ADVERTISEMENT

Bangladesh Protests | ಸಹಜ ಸ್ಥಿತಿಯತ್ತ ಬಾಂಗ್ಲಾದೇಶ

ಏಜೆನ್ಸೀಸ್
Published 24 ಜುಲೈ 2024, 14:00 IST
Last Updated 24 ಜುಲೈ 2024, 14:00 IST
   

ಢಾಕಾ: ಹಿಂಸಾಚಾರಪೀಡಿತ ಬಾಂಗ್ಲಾದೇಶವು ಸೀಮಿತ ವ್ಯಾಪ್ತಿಯೊಳಗೆ ಇಂಟರ್‌ನೆಟ್‌ನ ಮರುಸಂಪರ್ಕ ಹಾಗೂ ಸರ್ಕಾರಿ ಕಚೇರಿಗಳ ಆರಂಭದೊಂದಿಗೆ ನಿಧಾನವಾಗಿ ಸಹಜಸ್ಥಿತಿಗೆ ಮರಳುತ್ತಿದೆ.

ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಮೀಸಲಾತಿಗೆ ಸಂಬಂಧಿಸಿದ ವಿವಾದಾತ್ಮಕ ನೀತಿ ವಿರೋಧಿಸಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ್ದರಿಂದ ಬಾಂಗ್ಲಾದೇಶವು ತತ್ತರಿಸಿತ್ತು. ವಾರದ ಅವಧಿಯಲ್ಲಿ ಸುಮಾರು 200 ಮಂದಿ ಮೃತಪಟ್ಟಿರುವುದು ವರದಿಯಾಗಿತ್ತು.

ರಾಜಧಾನಿಯಲ್ಲಿ ಏಳು ತಾಸು ಕರ್ಫ್ಯೂ ಸಡಿಲಿಸಿದ್ದರಿಂದ ರಸ್ತೆ ಸಂಚಾರ ಪುನರಾರಂಭವಾಯಿತು. ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು ಬುಧವಾರ ಕೆಲ ತಾಸು ಕಾರ್ಯನಿರ್ವಹಿಸಿದವು. ಢಾಕಾ ಹಾಗೂ ಚಟ್ಟೋಗ್ರಾಮ್‌ನ ಕೆಲ ಪ್ರದೇಶಗಳಲ್ಲಿ ಇಂಟರ್‌ನೆಟ್‌ ಹಾಗೂ ಬ್ರಾಡ್‌ಬ್ಯಾಂಡ್‌ ಸೇವೆಗಳನ್ನು ಮರುಸ್ಥಾಪಿಸಲಾಗಿದೆ.

ADVERTISEMENT

ಜುಲೈ 16ರಿಂದ ನಡೆದ ಹಿಂಸಾಚಾರದಲ್ಲಿ ಕನಿಷ್ಠ 197 ಜನರು ಮೃತಪಟ್ಟಿದ್ದಾರೆ ಎಂದು ಬಂಗಾಳಿ ಭಾಷೆಯ ‘ಪ್ರೊಥೊಮ್ ಅಲೋ’ ಬುಧವಾರ ವರದಿ ಮಾಡಿದೆ. ಎಪಿ ಸುದ್ದಿಸಂಸ್ಥೆ ಸಾವಿನ ಸಂಖ್ಯೆಯನ್ನು ದೃಢಪಡಿಸಿಲ್ಲ.

‘ಹಂತಹಂತವಾಗಿ ಇಂಟರ್‌ನೆಟ್‌ ಸಂಪರ್ಕವನ್ನು ಮರುಸ್ಥಾಪಿಸಲಾಗುವುದು ಎಂದು ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ರಾಜ್ಯ ಸಚಿವ ಜುನೈದ್ ಅಹ್ಮದ್ ತಿಳಿಸಿದ್ದಾರೆ ಎಂದು ಢಾಕಾ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.