ADVERTISEMENT

ಭಾರತದ ಕೋವಿಡ್‌–19 ಪರೀಕ್ಷೆಗಳು ವಿಶ್ವಾಸಾರ್ಹವಲ್ಲ ಎಂದ ಆಸ್ಟ್ರೇಲಿಯಾ

ಪಿಟಿಐ
Published 27 ಏಪ್ರಿಲ್ 2021, 9:43 IST
Last Updated 27 ಏಪ್ರಿಲ್ 2021, 9:43 IST
ಸಾಂದರ್ಭಿಕ ಚಿತ್ರ (ಕೃಪೆ – ಡೆಕ್ಕನ್ ಹೆರಾಲ್ಡ್)
ಸಾಂದರ್ಭಿಕ ಚಿತ್ರ (ಕೃಪೆ – ಡೆಕ್ಕನ್ ಹೆರಾಲ್ಡ್)   

ಪರ್ತ್: ಭಾರತದಲ್ಲಿ ಮಾಡುತ್ತಿರುವ ಕೋವಿಡ್–19 ಪರೀಕ್ಷೆಗಳು ಸಮರ್ಪಕವಾಗಿಲ್ಲ ಮತ್ತು ವಿಶ್ವಾಸಾರ್ಹವಲ್ಲ ಎಂದು ಪಶ್ಚಿಮ ಆಸ್ಟ್ರೇಲಿಯಾ ರಾಜ್ಯದ ಮುಖ್ಯಮಂತ್ರಿ ಮಾರ್ಕ್ ಮೆಕ್‌ಗೋವನ್ ಹೇಳಿದ್ದಾರೆ.

ಭಾರತದಿಂದ ವಾಪಸಾಗುತ್ತಿರುವವರಿಗೆ ಅಲ್ಲಿ ನಡೆಸಿರುವ ಪರೀಕ್ಷೆಯು ಸಮರ್ಪಕವಾಗಿಲ್ಲ. ಇದು ವ್ಯವಸ್ಥೆಯ ಸಮಗ್ರತೆಗೆ ಧಕ್ಕೆ ಉಂಟುಮಾಡುತ್ತಿರುವುದಲ್ಲದೆ, ಇಲ್ಲಿ ಕೆಲವು ಸಮಸ್ಯೆಗಳು ಸೃಷ್ಟಿಯಾಗುತ್ತಿವೆ ಎಂದು ಅವರು ಹೇಳಿದ್ದಾರೆ.

ಭಾರತದಿಂದ ವಾಪಸಾಗಿ ಪರ್ತ್‌ನ ಹೋಟೆಲ್‌ಗಳಲ್ಲಿ ಕ್ವಾರಂಟೈನ್‌ನಲ್ಲಿರುವ ನಾಲ್ವರಲ್ಲಿ ಕೋವಿಡ್ ದೃಢಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ ಬಳಿಕ ಮಾರ್ಕ್ ಅವರು ಈ ಹೇಳಿಕೆ ನೀಡಿದ್ದಾರೆ.

ಭಾರತದಿಂದ ವಾಪಸಾಗುತ್ತಿರುವ ಹೆಚ್ಚಿನವರು ಕೋವಿಡ್ ಸೋಂಕು ಹೊಂದಿದ್ದಾರೆ ಎಂದು ಪಶ್ಚಿಮ ಆಸ್ಟ್ರೇಲಿಯಾ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.

ಭಾರತದಿಂದ ಇತ್ತೀಚೆಗೆ ವಾಪಸಾದ 78–79 ಪ್ರಯಾಣಿಕರಲ್ಲಿ ಕೋವಿಡ್ ದೃಢಪಟ್ಟಿರುವ ಬಗ್ಗೆ ಬೆಳಗ್ಗಿನ ತುರ್ತು ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದೂ ಸ್ಥಳೀಯ ಟಿವಿ ಚಾನೆಲ್‌ಗೆ ಮಾರ್ಕ್ ತಿಳಿಸಿದ್ದಾರೆ.

ಈ ಮಧ್ಯೆ, ಭಾರತದಿಂದ ಸಿಡ್ನಿಗೆ ತೆರಳಿದ್ದ ಏರ್‌ ಇಂಡಿಯಾ ವಿಮಾನದ ಸಿಬ್ಬಂದಿಯೊಬ್ಬರಲ್ಲಿ ಮಂಗಳವಾರ ಕೋವಿಡ್ ಸೋಂಕು ದೃಢಪಟ್ಟಿದೆ. ಪ್ರಯಾಣಕ್ಕೂ ಮುನ್ನ ದೆಹಲಿಯಲ್ಲಿ ಅವರಿಗೆ ಆರ್‌ಟಿ–ಪಿಸಿಆರ್ (ಕೋವಿಡ್ ಪರೀಕ್ಷೆ) ನಡೆಸಲಾಗಿದ್ದು, ವರದಿ ನೆಗೆಟಿವ್ ಬಂದಿತ್ತು. ಸಿಡ್ನಿ ತಲುಪಿದಾಗ ಅಲ್ಲಿಯೂ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ಪಾಸಿಟಿವ್ ಬಂದಿದೆ. ಹೀಗಾಗಿ ಪ್ರಯಾಣಿಕರನ್ನು ಸಿಡ್ನಿಯಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಬಳಿಕ ವಿಮಾನವು ಪ್ರಯಾಣಿಕರಿಲ್ಲದೆಯೇ ಕೇವಲ ಸರಕು ಹೇರಿಕೊಂಡು ಭಾರತಕ್ಕೆ ವಾಪಸಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.