ADVERTISEMENT

ಗುಹೆಯ 3,000 ಅಡಿ ಆಳದಲ್ಲಿ ಸಿಲುಕಿದ್ದ ಅನ್ವೇಷಕ 8 ದೇಶಗಳ 182 ತಜ್ಞರಿಂದ ರಕ್ಷಣೆ!

ಟರ್ಕಿ ದೇಶದಲ್ಲಿ ಘಟನೆ: ಅಮೆರಿಕದ ಅನ್ವೇಷಕ ರಕ್ಷಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಸೆಪ್ಟೆಂಬರ್ 2023, 10:14 IST
Last Updated 12 ಸೆಪ್ಟೆಂಬರ್ 2023, 10:14 IST
<div class="paragraphs"><p>ಮಾರ್ಕ್ ಡಿಕ್ಕಿ ರಕ್ಷಣೆ</p></div>

ಮಾರ್ಕ್ ಡಿಕ್ಕಿ ರಕ್ಷಣೆ

   

ಫೋಟೊ– ಟರ್ಕಿ ಸ್ಪೀಲೋಲಾಜಿಕಲ್ ಫೆಡರೇಶನ್ ಟ್ವಿಟರ್

ಇಸ್ತಾಂಬುಲ್: ಟರ್ಕಿಯ ಗುಹೆಯೊಂದರಲ್ಲಿ ಅಪಾಯದಲ್ಲಿ ಸಿಲುಕಿದ್ದ ಅಮೆರಿಕ ಮೂಲದ ಅನ್ವೇಷಕರೊಬ್ಬರನ್ನು 8 ದೇಶಗಳ 182 ಜನರ ರಕ್ಷಣಾ ತಂಡ ರಕ್ಷಿಸಿದೆ.

ADVERTISEMENT

ಟರ್ಕಿಯ ಟಾರುಸ್ ಎಂಬ ಗುಡ್ಡಗಾಡು ‍ಪ್ರದೇಶದ ಮೋರ್ಕಾ ಗುಹೆಯಲ್ಲಿ ಈ ಘಟನೆ ನಡೆದಿದ್ದು, 40 ವರ್ಷ ವಯಸ್ಸಿನ ಅನ್ವೇಷಕ ಮಾರ್ಕ್ ಡಿಕ್ಕಿ ಎನ್ನುವರನ್ನು ಮಂಗಳವಾರ ಬೆಳಿಗ್ಗೆ ರಕ್ಷಿಸಲಾಗಿದೆ.

ಆಗಸ್ಟ್ 31 ರಂದು ನಿಗೂಢ ಮೋರ್ಕಾ ಗುಹೆಯ ಅನ್ವೇಷಣೆಗೆ ಹೋಗಿದ್ದ ಡಿಕ್ಕಿ, 5 ದಿನದ ನಂತರ 3 ಸಾವಿರ ಅಡಿ ಆಳದಿಂದ ಹೊರಗಿನ  ಸಂಪರ್ಕ ಕಳೆದುಕೊಂಡಿದ್ದರು. ಆತನ ಮೇಲೆ ನಿಗಾ ವಹಿಸಿದ್ದ ನ್ಯೂ ಜೆರ್ಸಿಯ Sussex County ಎಂಬ ಸಂಸ್ಥೆಯೊಂದು ಟರ್ಕಿ ರಕ್ಷಣಾ ಪಡೆಗೆ ಮಾಹಿತಿ ನೀಡಿ ಸಹಾಯಯಾಚಿಸಿತ್ತು.

ಕೂಡಲೇ ಮೋರ್ಕಾ ಗುಹೆಗೆ ತೆರಳಿದ ಪರಿಹಾರ ಕಾರ್ಯಾಚರಣೆ ತಂಡ, ಭಾರಿ ಆಳದಲ್ಲಿ ಸಿಲುಕಿರುವ ಡಿಕ್ಕಿ ಅವರನ್ನು ಕರೆತರುವುದು ಸವಾಲಿನ ಕೆಲಸವೆಂದು ಮನಗಂಡಿತ್ತು. ಇಟಲಿ, ಹಂಗೇರಿ, ಬಲ್ಗೇರಿಯಾ, ಉಕ್ರೇನ್, ಪೋಲ್ಯಾಂಡ್ ಹಾಗೂ ಇಂಗ್ಲೆಂಡ್ ಸೇರಿದಂತೆ 8 ದೇಶಗಳ ತಜ್ಞರಿಂದ 182 ಜನ ಒಡಗೂಡಿ ಡಿಕ್ಕಿ ಅವರನ್ನು ರಕ್ಷಿಸಲು ಯಶಸ್ವಿಯಾಗಿದ್ದಾರೆ.

ಡಿಕ್ಕಿ ಅವರನ್ನು ಗುಹೆಯಲ್ಲಿ ಪತ್ತೆ ಹಚ್ಚುವುದು ತುಂಬಾ ಕಷ್ಟವಾಗಿತ್ತು. ಕೆಲವು ಕಡೆ ಗುಹಾ ಗೋಡೆಗಳನ್ನು ಕತ್ತರಿಸಲಾಯಿತು. ಡಿಕ್ಕಿ ಅವರು ಪತ್ತೆಯಾದ ನಂತರು ಅವರು ತೀವ್ರ ನಿತ್ರಾಣರಾಗಿದ್ದರು. ತೀರಾ ರಕ್ತಹೀನತೆಯಿಂದ ಬಳಲುತ್ತಿದ್ದರು. ಕೂಡಲೇ ಅವರಿಗೆ ಅಲ್ಲಿಯೇ ಪ್ರಥಮ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದು ಟರ್ಕಿಯ ಸ್ಪೀಲೋಲಾಜಿಕಲ್ ಫೆಡರೇಶನ್ ವಕ್ತಾರ ಯಾಮನ್ ಒಜಾಕಿನ್ ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆ ನಂತರ ಪ್ರತಿಕ್ರಿಯಿಸಿರುವ ಡಿಕ್ಕಿ ಅವರು, ’ಓ ಮೈ ಗಾಡ್, ನಾನು ಬದುಕಿದೆ. ಇದೊಂದು ತೀರಾ ಭಯಾನಕ ಅನುಭವ ಆಗಿತ್ತು, ನಾನು ಮೇಲೆ ಬಂದೆ’ ಎಂದು ಹೇಳಿದ್ದಾರೆ.

ಮೋರ್ಕಾ ಗುಹೆ ಜಗತ್ತಿನಲ್ಲೇ ತುಂಬಾ ಆಳವಾದ ಗುಹೆಯಾಗಿದ್ದು, ಗರಿಷ್ಠ 4,186 ಅಡಿ ಆಳವಿದೆ ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.