ADVERTISEMENT

ಅಮೆರಿಕ ವರ್ಣಭೇದ ನೀತಿಯ ರಾಷ್ಟ್ರವಲ್ಲ: ನಿಕ್ಕಿ ಹಾಲೆ

ರಿಪಬ್ಲಿಕನ್ ಪಕ್ಷದ ನಾಯಕಿ ನಿಕ್ಕಿ ಹಾಲೆ ಪ್ರತಿಪಾದನೆ

ಪಿಟಿಐ
Published 25 ಆಗಸ್ಟ್ 2020, 10:26 IST
Last Updated 25 ಆಗಸ್ಟ್ 2020, 10:26 IST
ನಿಕ್ಕಿ ಹಾಲೆ
ನಿಕ್ಕಿ ಹಾಲೆ   

ವಾಷಿಂಗ್ಟನ್:'ಅಮೆರಿಕವನ್ನು ವರ್ಣಭೇದ ನೀತಿಯ ರಾಷ್ಟ್ರ' ಎಂದಿರುವ ಡೆಮಾಕ್ರಟಿಕ್ ಪಕ್ಷದ ಹೇಳಿಕೆಯನ್ನು ವಿರೋಧಿಸಿದ ಭಾರತ ಮೂಲದ ಅಮೆರಿಕನ್‌ ರಿಪಬ್ಲಿಕ್ ಪಕ್ಷದ ನಾಯಕಿ ನಿಕ್ಕಿ ಹಾಲೆ, 'ಈ ರಾಷ್ಟ್ರ ನನಗೆ ಎಂದೂ ಆ ರೀತಿಯಾಗಿ ಕಂಡಿಲ್ಲ’ ಎಂದು ಹೇಳಿದರು.

ನಡೆಯುತ್ತಿರುವ ರಿಪಬ್ಲಿಕನ್‌ ಪಕ್ಷದ ವರ್ಚುವಲ್ ಸಮಾವೇಶದಲ್ಲಿ ಮಾತನಾಡಿದ ಅವರು,ತಾವು ಮತ್ತು ತಮ್ಮ ಕುಟುಂಬ ಅಮೆರಿಕದಲ್ಲಿ ಬೆಳೆದ ರೀತಿಯನ್ನೇ ಭಾಷಣದಲ್ಲಿ ನಿರೂಪಿಸುತ್ತಾ, ತಮ್ಮ ಮಾತುಗಳಿಗೆ ನಿಕ್ಕಿ ಹಾಲೆ ಸ್ಪಷ್ಟನೆ ನೀಡಿದರು.

'ಭಾರತದಿಂದ ಅಮೆರಿಕಕ್ಕೆ ವಲಸೆ ಬಂದಾಗ ನಮ್ಮ ಕುಟುಂಬದವರು ಅಮೆರಿಕದ ದಕ್ಷಿಣ ಭಾಗದಲ್ಲಿರುವ ಸಣ್ಣ ಪಟ್ಟಣವೊಂದರಲ್ಲಿ ನೆಲೆಸಿದ್ದರು. ಆರಂಭದಲ್ಲಿ ನನ್ನ ಕುಟುಂಬದವರೂ ತಾರತಮ್ಯದ ಕಷ್ಟವನ್ನು ಎದುರಿಸಿದ್ದಾರೆ. ಆದರೆ, ನಮ್ಮ ತಂದೆ ತಾಯಿ ಆ ತಾರತಮ್ಯದ ಕೊರತೆ ಮತ್ತು ದ್ವೇಷವನ್ನು ಎಂದೂ ಮುಂದುವರಿಸಲಿಲ್ಲ’ ಎಂದರು.

ADVERTISEMENT

'ನಾನು ಭಾರತದಿಂದ ವಲಸೆ ಬಂದಿರುವ ಹೆಮ್ಮೆಯ ದಂಪತಿಯ ಮಗಳು. ನನ್ನ ತಾಯಿ ಇಲ್ಲಿ ಯಶಸ್ವಿ ಉದ್ಯಮ ಕಟ್ಟಿದ್ದಾರೆ. ನನ್ನ ತಂದೆ ಮೂವತ್ತು ವರ್ಷಗಳಿಂದ ಕಪ್ಪು ಜನಾಂಗದವರೇ ಹೆಚ್ಚಾಗಿ ಓದುವ ಕಾಲೇಜಿನಲ್ಲಿ ಪಾಠ ಮಾಡುತ್ತಿದ್ದಾರೆ. ದಕ್ಷಿಣ ಕೊರೊಲಿನಾದ ಜನ ನನ್ನನ್ನು ಮೊದಲ ಅಲ್ಪಸಂಖ್ಯಾತ ಸಮುದಾಯದ ಹಾಗೂ ಮೊದಲ ಮಹಿಳಾ ರಾಜ್ಯಪಾಲರನ್ನಾಗಿ ಆಯ್ಕೆ ಮಾಡಿದ್ದಾರೆ. ನನ್ನ ತಂದೆ ಪೇಟ ತೊಟ್ಟರೆ, ತಾಯಿ ಸೀರೆ ಉಡುತ್ತಾರೆ. ನಾನು ಕಪ್ಪು ಮತ್ತು ಬಿಳಿಯ ಜಗತ್ತಿನಲ್ಲಿ ಹುಟ್ಟಿದ ಕಂದು ಬಣ್ಣದ ಹುಡುಗಿ’ ಎಂದು ಹೇಳಿದರು.

ಅಮೆರಿಕ ಈಗ ಪ್ರಗತಿಯತ್ತ ಹೆಜ್ಜೆ ಇಟ್ಟಿದೆ. ಈ ರಾಷ್ಟ್ರವನ್ನು ಮತ್ತಷ್ಟು ಪ್ರಗತಿಯತ್ತ ಕೊಂಡೊಯ್ಯುವುದಕ್ಕೆ ಇದು ಉತ್ತಮ ಸಮಯ. ಆದರೆ, ಈ ಸಂದರ್ಭದಲ್ಲಿ ಡೆಮಾಕ್ರಟಿಕ್ ಪಕ್ಷದವರು ಅದಕ್ಕೆ ಆಸ್ಪದ ನೀಡದಂತೆ ವರ್ತಿಸುತ್ತಿದ್ದಾರೆ’ ಎಂದು ಡೆಮಾಕ್ರಟಿಕ್ ಪಕ್ಷದ ವಿರುದ್ಧ ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.