ವಾಷಿಂಗ್ಟನ್: ರಾಷ್ಟ್ರೀಯ ರಕ್ಷಣಾ ಮಾಹಿತಿಗಳನ್ನು ಕಾನೂನುಬಾಹಿರವಾಗಿ ಸಂಗ್ರಹಿಸಿಟ್ಟುಕೊಂಡಿರುವ ಆರೋಪದಡಿ ಭಾರತೀಯ–ಅಮೆರಿಕನ್ ಕಾರ್ಯತಂತ್ರ ತಜ್ಞ ಆ್ಯಶ್ಲೆ ಜೆ. ಟೆಲ್ಲಿಸ್ ಅವರನ್ನು ಬಂಧಿಸಲಾಗಿದೆ.
64 ವರ್ಷದ ಟೆಲ್ಲಿಸ್ ಅವರನ್ನು ವಿಯೆನ್ನಾದಲ್ಲಿ ಬಂಧಿಸಲಾಗಿದ್ದು, ಅವರ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಅಮೆರಿಕದ ಅಟಾರ್ನಿ ಕಚೇರಿ ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ.
ಅವರ ಮೇಲಿನ ಆರೋಪಗಳು ನಮ್ಮ ನಾಗರಿಕರ ಸುರಕ್ಷತೆ ಮತ್ತು ಭದ್ರತೆಗೆ ಗಂಭೀರ ಸ್ವರೂಪದ ಅಪಾಯ ಒಡ್ಡುವಂತಿವೆ ಎಂದು ಅಮೆರಿಕ ಅಟಾರ್ನಿ ಲಿಂಡ್ಸಿ ಹ್ಯಾಲಿಗನ್ ಅವರು ತಿಳಿಸಿದ್ದಾರೆ.
ಅಪರಾಧ ಸಾಬೀತಾದರೆ, ಟೆಲ್ಲಿಸ್ ಅವರಿಗೆ 10 ವರ್ಷ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.