ADVERTISEMENT

ಯುಎಸ್‌ ಕ್ಯಾಪಿಟಲ್ ದಾಳಿ ಪೂರ್ವನಿಯೋಜಿತ ಎಂಬುದಕ್ಕೆ ಪುರಾವೆ ಲಭ್ಯ: ವರದಿ

ಏಜೆನ್ಸೀಸ್
Published 10 ಫೆಬ್ರುವರಿ 2021, 4:16 IST
Last Updated 10 ಫೆಬ್ರುವರಿ 2021, 4:16 IST
ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್   

ವಾಷಿಂಗ್ಟನ್: ಗಲಭೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ವಾಗ್ದಂಡನೆಗೆ ಗುರಿಯಾಗಿಸುವ ಬಗ್ಗೆ ವಿಚಾರಣೆ ನಡೆಸಲು ಅಮೆರಿಕದ ಸೆನೆಟ್ ಸಮ್ಮತಿಸಿದೆ. ಇದರ ಬೆನ್ನಲ್ಲೇ, ಯುಎಸ್‌ ಕ್ಯಾಪಿಟಲ್ ಮೇಲೆ ನಡೆದಿದ್ದ ದಾಳಿ ಪೂರ್ವನಿಯೋಜಿತ ಎಂಬುದಕ್ಕೆ ಹೆಚ್ಚು ಪುರಾವೆಗಳು ದೊರೆಯುತ್ತಿವೆ ಎಂದು ಮೂಲಗಳು ತಿಳಿಸಿದೆ.

ಟ್ರಂಪ್ ಅವರನ್ನು ವಾಗ್ದಂಡನೆಗೆ ಗುರಿಪಡಿಸುವುದಕ್ಕೆ ಸಂಬಂಧಿಸಿದ ಎರಡನೇ ವಿಚಾರಣೆ ಮಂಗಳವಾರ ಆರಂಭವಾಗಿದೆ. ಚುನಾವಣೆ ಸೋಲಿನ ವಿರುದ್ಧ ಯುಎಸ್‌ ಕ್ಯಾಪಿಟಲ್‌ಗೆ ರ್‍ಯಾಲಿ ಹಮ್ಮಿಕೊಂಡಿದ್ದ ಗುಂಪನ್ನು ಟ್ರಂಪ್ ಅವರು ‘ಭೀಕರವಾಗಿ ಹೋರಾಡಿ’ ಎಂದು ಪ್ರಚೋದಿಸಿರುವ ಗ್ರಾಫಿಕ್ ವಿಡಿಯೊ ಹಾಗೂ ಚಿತ್ರಗಳ ಜತೆ ವಿಚಾರಣೆ ಆರಂಭಿಸಲಾಗಿದೆ.

ಸಾಂವಿಧಾನಿಕ ಆಧಾರದ ಮೇಲೆ ವಿಚಾರಣೆಯನ್ನು ತಡೆಯಲು ಟ್ರಂಪ್ ತಂಡವು ಮಾಡಿದ್ದ ಮೊದಲ ಹಂತದ ನಿರ್ಣಾಯಕ ಪ್ರಯತ್ನ ವಿಫಲಗೊಂಡಿದೆ. ಅಧಿಕಾರ ತೊರೆದ ಅಧ್ಯಕ್ಷರನ್ನು ನಂತರ ವಿಚಾರಣೆಗೆ ಒಳಪಡಿಸಬಹುದೇ ಎಂಬ ಬಗ್ಗೆ ಮಂಗಳವಾರ ಅಮೆರಿಕ ಸಂಸತ್‌ನಲ್ಲಿ ಮತದಾನವಾಗಿತ್ತು. ಇದರಲ್ಲಿ ಟ್ರಂಪ್‌ ಪರ ತಂಡಕ್ಕೆ ಹಿನ್ನಡೆಯಾಗಿದೆ. ಪರಿಣಾಮವಾಗಿ ಟ್ರಂಪ್ ವಿಚಾರಣೆಗೆ ಸಮ್ಮತಿ ದೊರೆತಿದೆ. ಆರು ಮಂದಿ ರಿಪಬ್ಲಿಕನ್ ಸೆನೆಟರ್‌ಗಳೂ ಡೆಮಾಕ್ರಟಿಕ್ ಪಕ್ಷದವರ ಪರ ಬೆಂಬಲ ಸೂಚಿಸಿದ್ದಾರೆ.

ಅಮೆರಿಕದ ಕ್ಯಾಪಿಟಲ್ ಕಟ್ಟಡದ ಜನವರಿ 6ರಂದು ದಾಳಿ ನಡೆದಿತ್ತು. ಚುನಾವಣಾ ಸೋಲೊಪ್ಪಿಕೊಳ್ಳದ ಟ್ರಂಪ್ ಪರ ಪ್ರತಿಭಟನಾಕಾರರು ದಾಳಿ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.