
ಢಾಕಾ: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರಿಗೆ ಢಾಕಾ ವಿಶೇಷ ನ್ಯಾಯಾಲಯವು ಗುರುವಾರ 21 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಸರ್ಕಾರದ ವಸತಿ ಯೋಜನೆಯಲ್ಲಿ ಅಕ್ರಮ ಎಸಗಿರುವುದೂ ಸೇರಿ ಮೂರು ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಹಸೀನಾ ಅವರೊಂದಿಗೆ ಅವರ ಮಕ್ಕಳಾದ ಸಜೀಬ್ ವಾಜೆದ್ ಜಾಯ್ (54) ಮತ್ತು ಸೈಮಾ ವಾಜೆದ್ ಪುತಲ್ (52) ಅವರಿಗೂ ತಲಾ 5 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ವಿಚಾರಣೆಗೆ ಮೂವರೂ ಗೈರುಹಾಜರಾಗಿದ್ದರು.
2024ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ದಂಗೆಯ ಸಂದರ್ಭದಲ್ಲಿ ‘ಮಾನವೀಯತೆ ಮೇಲಿನ ದಾಳಿ’ ಕುರಿತ ಆರೋಪವು ಸಾಬೀತಾದ ನಂತರ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯು (ಐಸಿಟಿ) 78 ವರ್ಷದ ಹಸೀನಾ ಅವರಿಗೆ ನವೆಂಬರ್ 17ರಂದು ಮರಣ ದಂಡನೆ ವಿಧಿಸಿತ್ತು. ಈ ಶಿಕ್ಷೆ ಪ್ರಕಟಗೊಂಡ 10 ದಿನಗಳ ಅಂತರದಲ್ಲೇ ಢಾಕಾ ನ್ಯಾಯಾಲಯದ ತೀರ್ಪು ಪ್ರಕಟಗೊಂಡಿದೆ.
‘ಸರ್ಕಾರದ ವಸತಿ ಯೋಜನೆಯಡಿ ಹಸೀನಾ ಅವರು ಅಧಿಕಾರ ವ್ಯಾಪ್ತಿ ಮೀರಿ ಅಕ್ರಮವಾಗಿ ನಿವೇಶನ ಪಡೆದುಕೊಂಡಿರುವುದು ಸಾಬೀತಾಗಿದೆ’ ಎಂದು ಢಾಕಾ ನ್ಯಾಯಾಲಯದ ನ್ಯಾಯಾಧೀಶ ಮೊಹಮದ್ ಅಬ್ದುಲ್ಲಾ ಅಲ್ ಮಮುನ್ ತೀರ್ಪಿನಲ್ಲಿ ಹೇಳಿದ್ದಾರೆ. ಮೂರು ಭ್ರಷ್ಟಾಚಾರ ಪ್ರಕರಣಗಳಲ್ಲಿ ತಲಾ 7 ವರ್ಷಗಳಂತೆ ಒಟ್ಟು 21 ವರ್ಷಗಳ ಜೈಲು ಶಿಕ್ಷೆಯನ್ನು ನ್ಯಾಯಾಲಯ ಪ್ರಕಟಿಸಿದೆ.
ಹಸೀನಾ ಮತ್ತು ಅವರ ಕುಟುಂಬದ ಸದಸ್ಯರನ್ನು ಹೊರತುಪಡಿಸಿ ಬಾಂಗ್ಲಾದೇಶದ ಮಾಜಿ ಕಿರಿಯ ವಸತಿ ಸಚಿವ ಶರೀಫ್ ಅಹಮದ್ ಮತ್ತು ವಸತಿ ಇಲಾಖೆಯ ಅಧಿಕಾರಿಗಳು ಸೇರಿ ಒಟ್ಟು 20 ಜನರಿಗೆ ಈ ಪ್ರಕರಣದಲ್ಲಿ ವಿವಿಧ ಹಂತದ ಜೈಲು ಶಿಕ್ಷೆ ವಿಧಿಸಲಾಗಿದೆ. ಆರೋಪಿಗಳಲ್ಲಿ ಒಬ್ಬರು ಮಾತ್ರ ಕೋರ್ಟ್‌ಗೆ ಹಾಜರಾಗಿ ನೇರವಾಗಿ ವಿಚಾರಣೆ ಎದುರಿಸಿದರು. ಅವರಿಗೆ ಮೂರು ವರ್ಷ ಶಿಕ್ಷೆ ವಿಧಿಸಲಾಗಿದೆ.
2024ರ ಆಗಸ್ಟ್ 5ರಂದು ಬಾಂಗ್ಲಾದೇಶದ ಸರ್ಕಾರ ಪತನವಾದ ನಂತರ ದೇಶ ತೊರೆದಿರುವ ಹಸೀನಾ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.