ADVERTISEMENT

ಹಾಂಗ್‌ಕಾಂಗ್‌ ಪ್ರಜೆಗಳಿಗೆ ಆಶ್ರಯ: ಆಸ್ಟ್ರೇಲಿಯಾ ಚಿಂತನೆ

ಸಂಪುಟದ ಮುಂದಿಡಲು ಶೀಘ್ರವೇ ಕ್ರಮ: ಪ್ರಧಾನಿ ಸ್ಕಾಟ್‌ ಮಾರಿಸನ್‌

ಏಜೆನ್ಸೀಸ್
Published 2 ಜುಲೈ 2020, 7:26 IST
Last Updated 2 ಜುಲೈ 2020, 7:26 IST
ಸ್ಕಾಟ್‌ ಮಾರಿಸನ್‌
ಸ್ಕಾಟ್‌ ಮಾರಿಸನ್‌   

ಸಿಡ್ನಿ: ಚೀನಾ, ಹಾಂಗ್‌ಕಾಂಗ್‌ನಲ್ಲಿ ಇನ್ನಷ್ಟು ಕಠಿಣ ನಿಯಮಗಳನ್ನು ಜಾರಿಗೆ ತರುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿಗಳಿಗೆ ಆಶ್ರಯ ನೀಡಲು ಆಸ್ಟ್ರೇಲಿಯಾ ಚಿಂತನೆ ನಡೆಸುತ್ತಿದೆ. ಆಸ್ಟ್ರೇಲಿಯಾದ ಈ ನಿಲುವಿನಿಂದ, ಚೀನಾದೊಂದಿಗೆ ಅದರ ಸಂಬಂಧ ಮತ್ತಷ್ಟು ಹದಗೆಡುವ ಸಾಧ್ಯತೆಯಿದೆ.

‘ಹಾಂಗ್‌ಕಾಂಗ್‌ನಲ್ಲಿ ಪರಿಸ್ಥಿತಿ ‘ತೀವ್ರ ಕಳವಳಕಾರಿ’ಯಾಗಿದೆ. ತಮ್ಮ ಸರ್ಕಾರ ಹಾಂಗ್‌ಕಾಂಗ್‌ ಪ್ರಜೆಗಳನ್ನು ಆಸ್ಟ್ರೇಲಿಯಾಕ್ಕೆ ಸ್ವಾಗತಿಸುವ ನಿಟ್ಟಿನಲ್ಲಿ ಗಾಢ ಚಿಂತನೆಯಲ್ಲಿ ತೊಡಗಿದೆ’ ಎಂದು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌ ಗುರುವಾರ ತಿಳಿಸಿದ್ದಾರೆ. ಹಾಂಗ್‌ಕಾಂಗ್‌, 1997ರ ಜುಲೈನಲ್ಲಿ ಚೀನಾಕ್ಕೆ ಮರಳುವ ಮೊದಲು ಬ್ರಿಟಿಷ್‌ ಆಳ್ವಿಕೆಗೊಳಪಟ್ಟಿತ್ತು.

‘ಆಸ್ಟ್ರೇಲಿಯಾವು, ಹಾಂಗ್‌ಕಾಂಗ್‌ ಪ್ರಜೆಗಳಿಗೆ ಸುರಕ್ಷಿತ ತಾಣವಾಗಬಹುದೇ’ ಎಂಬ ವರದಿಗಾರರೊಬ್ಬರ ಪ್ರಶ್ನೆಗೆ ಮಾರಿಸನ್‌ ‘ಹೌದು’ ಎಂದು ಉತ್ತರಿಸಿದರು.

ADVERTISEMENT

ಈ ಬಗ್ಗೆ ಕ್ರಮಕ್ಕೆ ಸಂಪುಟ ಶೀಘ್ರವೇ ಯೋಚಿಸಲಿದೆ ಎಂದು ಹೇಳಿದ ಪ್ರಧಾನಿ, ಇದಕ್ಕೆ ಒಪ್ಪಿಗೆ ಸಿಗುವ ಬಗ್ಗೆ ಬಲವಾದ ಸುಳಿವು ನೀಡಿದರು.

ಒಂದು ದಿನ ಮೊದಲಷ್ಟೇ, ಬ್ರಿಟನ್‌ ತನ್ನ ಸಾಗರೋತ್ತರ ಬ್ರಿಟಿಷ್‌ ಪೌರ ಸ್ಥಾನಮಾನ ಹೊಂದಿದವರಿಗೆ ಮತ್ತು ಅವರ ಕುಟುಂಬದವರಿಗೆ ದೇಶಕ್ಕೆ ಹಿಂತಿರುಗಲು ಹೊಸ ದಾರಿ ಕಲ್ಪಿಸಿತ್ತು. ಅವರು ಇಂಗ್ಲೆಂಡ್‌ಗೆ ಬಂದು ಅಲ್ಲಿನ ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿತ್ತು.

ಇಂಗ್ಲೆಂಡ್‌, 23 ವರ್ಷಗಳ ಹಿಂದೆ ಹಾಂಗ್‌ಕಾಂಗ್‌ ಅನ್ನು ಚೀನಾಕ್ಕೆ ಮರಳಿಸುವ ವೇಳೆ, ‘ಮುಂದಿನ 50 ವರ್ಷ ಈ ದ್ವೀಪ ರಾಷ್ಟ್ರದ ನ್ಯಾಯಿಕ ಮತ್ತು ಶಾಸನಸಭೆಯ ಸ್ವಾಯತ್ವ ಸ್ಥಾನಮಾನ ಕಾಪಾಡಿಕೊಳ್ಳಬೇಕು’ ಎಂಬ ಖಾತರಿ ಪಡೆದಿತ್ತು.

ಆದರೆ ಬೀಜಿಂಗ್‌ನ ಕೈಗೊಂಬೆ ಸರ್ಕಾರ ಅಂಗೀಕರಿಸಿದ ಹೊಸ ಶಾಸನವು, ಈ ಭರವಸೆಯನ್ನು ಗಾಳಿಗೆ ತೂರಿದೆ ಎಂದು ಟೀಕಾಕಾರರು ದೂರಿದ್ದಾರೆ. ಈ ಕಾನೂನಿನಲ್ಲಿರುವ ಅಂಶಗಳನ್ನು ಸಾರ್ವಜನಿಕರಿಂದ ಮುಚ್ಚಿಡಲಾಗಿದೆ. 1984ರಲ್ಲಿ ಅಧಿಕೃತವಾಗಿ ರೂಪಿಸಲಾದ ‘ಒಂದು ರಾಷ್ಟ್ರ, ಎರಡು ಆಡಳಿತ ವ್ಯವಸ್ಥೆ’ ನಿಯಮವನ್ನು ಈ ಶಾಸನ ಉಲ್ಲಂಘಿಸಿದೆ ಎಂದೂ ದೂರಲಾಗಿದೆ.

ಚೀನಾ ಟೀಕೆ:ಕೆನ್‌ಬೆರಾದಲ್ಲಿರುವ ಚೀನಾ ರಾಯಭಾರ ಕಚೇರಿಯು, ಹೊಸ ಕಾನೂನಿನ ಬಗ್ಗೆ ಕೇಳಿಬಂದಿರುವ ಟೀಕೆಗಳನ್ನು ತಳ್ಳಿಹಾಕಿದೆ. ‘ಹಾಂಗ್‌ಕಾಂಗ್‌ ಮತ್ತು ಚೀನಾದ ಆಂತರಿಕ ವ್ಯವಹಾರಗಳಲ್ಲಿ ತಲೆಹಾಕುವುದನ್ನು ಆಸ್ಟ್ರೇಲಿಯಾ ನಿಲ್ಲಿಸಬೇಕು’ ಎಂದು ಅದು ಗುರುವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

‘ಹಾಂಗ್‌ಕಾಂಗ್‌ನ ಕಾನೂನಿಗೆ ಸಂಬಂಧಿಸಿ ಆಸ್ಟ್ರೇಲಿಯಾದ ಪ್ರತಿಕ್ರಿಯೆಯನ್ನು ನಾವು ಖಂಡಿಸುತ್ತೇವೆ’ ಎಂದೂ ಹೇಳಿದೆ. ಹಾಂಗ್‌ಕಾಂಗ್‌ ಬೆಳವಣಿಗೆಯ ಬಗ್ಗೆ ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಮೇರಿಸ್‌ ಆ್ಯನ್‌ ಪೇಯ್ನ್ ಬುಧವಾರ ‘ತೀವ್ರ ಆತಂಕ’ ವ್ಯಕ್ತಪಡಿಸಿದ್ದರು.

ಚೀನಾ ಕ್ರಮ:ಚೀನಾ, ತನ್ನ ವಿದ್ಯಾರ್ಥಿಗಳಿಗೆ ಮತ್ತು ಪ್ರವಾಸಿಗರಿಗೆ ಆಸ್ಟ್ರೇಲಿಯಾಕ್ಕೆ ಹೋಗದಂತೆ ಈಗಾಗಲೇ ಎಚ್ಚರಿಕೆ ನೀಡಿದೆ. ಆಸ್ಟ್ರೇಲಿಯಾದ ಸರಕುಗಳಿಗೆ ವಾಣಿಜ್ಯ ನಿರ್ಬಂಧ ಹೇರಿದೆ. ಮಾದಕವಸ್ತು ಸಾಗಣೆ ಪ್ರಕರಣದಲ್ಲಿ ಆಸ್ಟ್ರೇಲಿಯಾ ಪ್ರಜೆಯೊಬ್ಬರಿಗೆ ಮರಣ ದಂಡನೆಯನ್ನೂ ವಿಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.