ADVERTISEMENT

ರಾಯಭಾರಿ ಸಂಧುಗೆ ಅಡ್ಡಿಪಡಿಸಿದವರ ವಿರುದ್ಧ ಕ್ರಮಕ್ಕೆ ಸಿಖ್‌ ಸಂಘಟನೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2023, 13:04 IST
Last Updated 28 ನವೆಂಬರ್ 2023, 13:04 IST
 ತರಂಜಿತ್‌ ಸಿಂಗ್‌ ಸಂಧು
 ತರಂಜಿತ್‌ ಸಿಂಗ್‌ ಸಂಧು   

ವಾಷಿಂಗ್ಟನ್‌: ನ್ಯೂಯಾರ್ಕ್‌ನ ಗುರುದ್ವಾರಕ್ಕೆ ಭೇಟಿ ನೀಡಿದ್ದ ಅಮೆರಿಕದಲ್ಲಿನ ಭಾರತದ ರಾಯಭಾರಿ ತರಂಜಿತ್‌ ಸಿಂಗ್‌ ಸಂಧು ಅವರಿಗೆ ಕೆಲವರು ಅಡ್ಡಿಪಡಿಸಿದ ಘಟನೆಯನ್ನು ‘ಸಿಖ್ಸ್‌ ಫಾರ್‌ ಅಮೆರಿಕ’ ಸಂಘಟನೆ ಖಂಡಿಸಿದೆ.

‘ಸಿಖ್‌ ಸಮುದಾಯಕ್ಕೆ ಸೇರಿದ ಭಕ್ತರೊಬ್ಬರಿಗೆ ಅಗೌರವ ತೋರಿದ್ದನ್ನು ಸಂಘಟನೆಯು ಬಲವಾಗಿ ಖಂಡಿಸುತ್ತದೆ. ಈ ಕೃತ್ಯದಲ್ಲಿ ಭಾಗಿಯಾಗಿದ್ದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಸಂಘಟನೆಯು ಗುರುದ್ವಾರ ವ್ಯವಸ್ಥಾಪನಾ ಸಮಿತಿಯನ್ನು ಆಗ್ರಹಿಸಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಸಂಘಟನೆಯು, ‘ಗುರುದ್ವಾರಗಳು ಪ್ರಾರ್ಥನೆ ಸಲ್ಲಿಸುವ ಸ್ಥಳಗಳಾಗಿದ್ದು, ಇವುಗಳನ್ನು ವೈಯಕ್ತಿಕ ರಾಜಕಾರಣದಿಂದ ದೂರ ಇಡಬೇಕು’ ಎಂದು ಹೇಳಿದೆ.

ADVERTISEMENT

ನ್ಯೂಯಾರ್ಕ್‌ನ ಹಿಕ್ಸ್‌ವಿಲ್ಲೆಯಲ್ಲಿರುವ ಗುರುದ್ವಾರಕ್ಕೆ ಭಾನುವಾರ ಭೇಟಿ ನೀಡಿದ್ದ ಸಂಧು ಅವರಿಗೆ ಖಾಲಿಸ್ತಾನ ಬೆಂಬಲಿಗರು ಅಡ್ಡಿಪಡಿಸಿದ್ದರು. ಕೆನಡಾದಲ್ಲಿ ನಡೆದಿರುವ ಪ್ರತ್ಯೇಕತಾವಾದಿ ನಾಯಕ ಹರ್‌ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ವಿಚಾರವಾಗಿ ಸಂಧು ಅವರನ್ನು ಪ್ರಶ್ನೆ ಮಾಡಿದ್ದ ಅವರು, ಘೋಷಣೆಗಳನ್ನು ಕೂಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.