
ವಿಶ್ವಸಂಸ್ಥೆ: ‘ಸಾಗರ ಭದ್ರತೆ ಮತ್ತು ಭಯೋತ್ಪಾದನೆ ವಿರುದ್ಧದ ನೀತಿಗಳನ್ನು ಭಾರತ ತನ್ನ ಆರ್ಥಿಕ ಹಿತಾಸಕ್ತಿ ಹಾಗೂ ರಾಷ್ಟ್ರೀಯ ರಕ್ಷಣೆಯ ಕೇಂದ್ರ ಬಿಂದುಗಳೆಂದು ಪರಿಗಣಿಸುತ್ತದೆ. ತನ್ನ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು, ಹೊಸ ತೊಂದರೆಗಳನ್ನು ಹತ್ತಿಕ್ಕಲು ಕಾರ್ಯತಂತ್ರ ಅಭಿವೃದ್ಧಿಪಡಿಸುವಲ್ಲಿ ಸಕ್ರಿಯವಾಗಿದೆ’– ಹೀಗೆಂದು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತದ ಶಾಶ್ವತ ಪ್ರತಿನಿಧಿಯಾಗಿರುವ ಪರ್ವತನೇನಿ ಹರೀಶ್ ಪ್ರತಿಪಾದಿಸಿದ್ದಾರೆ.
‘ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆ ನಿರ್ವಹಣೆ: ಜಾಗತಿಕ ಸ್ಥಿರತೆಗಾಗಿ ಅಂತರಾರಾಷ್ಟ್ರೀಯ ಸಹಕಾರದ ಮೂಲಕ ಸಾಗರ ಭದ್ರತೆ ಬಲವರ್ಧನೆ’ ಎಂಬ ವಿಚಾರದ ಕುರಿತು ಭದ್ರತಾ ಮಂಡಳಿಯಲ್ಲಿ ಮುಕ್ತ ಚರ್ಚೆ ನಡೆದಿದೆ. ಇದರಲ್ಲಿ ಪರ್ವತನೇನಿ ಹರೀಶ್ ಕೂಡ ಭಾಗಿಯಾಗಿ, ಭಾರತದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
‘ಭಾರತವು ವಿಸ್ತಾರವಾದ ಕರಾವಳಿ ಪ್ರದೇಶ, ಸಮರ್ಥ ಕಡಲ ಪಡೆಗಳನ್ನು ಹೊಂದಿದೆ. ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವುದರ ಜತೆಗೆ ಜವಾಬ್ದಾರಿಯುತ ಸಾಗರ ಭದ್ರತಾ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ. ಭಾರತ ಅನುಸರಿಸುತ್ತಿರುವ ಕ್ರಮಗಳು ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸುವುದರ ಜತೆಗೆ ಪ್ರಾದೇಶಿಕ, ರಾಜತಾಂತ್ರಿಕ, ಅಂತರರಾಷ್ಟ್ರೀಯ ಸಹಕಾರ ಮತ್ತು ಪ್ರಾದೇಶಿಕ ಮೂಲಸೌಕರ್ಯ ಅಭಿವೃದ್ಧಿ ನಡುವೆ ಸಮತೋಲನ ಸಾಧಿಸಲೂ ನೆರವಾಗುತ್ತಿದೆ’ ಎಂದಿದ್ದಾರೆ.
ಜತೆಗೆ ಇಂಡೋ–ಪೆಸಿಫಿಕ್ ಪ್ರದೇಶದಲ್ಲಿನ ಹೊಸ ಬೆದರಿಕೆಗಳು ಮತ್ತು ಭೌಗೋಳಿಕ–ರಾಜಕೀಯ ಬದಲಾವಣೆಗಳನ್ನು ಸಮರ್ಥವಾಗಿ ನಿಭಾಯಿಸಲು ಭಾರತ ಕಾರ್ಯತಂತ್ರ ಅಭಿವೃದ್ಧಿಪಡಿಸುತ್ತಲೇ ಇದೆ. ಭಾರತದ ಸಾಗರ ಭದ್ರತಾ ನೀತಿಯು ಎಲ್ಲಾ ರೀತಿಯ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸುವಷ್ಟು ಸಮರ್ಥವಾಗಿದೆ ಎಂದೂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.