಿ ಇಸ್ಲಾಮಿಕ್ ಸ್ಟೇಟ್ ಹೇಳಿಕೊಂಡಿತ್ತು

2014 ಜು.17: ಮಲೇಷ್ಯಾ ಏರ್‌ಲೈನ್ಸ್‌ನ ಎಂಎಚ್‌17 ಪೂರ್ವ ಉಕ್ರೇನ್‌ನ ಗ್ರಾಬೋವ್‌ ಸನಿಹ ಪತನಗೊಂಡಿತ್ತು. ಅದರಲ್ಲಿದ್ದ 298 ಮಂದಿ ಸಾವಿಗೀಡಾಗಿದ್ದರು. ರಷ್ಯಾ ಬೆಂಬಲಿತ ಬಂಡುಕೋರರು ಘಟನೆಗೆ ಕಾರಣ ಎನ್ನುವ ಆರೋಪಗಳು ಕೇಳಿಬಂದವು

2014, ಮಾ. 8: ಕೌಲಾಲಂಪುರದಿಂದ ಬೀಜಿಂಗ್‌ಗೆ ಹೊರಟಿದ್ದ ಮಲೇಷ್ಯಾ ಏರ್‌ಲೈನ್ಸ್‌ನ ಎಂಎಚ್‌370 ವಿಮಾನವು ಕಣ್ಮರೆಯಾಗಿತ್ತು. ಅದರಲ್ಲಿ 239 ಜನರಿದ್ದರು ಕಣ್ಮರೆಯು ವಿಮಾನಯಾನ ಇತಿಹಾಸದಲ್ಲಿ ಒಂದು ನಿಗೂಢವಾಗಿಯೇ ಉಳಿದಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.