ADVERTISEMENT

ಪಾಕಿಸ್ತಾನ | ಬಿಎನ್‌ಪಿ ರ‍್ಯಾಲಿ ಬಳಿಕ ಆತ್ಮಾಹುತಿ ಬಾಂಬ್ ದಾಳಿ: 14 ಮಂದಿ ಸಾವು

ಪಿಟಿಐ
Published 3 ಸೆಪ್ಟೆಂಬರ್ 2025, 6:25 IST
Last Updated 3 ಸೆಪ್ಟೆಂಬರ್ 2025, 6:25 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕರಾಚಿ: ಬಲೂಚಿಸ್ತಾನ ನ್ಯಾಷನಲ್‌ ಪಾರ್ಟಿ ( ಬಿಎನ್‌ಪಿ ) ರ‍್ಯಾಲಿಯ ಬಳಿಕ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 14 ಜನ ಮೃತಪಟ್ಟು, 35 ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸರ್ದಾರ್ ಅತ್ತೌಲ್ಲಾ ಮೆಂಗಲ್ ಅವರ 4ನೇ ಪುಣ್ಯತಿಥಿಯ ಅಂಗವಾಗಿ ಮಂಗಳವಾರ, ಬಿಎನ್‌ಪಿ ಕ್ವೆಟ್ಟಾದಲ್ಲಿ ಸಾರ್ವಜನಿಕ ರ‍್ಯಾಲಿಯನ್ನು ಆಯೋಜಿಸಿತ್ತು. ರ‍್ಯಾಲಿ ಮುಗಿದ ನಂತರ ಸರಿಯಬ್ ಪ್ರದೇಶದ ಶಹವಾನಿ ಕ್ರೀಡಾಂಗಣದ ಬಳಿ ಸ್ಫೋಟ ಸಂಭವಿಸಿದೆ ಎಂದು 'ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್' ಪತ್ರಿಕೆ ವರದಿ ಮಾಡಿದೆ.

ADVERTISEMENT

ಪ್ರಾಂತೀಯ ಆರೋಗ್ಯ ಸಚಿವ ಬಖ್ತ್ ಮುಹಮ್ಮದ್ ಕಾಕರ್ ಅವರು ಘಟನೆಯನ್ನು ದೃಢಪಡಿಸಿದ್ದಾರೆ ಎಂದೂ ಪತ್ರಿಕೆ ವರದಿ ಮಾಡಿದೆ.

ಅಧಿಕಾರಿಗಳು ಇದನ್ನು ಆತ್ಮಾಹುತಿ ಬಾಂಬ್ ದಾಳಿ ಎಂದು ದೃಢಪಡಿಸಿದ್ದಾರೆ ಎಂದು 'ಡಾನ್' ಪತ್ರಿಕೆ ವರದಿ ಮಾಡಿದೆ. ರ‍್ಯಾಲಿ ಮುಗಿದ ಸುಮಾರು 15 ನಿಮಿಷಗಳ ನಂತರ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ರ‍್ಯಾಲಿಯಲ್ಲಿ ಭಾಗವಹಿಸಿದ್ದವರು ಹೊರನಡೆಯುತ್ತಿದ್ದಾಗ ಪಾರ್ಕಿಂಗ್ ಪ್ರದೇಶದಲ್ಲಿ ದಾಳಿಕೋರ ಮದ್ದುಗುಂಡುಗಳಿಂದ ತುಂಬಿದ್ದ ಜಾಕೆಟ್ ಸ್ಫೋಟಿಸಿ ಆತ್ಮಾಹುತಿ ದಾಳಿ ನಡೆಸಿದ್ದಾನೆ ಎನ್ನಲಾಗಿದೆ.

ಸಭೆಯ ಅಧ್ಯಕ್ಷತೆ ವಹಿಸಿದ್ದ ಬಿಎನ್‌ಪಿ ಮುಖ್ಯಸ್ಥ ಅಖ್ತರ್ ಮೆಂಗಲ್ ಅವರು ಮನೆಗೆ ತೆರಳುತ್ತಿದ್ದಾಗ ಸ್ಫೋಟ ಸಂಭವಿಸಿದ್ದರಿಂದ ಅದೃಷ್ಟವಶಾತ್‌ ಅಪಾಯದಿಂದ ಪಾರಾಗಿದ್ದಾರೆ.

ಪಖ್ತುಂಖ್ವಾ ಮಿಲ್ಲಿ ಅವಾಮಿ ಪಕ್ಷದ ಮುಖ್ಯಸ್ಥ ಮೆಹಮೂದ್ ಖಾನ್ ಅಚಕ್ಜೈ, ಅವಾಮಿ ರಾಷ್ಟ್ರೀಯ ಪಕ್ಷದ ಅಸ್ಗರ್ ಖಾನ್ ಅಚಕ್ಜೈ ಮತ್ತು ಬಿಎನ್‌ಪಿ ಮಾಜಿ ಸೆನೆಟರ್ ಮೀರ್ ಕಬೀರ್ ಮುಹಮ್ಮದ್ ಶೈ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಅವರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ.

ಆದಾಗ್ಯೂ, ಬಿಎನ್‌ಪಿಯ ಪ್ರಾಂತೀಯ ವಿಧಾನಸಭೆಯ ಮಾಜಿ ಸದಸ್ಯ (ಎಂಪಿಎ) ಮೀರ್ ಅಹ್ಮದ್ ನವಾಜ್ ಬಲೂಚ್, ಪಕ್ಷದ ಕಾರ್ಯದರ್ಶಿ ಮೂಸಾ ಜಾನ್ ಹಾಗೂ ಪಕ್ಷದ ಹಲವು ಕಾರ್ಯಕರ್ತರು, ಬೆಂಬಲಿಗರು ಗಾಯಗೊಂಡಿದ್ದಾರೆ.

ತಾವು ಸುರಕ್ಷಿತವಾಗಿರುವುದಾಗಿ ಬಿಎನ್‌ಪಿ ಮುಖ್ಯಸ್ಥ ಮೆಂಗಲ್ ಅವರು ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ ದೃಢಪಡಿಸಿದ್ದಾರೆ. 'ಸ್ಫೋಟದಲ್ಲಿ ಬಿಎನ್‌ಪಿಯ 15 ಕಾರ್ಯಕರ್ತರು ಪ್ರಾಣ ಕಳೆದುಕೊಂಡಿದ್ದಾರೆ. ಅವರ ಸಾವು ಹೃದಯ ವಿದ್ರಾವಕ' ಎಂದು ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಬಲೂಚಿಸ್ತಾನದ ಮುಖ್ಯಮಂತ್ರಿ ಮೀರ್ ಸರ್ಫ್ರಾಜ್ ಬುಗ್ತಿ, ದಾಳಿಯನ್ನು ಖಂಡಿಸಿದ್ದು, 'ಇದು ಮಾನವೀಯತೆ ವಿರುದ್ಧ ಶತ್ರುಗಳ ಹೇಡಿತನದ ಕೃತ್ಯ' ಎಂದು ಕರೆದಿದ್ದಾರೆ.

ದಾಳಿಯ ಹೊಣೆಯನ್ನು ಇದುವರೆಗೆ ಯಾವುದೇ ಗುಂಪು ಹೊತ್ತುಕೊಂಡಿಲ್ಲ. ಸದ್ಯ ಕ್ವೆಟ್ಟಾ ಪ್ರದೇಶದ ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.