ADVERTISEMENT

ಪಾಕ್ ನೂತನ ಪ್ರಧಾನಿ ಆಯ್ಕೆಗೆ ಬಹಿಷ್ಕಾರ: ಪಿಟಿಐ ಸಂಸದರು ರಾಜೀನಾಮೆಗೆ ನಿರ್ಧಾರ

ಪಿಟಿಐ
Published 11 ಏಪ್ರಿಲ್ 2022, 11:20 IST
Last Updated 11 ಏಪ್ರಿಲ್ 2022, 11:20 IST
ಇಮ್ರಾನ್ ಖಾನ್ ಬೆಂಬಲಿಗರ ಪ್ರತಿಭಟನೆ: ಪಿಟಿಐ ಚಿತ್ರ
ಇಮ್ರಾನ್ ಖಾನ್ ಬೆಂಬಲಿಗರ ಪ್ರತಿಭಟನೆ: ಪಿಟಿಐ ಚಿತ್ರ   

ಇಸ್ಲಾಮಾಬಾದ್: ಪಾಕಿಸ್ತಾನದ ನೂತನ ಪ್ರಧಾನಿ ಆಯ್ಕೆ ಕಸರತ್ತು ಚುರುಕು ಪಡೆದಿರುವ ಬೆನ್ನಲ್ಲೇ ಮತದಾನವನ್ನು ಬಹಿಷ್ಕರಿಸಲು ಪಿಟಿಐ (ಪಾಕಿಸ್ತಾನ್‌ ತೆಹ್ರಿಕ್‌ ಇ ಇನ್ಸಾಫ್‌) ಪಕ್ಷವು ನಿರ್ಧರಿಸಿದೆ. ಎಲ್ಲ ಸಂಸದರು ರಾಷ್ಟ್ರೀಯ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಆಪ್ತ ಫವಾದ್ ಚೌಧರಿ ಸೋಮವಾರ ತಿಳಿಸಿದ್ದಾರೆ.

ಇಮ್ರಾನ್ ಖಾನ್ ಸರ್ಕಾರದಲ್ಲಿ ಮಾಹಿತಿ ಸಚಿವರಾಗಿದ್ದ ಚೌಧರಿ, ನಾವು ನೂತನ ಪ್ರಧಾನಿ ಆಯ್ಕೆ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಹೇಳಿದ್ದಾರೆ.

‘ಪಿಟಿಐ (ಪಾಕಿಸ್ತಾನ್‌ ತೆಹ್ರಿಕ್‌ ಇ ಇನ್ಸಾಫ್‌) ಪಕ್ಷದ ಎಲ್ಲ ಸಂಸದರು ರಾಷ್ಟ್ರೀಯ ಸಂಸತ್ತಿಗೆ ರಾಜೀನಾಮೆ ನೀಡಲು ನಮ್ಮ ಪಕ್ಷದ ಸಂಸದೀಯ ಸಮಿತಿ ನಿರ್ಧರಿಸಿದೆ. ಇಂದೇ ನಮ್ಮ ಪಕ್ಷದ ಎಲ್ಲ ಸಂಸದರು ರಾಜೀನಾಮೆ ಸಲ್ಲಿಸಲಿದ್ದಾರೆ. ನಾವು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತೇವೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ADVERTISEMENT

ಇಮ್ರಾನ್ ಖಾನ್ ಸಹ ತಮ್ಮ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ಜಿಯೊ ಟಿವಿ ವರದಿ ಮಾಡಿದೆ.

‘ಯಾವುದೇ ಸಂದರ್ಭದಲ್ಲೂ ನಾವು ಈ ಸಂಸತ್ತಿನಲ್ಲಿ ಕೂರುವುದಿಲ್ಲ’ ಎಂದು ಇಮ್ರಾನ್ ಖಾನ್ ಹೇಳಿರುವುದಾಗಿ ವರದಿಯಾಗಿದೆ.

‘ಸರ್ಕಾರದ ಚುಕ್ಕಾಣಿ ಹಿಡಿಯಲು ಯತ್ನಿಸುತ್ತಿರುವವರ ಮೇಲೆ ಒತ್ತಡ ತರಲು ನಾವು ಈ ನಿರ್ಧಾರ ಕೈಗೊಂಡಿದ್ದೇವೆ. ಅವರನ್ನು ಮುಂದುವರಿಯಲು ಬಿಡುವುದಿಲ್ಲ’ಎಂದು ಖಾನ್ ಗುಡುಗಿರುವುದಾಗಿ ವರದಿಯಾಗಿದೆ.

ಆದರೆ, ಪಕ್ಷದ ಹಲವು ಸಂಸದರು ರಾಜೀನಾಮೆಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ನಾನು ಒಂಟಿಯಾದರೂ ಸರಿ ರಾಜೀನಾಮೆ ನೀಡುತ್ತೇನೆ ಎಂದು ಇಮ್ರಾನ್ ಖಾನ್ ಹೇಳಿರುವುದಾಗಿ ವರದಿಯಾಗಿದೆ.

ಪಾಕಿಸ್ತಾನ್ ಮುಸ್ಲಿಂ ಲೀಗ್– ನವಾಜ್(ಪಿಎಂಎಲ್–ಎನ್) ಪಕ್ಷದ ಅಧ್ಯಕ್ಷ ಶಹ್ಬಾಜ್ ಷರೀಫ್ ಮತ್ತು ಮಾಜಿ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಪ್ರಧಾನಿ ಹುದ್ದೆಯ ರೇಸ್‌ನಲ್ಲಿದ್ದಾರೆ.

ಅವಿಶ್ವಾಸ ನಿರ್ಣಯದ ಮೂಲಕ ಪಾಕಿಸ್ತಾನ ಪ್ರಧಾನಿ ಹುದ್ದೆಯಿಂದ ಇಮ್ರಾನ್ ಖಾನ್ ಅವರನ್ನು ಕೆಳಗಿಳಿಸಿದ ಬಳಿಕ ಭಾನುವಾರದಿಂದ ನೂತನ ಪ್ರಧಾನಿ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.