ADVERTISEMENT

ದಲೈಲಾಮಾ ಆಯ್ಕೆಯ ಹಕ್ಕು ಚೀನಾಕ್ಕಿಲ್ಲ: ಅಮೆರಿಕ

ಪಿಟಿಐ
Published 18 ನವೆಂಬರ್ 2020, 7:28 IST
Last Updated 18 ನವೆಂಬರ್ 2020, 7:28 IST
14ನೇ ದಲೈಲಾಮಾ 
14ನೇ ದಲೈಲಾಮಾ    

ವಾಷಿಂಗ್ಟನ್‌: ‘ಮುಂದಿನ ದಲೈಲಾಮಾ ಆಯ್ಕೆಯ ಹಕ್ಕು ಚೀನಾಕ್ಕಿಲ್ಲ. ಧರ್ಮಶಾಸ್ತ್ರದ ಆಧಾರವೂ ಆ ದೇಶದ ಬಳಿ ಇಲ್ಲ’ ಎಂದು ಅಮೆರಿಕದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ರಾಯಭಾರಿ ಸ್ಯಾಮುಯೆಲ್‌ ಡಿ ಬ್ರೌನ್‌ಬ್ಯಾಕ್‌ ತಿಳಿಸಿದ್ದಾರೆ.

‘ನಾನು ಅಕ್ಟೋಬರ್‌ನಲ್ಲಿ ಭಾರತದಲ್ಲಿರುವ ಧರ್ಮಶಾಲಾಕ್ಕೆ ಭೇಟಿ ನೀಡಿದ್ದೆ. ಅಲ್ಲಿರುವ ಟಿಬೆಟ್‌ ಸಮುದಾಯದವರ ಜೊತೆ ಚರ್ಚಿಸಿದ್ದೆ. ಚೀನಾವು ಮುಂದಿನ ದಲೈಲಾಮಾ ಅವರನ್ನು ಆಯ್ಕೆ ಮಾಡುವುದನ್ನು ಅಮೆರಿಕ ವಿರೋಧಿಸಲಿದೆ ಎಂಬ ವಿಷಯವನ್ನೂ ಅವರಿಗೆ ತಿಳಿಸಿದ್ದೆ’ ಎಂದು ಮಂಗಳವಾರ ಕಾನ್ಫರೆನ್ಸ್‌ ಕಾಲ್‌ನಲ್ಲಿ ಎದುರಾದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದ್ದಾರೆ.

‘ದಲೈಲಾಮಾ ಆಯ್ಕೆಯ ಹಕ್ಕು ಚೀನಾಕ್ಕಿಲ್ಲ. ಟಿಬೆಟ್‌ನ ಬೌದ್ಧರು ಶತಮಾನಗಳಿಂದಲೂ ತಮ್ಮ ಧರ್ಮಗುರುವನ್ನು ಆಯ್ಕೆ ಮಾಡುತ್ತಾ ಬಂದಿದ್ದಾರೆ. ಮುಂದಿನ ದಲೈಲಾಮಾ ಆಯ್ಕೆಯ ಹಕ್ಕು ಇರುವುದು ಅವರಿಗೆ ಮಾತ್ರ’ ಎಂದಿದ್ದಾರೆ.

ADVERTISEMENT

‘ಎಲ್ಲಾ ಸಮುದಾಯಗಳೂ ತಮ್ಮ ಧರ್ಮಗುರುವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಹೊಂದಿವೆ. ಅದನ್ನು ಅಮೆರಿಕವೂ ಬೆಂಬಲಿಸಲಿದೆ. ದಲೈಲಾಮಾ ಆಯ್ಕೆಯ ಹಕ್ಕು ತಮಗಿದೆ ಎಂದು ಚೀನಾದ ಕಮ್ಯುನಿಷ್ಟ್‌ ಪಕ್ಷ ಪ್ರತಿಪಾದಿಸುತ್ತಿದೆ. ಇದನ್ನು ನಾವು ಒಪ್ಪುವುದಿಲ್ಲ’ ಎಂದೂ ಅವರು ನುಡಿದಿದ್ದಾರೆ.

14ನೇ ದಲೈಲಾಮಾಗೆ ಈಗ 85 ವರ್ಷ ವಯಸ್ಸು. ಅವರು ಭಾರತದಲ್ಲೇ ನೆಲೆಸಿದ್ದಾರೆ.1.60 ಲಕ್ಷಕ್ಕೂ ಅಧಿಕ ಮಂದಿ ಟಿಬೆಟಿಯನ್ನರು ಭಾರತದಲ್ಲಿ ವಾಸವಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.