
ಸಮನ್ವಿತಾ ಧಾರೇಶ್ವರ್, ಆ್ಯರಾನ್ ಪಾಪಾಗ್ಲೂ
ಎಕ್ಸ್ ಚಿತ್ರ
ಮೆಲ್ಬರ್ನ್: ಆಸ್ಟ್ರೇಲಿಯಾದ ಸಿಡ್ನಿ ನಗರದಲ್ಲಿ ಸಂಭವಿಸಿದ ಅಪಘಾತದಲ್ಲಿ ಎಂಟು ತಿಂಗಳ ಗರ್ಭಿಣಿ ಹಾಗೂ ಹೊಟ್ಟೆಯೊಳಗಿದ್ದ ಮಗು ಮೃತಪಟ್ಟಿದೆ.
ಸಮನ್ವಿತಾ ಧಾರೇಶ್ವರ್ (33) ಮೃತ ಮಹಿಳೆ. ಕಳೆದ ಶುಕ್ರವಾರ ರಾತ್ರಿ 8ರ ಸುಮಾರಿಗೆ ಸಮನ್ವಿತಾ ಅವರು ತಮ್ಮ ಪತಿ ಹಾಗು 3 ವರ್ಷದ ಮಗನೊಂದಿಗೆ ಜರ್ಜ್ ಸೇಂಟ್ ಇನ ಹಾರ್ನ್‌ಸ್ಬಿ ಬಳಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ರಸ್ತೆ ಅಪಘಾತ ಸಂಭವಿಸಿದೆ.
ಶುಕ್ರವಾರ ಸಂಜೆ ಈ ಕುಟುಂಬ ರಸ್ತೆ ದಾಟುತ್ತಿತ್ತು. ದಾರಿಯಲ್ಲಿ ಬರುತ್ತಿದ್ದ ಕಿಯಾ ಕಾರೊಂದರ ಚಾಲಕ ತನ್ನ ವಾಹನ ನಿಲ್ಲಿಸಿ ಈ ಕುಟುಂಬಕ್ಕೆ ದಾರಿ ಮಾಡಿಕೊಟ್ಟಿದ್ದಾರೆ. ಆದರೆ ಈ ಕಾರಿಗೆ ಹಿಂದಿನಿಂದ ವೇಗವಾಗಿ ಬಂದ ಬಿಎಂಡಬ್ಲ್ಯೂ ಕಾರು ಬಲವಾಗಿ ಡಿಕ್ಕಿ ಹೊಡೆದ ಪರಿಣಾಮ, ಕಿಯಾ ಕಾರು ಮಹಿಳೆಗೆ ಡಿಕ್ಕಿಯಾಗಿದೆ. ತೀವ್ರವಾಗಿ ಗಾಯಗೊಂಡ ಸಮನ್ವಿತಾ ಅವರನ್ನು ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಪೊಲೀಸರು ಹೇಳಿರುವುದಾಗಿ ಸೆವೆನ್‌ನ್ಯೂಸ್ ಡಾಟ್ ಕಾಂ ವರದಿ ಮಾಡಿದೆ.
ಸಮನ್ವಿತಾ ಅವರ ಹೆರಿಗೆ ಒಂದು ವಾರದಲ್ಲಿ ಆಗುವುದಾಗಿ ವೈದ್ಯರು ತಿಳಿಸಿದ್ದರು. ಆದರೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಅವರು ಹಾಗೂ ಅವರ ಹೊಟ್ಟೆಯಲ್ಲಿದ್ದ ಮಗು ಕೆಲ ಕ್ಷಣಗಳಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಸಮನ್ವಿತಾ ಅವರ ಲಿಂಕ್‌ಡಿನ್ ಪ್ರೊಫೈಲ್‌ನಲ್ಲಿ ಅವರು ಅಲಸ್ಕೊ ಯೂನಿಫಾರ್ಮ್ಸ್ ಎಂಬ ಕಂಪನಿಯಲ್ಲಿ ಐಟಿ ಸಿಸ್ಟಂ ಅನಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು ಎಂದಿದೆ.
ಬಿಎಂಡಬ್ಲ್ಯೂ ಓಡಿಸುತ್ತಿದ್ದ 19 ವರ್ಷದ ಯುವಕ ಮತ್ತು ಕಿಯಾ ಚಾಲನೆ ಮಾಡುತ್ತಿದ್ದ 48 ವರ್ಷದ ವ್ಯಕ್ತಿಯೂ ಗಾಯಗೊಂಡಿದ್ದಾರೆ. ಈ ಎರಡೂ ಕಾರುಗಳಲ್ಲಿ ಸಹ ಪ್ರಯಾಣಿಕರು ಇರಲಿಲ್ಲ.
ಬಿಎಂಡಬ್ಲ್ಯೂ ಚಾಲಕ ಆ್ಯರಾನ್ ಪಾಪಾಗ್ಲೂ ಅವರನ್ನು ಪೊಲೀಸರು ಬಂಧಿಸಿದ್ದಾರೆ. ವ್ಯಕ್ತಿಗಳ ಸಾವಿಗೆ ಕಾರಣರಾಗುವಂತೆ ಅಜಾಗರೂಕತೆಯಿಂದ ಕಾರು ಚಾಲನೆ ಮಾಡಿದ ಆರೋಪ ಇವರ ಮೇಲಿದೆ. ಅಪಘಾತದ ಬೀಕರತೆಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ನ್ಯಾಯಾಲಯ, ಜಾಮೀನು ನಿರಾಕರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.