ADVERTISEMENT

ಚೀನಾ ಕ್ಷಮೆಗೆ ಆಸ್ಟ್ರೇಲಿಯಾ ಪ್ರಧಾನಿ ಬಿಗಿಪಟ್ಟು

ಪಿಟಿಐ
Published 30 ನವೆಂಬರ್ 2020, 11:53 IST
Last Updated 30 ನವೆಂಬರ್ 2020, 11:53 IST
ಸ್ಕಾಟ್‌ ಮಾರಿಸನ್‌
ಸ್ಕಾಟ್‌ ಮಾರಿಸನ್‌   

ಮೆಲ್ಬರ್ನ್‌: ‘ನಮ್ಮ ಸೈನಿಕ ಅಫ್ಗಾನಿಸ್ತಾನದಲ್ಲಿ ಮಗುವೊಂದನ್ನು ಹತ್ಯೆ ಮಾಡಲು ಮುಂದಾಗಿರುವ ವರ್ಣ ಚಿತ್ರವನ್ನು (ಗ್ರಾಫಿಕ್‌ ಚಿತ್ರ) ಚೀನಾದ ಅಧಿಕಾರಿಯೊಬ್ಬರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಚೀನಾದ ಈ ನಡೆ ಅಸಹ್ಯಕರವಾದುದು. ಈ ಬಗ್ಗೆ ಚೀನಾ ಸರ್ಕಾರವು ಆಸ್ಟ್ರೇಲಿಯಾದ ಕ್ಷಮೆ ಯಾಚಿಸಬೇಕು’ ಎಂದು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್‌ ಮಾರಿಸನ್‌ ಸೋಮವಾರ ಒತ್ತಾಯಿಸಿದ್ದಾರೆ.

‘ಜನರಿಗೆ ತಪ್ಪು ಸಂದೇಶ ರವಾನಿಸಲಿರುವ ಈ ನಕಲಿ ಟ್ವೀಟ್‌ ಅನ್ನು ಕೂಡಲೇ ತೆಗೆದುಹಾಕಬೇಕು’ ಎಂದೂ ಮಾರಿಸನ್‌ ಅವರು ಚೀನಾದ ವಿದೇಶಾಂಗ ಸಚಿವಾಲಯವನ್ನು ಆಗ್ರಹಿಸಿದ್ದಾರೆ.

ತೋಳುಗಳಲ್ಲಿ ಕುರಿಮರಿ ಎತ್ತಿಕೊಂಡಿರುವ ಮಗುವಿನ ಗಂಟಲಿಗೆ ಆಸ್ಟ್ರೇಲಿಯಾದ ಸೈನಿಕರೊಬ್ಬರು ಚಾಕು ಹಿಡಿದಿರುವ ವರ್ಣಚಿತ್ರವನ್ನು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್‌ ಅವರು ಸೋಮವಾರ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು.

ADVERTISEMENT

‘ಅಫ್ಗಾನಿಸ್ತಾನದ ನಾಗರಿಕರು ಹಾಗೂ ಅಲ್ಲಿನ ಕೈದಿಗಳನ್ನು ಆಸ್ಟ್ರೇಲಿಯಾದ ಸೈನಿಕರು ಹತ್ಯೆ ಮಾಡಿರುವುದು ಆಘಾತಕಾರಿ ಬೆಳವಣಿಗೆ. ಇದನ್ನು ನಾವು ಖಂಡಿಸುತ್ತೇವೆ. ಇದಕ್ಕೆ ಆಸ್ಟ್ರೇಲಿಯಾವೇ ಹೊಣೆ’ ಎಂದೂ ಲಿಜಿಯಾನ್‌ ಬರೆದಿದ್ದಾರೆ.

ವ್ಯಾಪಾರ, ವಿನಿಮಯ ವಿಚಾರದಲ್ಲಿ ಈಗಾಗಲೇ ಉಭಯ ರಾಷ್ಟ್ರಗಳ ನಡುವಣ ಸಂಬಂಧ ಹಳಸಿದೆ. ಇಂತಹ ಸಮಯದಲ್ಲೇ ಈ ಚಿತ್ರವನ್ನು ಪೋಸ್ಟ್‌ ಮಾಡಿರುವುದು ಆಸ್ಟ್ರೇಲಿಯಾ ಸರ್ಕಾರವನ್ನು ಕೆರಳಿಸಿದೆ.

‘ಇದು ಆಸ್ಟ್ರೇಲಿಯಾದ ಸೈನಿಕರಿಗೆ ಮಾಡಿದ ಅಪಮಾನ. ಚೀನಾದ ಅತಿರೇಕದ ನಡವಳಿಕೆ. ಈ ಚಿತ್ರವನ್ನು ಟ್ವಿಟರ್‌ನಿಂದ ತೆಗೆದು ಹಾಕುವಂತೆ ಚೀನಾ ಸರ್ಕಾರಕ್ಕೆ ಸೂಚಿಸಿದ್ದೇವೆ. ಟ್ವಿಟರ್‌ ಗಮನಕ್ಕೂ ತಂದಿದ್ದೇವೆ’ ಎಂದು ಮಾರಿಸನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.