ADVERTISEMENT

ಬಾಂಗ್ಲಾದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ; ಸ್ಪಷ್ಟ ಬಹುಮತ ಸಾಧಿಸಿದ ಬಿಎನ್‌ಪಿ

ಪಿಟಿಐ
Published 13 ಫೆಬ್ರುವರಿ 2026, 2:13 IST
Last Updated 13 ಫೆಬ್ರುವರಿ 2026, 2:13 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಢಾಕಾ: 2024ರ ಆಗಸ್ಟ್‌ನಲ್ಲಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಸರ್ಕಾರ ಪತನಗೊಂಡ ಬಳಿಕ ಅಧಿಕಾರ ವಹಿಸಿಕೊಂಡಿದ್ದ ಮಧ್ಯಂತರ ಸರ್ಕಾರವನ್ನು ಬದಲಿಸಲು ನಡೆದ ಚುನಾವಣೆಯಲ್ಲಿ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (ಬಿಎನ್‌ಪಿ) ಭರ್ಜರಿ ಗೆಲುವಿನತ್ತ ಸಾಗಿದೆ.

ಒಟ್ಟು 300 ಸದಸ್ಯರ ಸಂಖ್ಯಾ ಬಲದ ಬಾಂಗ್ಲಾ ಸಂಸತ್ತಿನಲ್ಲಿ ಬಿಎನ್‌ಪಿ 151ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು, ಸ್ಪಷ್ಟ ಬಹುಮತ ದಾಖಲಿಸಿದೆ ಎಂದು ಬುಹುತೇಕ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಚುನಾವಣಾ ಆಯೋಗ (Election Commission) ಅಧಿಕೃತ ಘೋಷಣೆ ಮಾಡಿಲ್ಲ.

ADVERTISEMENT

300 ಕ್ಷೇತ್ರಗಳ ಪೈಕಿ ಇನ್ನೂ ಹಲವು ಕ್ಷೇತ್ರಗಳ ಮತ ಎಣಿಗೆ ಬಾಕಿ ಉಳಿದಿದೆ. ಅದಾಗ್ಯೂ ಬಿಎನ್‌ಪಿ ಸ್ಪಷ್ಟ ಬಹುಮತ ದಾಖಲಿಸಿದೆ ಎಂದು ವರದಿಯಾಗಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಅಂತಿಮ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ ಎಂದು ಚುನಾವಣಾ ಆಯೋಗದ ವಕ್ತಾರರು ತಿಳಿಸಿದ್ದಾರೆ.

ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವಾಮಿ ಲೀಗ್ ಪಕ್ಷದ ವಿಸರ್ಜನೆಯ ಬಳಿಕ, ಅದರ ಅನುಪಸ್ಥಿತಿಯಲ್ಲಿ ಬಿಎನ್‌ಪಿ ಮತ್ತು ಅದರ ಈ ಹಿಂದಿನ ಮಿತ್ರ ಪಕ್ಷ ಜಮಾತ್-ಇ-ಇಸ್ಲಾಮಿ ಪಕ್ಷಗಳ ನಡುವೆ ನೇರ ಸ್ಪರ್ಧೆ ಎದುರಾಗಿತ್ತು.

ಬಿಎನ್‌ಪಿ ಚುನಾವಣೆಯಲ್ಲಿ ಬಹುಮತ ಸಾಧಿಸಿದರೆ, ಅದರ ಅಧ್ಯಕ್ಷ ಮತ್ತು ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರ ತಾರಿಕ್ ರೆಹಮಾನ್ ಅವರು ಬಾಂಗ್ಲಾದೇಶದ ಮುಂದಿನ ಪ್ರಧಾನಿಯಾಗುತ್ತಾರೆ ಎಂದು ಬಿಎನ್‌ಪಿ ಈ ಹಿಂದೆಯೇ ಘೋಷಣೆ ಮಾಡಿದೆ.

300 ಲೋಕಸಭಾ ಕ್ಷೇತ್ರಗಳ ಪೈಕಿ 299 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಸ್ವತಂತ್ರ ಅಭ್ಯರ್ಥಿಗಳು ಸೇರಿ ಒಟ್ಟು 2,000ಕ್ಕೂ ಅಧಿಕ ಅಭ್ಯರ್ಥಿಗಳು ಕಣದಲ್ಲಿದ್ದರು. ಚುನಾವಣೆ ನಡುವೆ ಓರ್ವ ಅಭ್ಯರ್ಥಿ ನಿಧನರಾದ ಹಿನ್ನೆಲೆ ಆ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.