ADVERTISEMENT

ಅಮೆರಿಕಾ: ವೈಟ್‌‌ಹೌಸ್ ಸಮೀಪವೇ ಕಪ್ಪುವರ್ಣೀಯರ ಪ್ರತಿಭಟನೆ, ಅಶ್ರುವಾಯು ಪ್ರಯೋಗ

ಏಜೆನ್ಸೀಸ್
Published 1 ಜೂನ್ 2020, 7:55 IST
Last Updated 1 ಜೂನ್ 2020, 7:55 IST
ವೈಟ್‌‌ಹೌಸ್ ಸಮೀಪ ಪಾರ್ಕ್ ಒಂದರಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಸಿಡಿಸಿರುವುದು.
ವೈಟ್‌‌ಹೌಸ್ ಸಮೀಪ ಪಾರ್ಕ್ ಒಂದರಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಸಿಡಿಸಿರುವುದು.   

ವಾಷಿಂಗ್ಟನ್: ಇಲ್ಲಿ ನಡೆಯುತ್ತಿರುವ ಜನಾಂಗೀಯ ಕಲಹ ಹಿಂಸಾಚಾರಕ್ಕೆ ತಿರುಗಿದ್ದು, ಭಾನುವಾರ ತಡರಾತ್ರಿ ಪ್ರತಿಭಟನಾಕಾರರು ವೈಟ್‌ಹೌಸ್ ಸಮೀಪದ ಪಾರ್ಕ್ ಮುಂದೆ ಪ್ರತಿಭಟನೆ ನಡೆಸಲು ಮುಂದಾಗಿದ್ದು, ಪೊಲೀಸರು ಅಶ್ರುವಾಯು ಸಿಡಿಸಿ, ಪೆಪ್ಪರ್ ಸ್ಪ್ರೇ ಮಾಡಿ ಉದ್ರಿಕ್ತರನ್ನು ಚದುರಿಸಲು ಯತ್ನಿಸಿದ್ದಾರೆ.

ಐದು ರಾತ್ರಿಯ ಗಲಭೆಯನ್ನು ಟ್ರಂಪ್ ಆಡಳಿತವು ದೇಶೀಯ ಭಯೋತ್ಪಾದಕರು ಎಂದು ಬ್ರ್ಯಾಂಡಿಂಗ್ ಮಾಡಿದ್ದರಿಂದ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಘರ್ಷಣೆಗಳು ಹೆಚ್ಚಿದ್ದು, ಲೂಟಿಗಳು ನಡೆಯಲು ಕಾರಣವಾಗಿದೆ ಎನ್ನಲಾಗಿದೆ.

ವೈಟ್‌ಹೌಸ್ ಸಮೀಪ ಇರುವ ಉದ್ಯಾನವನದಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಘರ್ಷಣೆಗಳು ಪುನರಾವರ್ತನೆಯಾಗಿವೆ. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಬೆಂಕಿ ಹಚ್ಚಿ ನಾಶಪಡಿಸಲು ಯತ್ನಿಸಿದಾಗ ಅಶ್ರುವಾಯು ಸಿಡಿಸಿದರಲ್ಲದೆ, ಪೆಪ್ಪರ್ ಸ್ಪ್ರೇ ಮಾಡಿ ಉದ್ರಿಕ್ತರನ್ನು ನಿಯಂತ್ರಣಕ್ಕೆ ತರಲು ಯತ್ನಿಸಿದ್ದಾರೆ.

ADVERTISEMENT

ಸ್ಥಳೀಯ ರಾಜಕೀಯ ಮುಖಂಡರು ಎಲ್ಲಾ ನಾಗರಿಕರಲ್ಲಿ ಕಾನೂನು ಕೈಗೆತ್ತಿಕೊಳ್ಳದಂತೆ ಮನವಿ ಮಾಡಿದ್ದಾರೆ. ಇದಲ್ಲದೆ, ವಾಷಿಂಗ್ಟನ್, ಲಾಸ್ ಏಂಜಲೀಸ್, ಹೂಸ್ಟನ್ ನಗರಗಳಲ್ಲಿ ರಾತ್ರಿ ಕರ್ಫ್ಯೂ ಜಾರಿ ಮಾಡಿದ್ದಾರೆ.

ಈ ನಡುವೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕಪ್ಪು ವರ್ಣೀಯ ಮಹಿಳೆ ಮುನಾ ಅಬ್ಡಿ, ನಮಗೆ ಕಪ್ಪು ಪುತ್ರರು, ಕಪ್ಪು ಸಹೋದರರು, ಕಪ್ಪು ಸ್ನೇಹಿತರು ಇದ್ದಾರೆ, ಅವರು ಸಾಯುವುದನ್ನು ನಾವು ಬಯಸುವುದಿಲ್ಲ. ಇದು ನಡೆಯುವುದರಿಂದ ನಾವು ಬೇಸತ್ತಿದ್ದೇವೆ, ನಾವು ದಬ್ಬಾಳಿಕೆಯಿಂದ ಬೇಸತ್ತಿದ್ದೇವೆ ಎಂದಿದ್ದಾರೆ. ಅಲ್ಲದೆ, ತನ್ನ ಮೂರು ವರ್ಷದ ಮಗನ ಜೊತೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಈ ನಡುವೆ ವಾಷಿಂಗ್ಟನ್ ಮೇಯರ್ ರಾತ್ರಿ 11 ಗಂಟೆಯಿಂದ ಬೆಳಗಿನ 6 ಗಂಟೆಯವರೆಗೆ ಕರ್ಫ್ಯೂ ಜಾರಿಗೊಳಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಪ್ರತಿಭಟನೆಕಾರರನ್ನು ಎದುರುಗೊಳ್ಳದೆ ಗುಪ್ತ ಮಾರ್ಗದ ಮೂಲಕ ವೈಟ್‌ಹೌಸ್ ಪ್ರವೇಶಿಸುತ್ತಿದ್ದಾರೆ. ಸೀಕ್ರೆಟ್ ಏಜೆಂಟ್‌ರ ಭದ್ರತೆ ಮೂಲಕ ಟ್ರಂಪ್ ತಮ್ಮ ಆಡಳಿತ ನಡೆಸುತ್ತಿದ್ದಾರೆ. ಇತ್ತ ಹಲವೆಡೆ ಉದ್ರಿಕ್ತ ಜನರು ಅಂಗಡಿ ಶಾಪ್‌ಗಳನ್ನು ಲೂಟಿ ಮಾಡುತ್ತಿದ್ದಾರೆ. ಕಪ್ಪುವರ್ಣಿಯನೆಂದು ತಿಳಿದು ಜಾರ್ಜ್ ಫ್ಲಾಯ್ಡ್ ಎಂಬಾತನನ್ನು ಬಿಳಿಯ ಪೊಲೀಸ್ ಅಧಿಕಾರಿಯೊಬ್ಬ ಕುತ್ತಿಗೆ ಮೇಲೆ ಕಾಲು ಹಾಕಿ ತುಳಿದು ಕೊಲೆ ಮಾಡಿರುವ ವಿಡಿಯೋ ವೈರಲ್ ಆಗಿದ್ದು ಇಷ್ಟೆಲ್ಲಾ ಪ್ರತಿಭಟನೆ ತೀವ್ರಗೊಳ್ಳಲು ಕಾರಣ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.