ADVERTISEMENT

ಬಾಂಗ್ಲಾದೇಶ: ಬಿಎನ್‌ಪಿಗೆ ಭಾರಿ ಬಹುಮತ; ಮಧ್ಯಂತರ ಸರ್ಕಾರದ ಅಧಿಕಾರಾವಧಿ ಮುಕ್ತಾಯ

ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪಾರ್ಟಿಗೆ ಮೂರನೇ ಎರಡು ಬಹುಮತ

ಪಿಟಿಐ
ಏಜೆನ್ಸೀಸ್
Published 14 ಫೆಬ್ರುವರಿ 2026, 0:30 IST
Last Updated 14 ಫೆಬ್ರುವರಿ 2026, 0:30 IST
<div class="paragraphs"><p>ಬಿಎನ್‌ಪಿ ನಾಯಕ ತಾರಿಕ್‌ ರೆಹಮಾನ್‌ ಅವರನ್ನು ಬೆಂಬಲಿಗರೊಬ್ಬರು ಅಭಿನಂದಿಸಿದರು</p></div>

ಬಿಎನ್‌ಪಿ ನಾಯಕ ತಾರಿಕ್‌ ರೆಹಮಾನ್‌ ಅವರನ್ನು ಬೆಂಬಲಿಗರೊಬ್ಬರು ಅಭಿನಂದಿಸಿದರು

   

ಢಾಕಾ: ಕಳೆದ ಒಂದು ವರ್ಷಕ್ಕಿಂತ ಅಧಿಕ ಕಾಲದಿಂದ ಬಾಂಗ್ಲಾದೇಶವು ಎದುರಿಸುತ್ತಿದ್ದ ರಾಜಕೀಯ ಅನಿಶ್ಚಿತತೆಯು ಅಂತ್ಯಗೊಂಡಿದೆ. ಗುರುವಾರ ಸಂಸತ್ತಿಗೆ ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪಾರ್ಟಿ (ಬಿಎನ್‌ಪಿ) ಮೈತ್ರಿಕೂಟವು 212 ಸ್ಥಾನಗಳನ್ನು ಗೆಲ್ಲುವ ಮೂಲಕ ಭಾರಿ ಬಹುಮತದೊಂದಿಗೆ ಅಧಿಕಾರ ವಹಿಸಿಕೊಳ್ಳಲಿದೆ.

ಈ ಮೂಲಕ ಮೊಹಮ್ಮದ್‌ ಯೂನುಸ್‌ ನೇತೃತ್ವದ ಮಧ್ಯಂತರ ಸರ್ಕಾರದ ಅಧಿಕಾರಾವಧಿ ಮುಕ್ತಾಯಗೊಂಡಿದೆ. ತಾರಿಕ್‌ ರೆಹಮಾನ್‌ ಅವರು ಪ್ರಧಾನಿಯಾಗಲಿದ್ದಾರೆ ಎಂದು ಬಿಎನ್‌ಪಿ ಘೋಷಿಸಿದೆ. ದೇಶದ ಇತಿಹಾಸದಲ್ಲಿ 35 ವರ್ಷಗಳ ಬಳಿಕ ಮೊದಲ ಬಾರಿಗೆ ಪುರುಷರೊಬ್ಬರು ಪ್ರಧಾನಿಯಾಗುತ್ತಿದ್ದಾರೆ.

ADVERTISEMENT

ಮೀಸಲಾತಿಯಲ್ಲಿ ಅನ್ಯಾಯ ಎಸಲಾಗುತ್ತಿದೆ ಎಂದು ಆರೋಪಿಸಿ 2024ರ ಜುಲೈನಲ್ಲಿ ವಿದ್ಯಾರ್ಥಿಗಳಿಂದ
ಚಳವಳಿ ನಡೆದಿತ್ತು. ಸಾವಿರಾರು ಜನರ ಮೃತಪಟ್ಟಿದ್ದರು. ಇದರ ಪರಿಣಾಮ ಅವಾಮಿ ಲೀಗ್‌ನ ಶೇಖ್‌ ಹಸೀನಾ ಅವರ ಸರ್ಕಾರ ಪತನಗೊಂತ್ತು. ಹಸೀನಾ ಅವರು ಬಾಂಗ್ಲಾದಿಂದ ಓಡಿಬಂದು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ.

ಸುಮಾರು 2 ದಶಕಗಳ ಬಳಿಕ ಬಿಎನ್‌ಪಿ ಮತ್ತೊಮ್ಮೆ ಅಧಿಕಾರದ ಗದ್ದುಗೆಗೆ ಏರುತ್ತಿದೆ. ಈ ಹಿಂದೆ ಬೇರೆ ಬೇರೆ ಅವಧಿಯಲ್ಲಿ ಮೂರು ಬಾರಿ ಈ ಪಕ್ಷ ಅಧಿಕಾರದಲ್ಲಿತ್ತು. ಬಿಎನ್‌ಪಿ ಪಕ್ಷವು 2024ರ ಚುನಾವಣೆಯನ್ನು
ಬಹಿಷ್ಕರಿಸಿತ್ತು.

ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಅವಾಮಿ ಲೀಗ್‌ ಪಕ್ಷವನ್ನು ನಿಷೇಧಿಸಲಾಗಿತ್ತು.

2018ರಲ್ಲಿ ಜಮಾತ್‌ ಎ ಇಸ್ಲಾಮಿ ಪಕ್ಷವನ್ನು ಹಸೀನಾ ಅವರು ನಿಷೇಧಿಸಿದ್ದರು. ಎಂಟು ವರ್ಷಗಳ ಬಳಿಕ ಈ ಪಕ್ಷವು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಎರಡನೇ ಅತಿ ದೊಡ್ಡ ‍ಪಕ್ಷವಾಗಿ ಹೊರಹೊಮ್ಮಿದೆ. ಇದರೊಂದಿಗೆ ಇನ್ನೂ 11 ಸಣ್ಣ ಸಣ್ಣ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದವು. 2001ರಿಂದ 2006ರ ಅವಧಿಯಲ್ಲಿ ಬಿಎನ್‌ಪಿ ನೇತೃತ್ವದ ಸರ್ಕಾರದಲ್ಲಿ ಜಮಾತ್‌ ಎ ಇಸ್ಲಾಮಿ ಅಧಿಕಾರ ಹಂಚಿಕೊಂಡಿತ್ತು.

ಭಾರತವೂ ಸೇರಿ ಎಲ್ಲ ದೇಶಗಳೊಂದಿಗೆ ಸಮಾನತೆಯಿಂದ ಕೂಡಿದ ಸಂಬಂಧವನ್ನು ಬಯಸುತ್ತೇವೆ. ವಿಚಾರಣೆ ಎದುರಿಸಲು ಹಸೀನಾ ಅವರನ್ನು ವಾಪಸು ಕಳುಹಿಸಿಕೊಡಿ ಎಂದು ಭಾರತ ಸರ್ಕಾರವನ್ನು ಕೋರಿದ್ದೇವೆ
ಸಲಾಹುದ್ದೀನ್‌ ಅಹಮ್ಮದ್‌, ಬಿಎನ್‌ಪಿ ನಾಯಕ

ಚಳವಳಿಯಲ್ಲಿ ಗೆದ್ದು, ಚುನಾವಣೆ ಸೋತರು

2024ರ ವಿದ್ಯಾರ್ಥಿಗಳ ಚಳವಳಿಯಿಂದ ಹುಟ್ಟಿಕೊಂಡಿದ್ದು ನ್ಯಾಷನಲ್‌ ಸಿಟಿಜನ್‌ ಪಾರ್ಟಿ (ಎನ್‌ಸಿಪಿ). ಈ ಪಕ್ಷವು ಮಧ್ಯಂತರ ಸರ್ಕಾರದ ಭಾಗವಾಗಿತ್ತು. ಚಳವಳಿಯಲ್ಲಿ ಮುಖ್ಯಭೂಮಿಕೆ ವಹಿಸಿದ್ದರೂ, ಭಾರಿ ಜನ ಬೆಂಬಲವಿದ್ದರೂ ಇದು ಚುನಾವಣೆಯಲ್ಲಿ ಗೆದ್ದಿದ್ದು 6 ಸ್ಥಾನಗಳನ್ನು ಮಾತ್ರ. ಸ್ಪರ್ಧಿಸಿದ್ದು 30 ಸ್ಥಾನಗಳಿಗೆ. ಜನಬೆಂಬಲವನ್ನು ಮತಗಳಾಗಿ ಪರಿವರ್ತಿಸಿಕೊಳ್ಳುವಲ್ಲಿ ಎನ್‌ಸಿಪಿ ಸಂಪೂರ್ಣ ಸೋತಿದೆ.

ಜಮಾತ್‌ ಎ ಇಸ್ಲಾಮಿ ಎಂಬ ಸಂಪೂರ್ಣ ಬಲಪಂಥೀಯವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದೇ ಎನ್‌ಸಿಪಿಯ ಹೀನಾಯ ಸೋಲಿಗೆ ಮುಖ್ಯ ಕಾರಣ ಎಂದು ಸ್ವತಃ ಇದೇ ಪಕ್ಷದ ಬೆಂಬಲಿಗರು ಹೇಳುತ್ತಿದ್ದಾರೆ. ಚುನಾವಣೆ ಘೋಷಣೆಯಾದಾಗ ಎಲ್ಲ ಸ್ಥಾನಗಳಲ್ಲಿ ಸ್ಪರ್ಧಿಸಬೇಕು ಎಂದು ಪಕ್ಷ ಚಿಂತನೆ ನಡೆಸಿತ್ತು. ಆದರೆ, ಕೊನೇ ಗಳಿಗೆಯಲ್ಲಿ ಮೈತ್ರಿ ಮಾಡಿಕೊಂಡಿತು.

‘ಚಳವಳಿಯ ಬಳಿಕ ಜನರು ಪಕ್ಷದ ಮೇಲೆ ಇಟ್ಟುಕೊಂಡಿದ್ದ ನಂಬಿಕೆಯನ್ನು ಉಳಿಸಿಕೊಳ್ಳಲು ಎನ್‌ಸಿಪಿಗೆ ಸಾಧ್ಯವಾಗಲಿಲ್ಲ. ಜಮಾತೆ ಪಕ್ಷದೊಂದಿಗೆ ಸೇರಿಕೊಂಡು ಅದು ನಮಗೆ ಮೋಸ ಮಾಡಿತು’ ಎಂದು ವಿದ್ಯಾರ್ಥಿನಿಯೊಬ್ಬರು ಅಭಿಪ್ರಾಯಪಟ್ಟರು.

ಸ್ವಯಂ ಗಡಿಪಾರಿನಿಂದ ಪ್ರಧಾನಿ ಹುದ್ದೆವರೆಗೆ...

ತಾರಿಕ್‌ ರೆಹಮಾನ್‌ ಅವರು ಬಾಂಗ್ಲಾದ ಮುಂದಿನ ಪ್ರಧಾನಿಯಾಗುವ ಹೊಸ್ತಿಲಲ್ಲಿದ್ದಾರೆ. ತಂದೆ ಜಿಯಾ ಉರ್‌ ರೆಹಮಾನ್‌ ಅವರು ಬಾಂಗ್ಲಾದ ರಾಷ್ಟ್ರಪತಿಯಾಗಿದ್ದರು. 1978ರಲ್ಲಿ ಬಿಎನ್‌ಪಿ ಪಕ್ಷವನ್ನು ಸ್ಥಾಪಿಸಿದರು. 1981ರಲ್ಲಿ ಇವರನ್ನು ಹತ್ಯೆ ಮಾಡಲಾಯಿತು. ಆ ಬಳಿಕ ತಾಯಿ ಖಾಲಿದಾ ಜಿಯಾ ಅವರು ಪಕ್ಷವನ್ನು ಮುನ್ನಡೆಸಿದರು ಮತ್ತು ಮೂರು ಬಾರಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

ಕುಟುಂಬ ರಾಜಕಾರಣದ ಹಿನ್ನೆಲೆಯವರು ಎನ್ನುವುದು ರೆಹಮಾನ್‌ ಅವರಿಗೆ ವರವಾಗಿಯೂ ವಿರೋಧಿಗಳಿಗೆ ದೋಷವಾಗಿಯೂ ಕಂಡುಬಂದಿದೆ. ಆದರೆ, ರಾಜಕೀಯ ಕುಟುಂಬದ ಕಾರಣದಿಂದಲೇ ಅವರು ಅತ್ಯುತ್ತಮ ರಾಜಕೀಯ ತಂತ್ರಗಾರರಾಗಿಯೂ ಬೆಳೆದಿದ್ದಾರೆ. ಈಗ 17 ವರ್ಷಗಳ ಬಳಿಕ ಮತ್ತೊಮ್ಮೆ ದೇಶದ ರಾಜಕಾರಣದ ಕೇಂದ್ರದಲ್ಲಿ ತಾರಿಕ್‌ ನಿಂತಿದ್ದಾರೆ. ರಾಜಕೀಯ ಅನಿಶ್ಚಿತತೆಯ ಈ ಕಾಲಘಟ್ಟದಲ್ಲಿ ದೇಶವನ್ನು ಮುನ್ನಡೆಸುವ ಹೊಣೆ ತಾರಿಕ್‌ ಮೇಲಿದೆ.

2025ರ ಡಿಸೆಂಬರ್‌ನಲ್ಲಿ ತಾಯಿ ಖಾಲಿದಾ ಅವರು ಮೃತಪಟ್ಟರು. ಆ ಬಳಿಕ, ತಾರಿಕ್‌ ಅವರು ಪಕ್ಷದ ಮುಖ್ಯಸ್ಥರಾಗಿದ್ದಾರೆ. ಬಹಳ ಸಂಕಷ್ಟದ ಕಾಲದಲ್ಲಿ ನೇತೃತ್ವ ವಹಿಸಿಕೊಂಡು ಪಕ್ಷವನ್ನು ಗೆಲುವಿನ ದಡ ಸೇರಿಸಿದರು ಎನ್ನುವ ಗರಿಮೆ ರೆಹಮಾನ್‌ ಅವರದ್ದು.

ಢಾಕಾದಲ್ಲಿ 1965 ನ.20ರಂದು ತಾರಿಕ್‌ ಜನಿಸಿದರು. ಬಾಂಗ್ಲಾ ವಿಮೋಚನೆಯ ಸಂದರ್ಭದಲ್ಲಿ ಸಣ್ಣ ವಯಸ್ಸಿನ ಈ ಬಾಲಕನ್ನೂ ಸೇರಿಸಿ ಸೆರೆ ಮನೆಯಲ್ಲಿಡಲಾಗಿತ್ತು. ಢಾಕಾ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಸಂಬಂಧ ಕುರಿತು ಅಧ್ಯಯನ ಮಾಡುತ್ತಿದ್ದ ಅವರು ಅರ್ಧದಲ್ಲಿಯೇ ಶಿಕ್ಷಣ ತೊರೆದರು. 2009ರ ಬಳಿಕ ನಿಧಾನವಾಗಿ ಪಕ್ಷದ ಕಾರ್ಯದಲ್ಲಿ ತೊಡಗಿಸಿಕೊಂಡರು.

ಅವಾಮಿ ಲೀಗ್‌ ಅಧಿಕಾರಕ್ಕೇರಿದ ಬಳಿಕ ತಾರಿಕ್‌ ಅವರು ಹಸೀನಾ ಅವರ ಮುಖ್ಯ ಗುರಿಯಾದರು. 2004ರ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಈ ಎಲ್ಲಾ ಆರೋಪಗಳನ್ನು ತಾರಿಕ್‌ ನಿರಾಕರಿಸಿದರು. ಎಲ್ಲವೂ ರಾಜಕೀಯ ಪ್ರೇರಿತ ಎಂದರು. ಬಳಿಕ, ಇವರು ಲಂಡನ್‌ಗೆ ಹೋಗಿ ನೆಲಸಿದರು. ಮಧ್ಯಂತರ ಸರ್ಕಾರ ಅಧಿಕಾರ ವಹಿಸಿಕೊಂಡ ಬಳಿಕ ತಾರಿಕ್‌ ಅವರ ಮೇಲಿದ್ದ ಎಲ್ಲ ಪ್ರಕರಣಗಳನ್ನು ಕೈಬಿಡಲಾಗಿತ್ತು.

*ಭಾರಿ ಬಹುಮತದೊಂದಿಗೆ ಗೆಲುವು ಸಾಧಿಸಿದರೂ ಯಾರೂ ವಿಜಯೋತ್ಸವ ಆಚರಿಸುವಂತಿಲ್ಲ. ವಿಶೇಷ ಪ್ರಾರ್ಥನೆ ಮಾಡುವಂತೆ ತಾರಿಕ್‌ ಅವರು ಕಾರ್ಯಕರ್ತರಿಗೆ, ನಾಯಕರಿಗೆ ಸೂಚಿಸಿದ್ದಾರೆ

*ಫಲಿತಾಂಶದ ಕುರಿತು ಜಮಾತ್‌ ಎ ಇಸ್ಲಾಮ್‌ ಮತ್ತು ಎನ್‌ಸಿಪಿ ಪಕ್ಷಗಳು ತಮ್ಮ ತಕರಾರುಗಳನ್ನು
ಮುಂದಿಟ್ಟಿದೆ. ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತ ಅನುಮಾನ ವ್ಯಕ್ತಪಡಿಸಿದೆ. ಚುನಾವಣೆಯಲ್ಲಿ ಅಕ್ರಮ ನಡೆದಿದ್ದರೆ, ದೇಶವ್ಯಾಪಿ ಹೋರಾಟ ನಡೆಸುವುದಾಗಿ ಜಮಾತ್‌ ಹೇಳಿದೆ. ಆದರೆ, ಈ ಎಲ್ಲಾ ಆರೋಪಗಳನ್ನು ಚುನಾವಣಾ ಆಯೋಗ ನಿರಾಕರಿಸಿದೆ

*ಬಿಎನ್‌ಪಿಯ ಹಿರಿಯ ನಾಯಕ, ಅಲ್ಪಸಂಖ್ಯಾತ ಹಿಂದೂ ಸಮುದಾಯಕ್ಕೆ ಸೇರಿದ ಗಾಯೇಶ್ವರ್ ಚಂದ್ರ ರಾಯ್ ಅವರು ಢಾಕಾದ ಕ್ಷೇತ್ರವೊಂದರಲ್ಲಿ ಗೆಲುವು ಸಾಧಿಸಿದರು. ಅಲ್ಪಸಂಖ್ಯಾತ ಹಿಂದೂ ಸಮುದಾಯದವರ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ ಎಂಬ ಆರೋಪ ಕೇಳಿಬರುತ್ತಿರುವ ಸಂದರ್ಭದಲ್ಲೇ ಈ ಗೆಲುವು ಬಂದಿದೆ.

ಬಿಎನ್‌ಪಿಯ ಹಿಂದೂ ನಾಯಕನಿಗೆ ಗೆಲುವು

ಬಿಎನ್‌ಪಿಯ ಹಿರಿಯ ನಾಯಕ, ಅಲ್ಪಸಂಖ್ಯಾತ ಹಿಂದೂ ಸಮುದಾಯಕ್ಕೆ ಸೇರಿದ ಗಾಯೇಶ್ವರ್ ಚಂದ್ರ ರಾಯ್ ಅವರು ರಾಜಧಾನಿ ಢಾಕಾದ ಕ್ಷೇತ್ರವೊಂದರಲ್ಲಿ ಗೆಲುವು ಸಾಧಿಸಿದರು.

ಢಾಕಾ–3 ಕ್ಷೇತ್ರದಿಂದ ಕಣಕ್ಕಿಳಿದ ರಾಯ್ 99,163 ಮತಗಳನ್ನು ಪಡೆದರೆ, ಸಮೀಪದ ಪ್ರತಿಸ್ಪರ್ಧಿ ಜಮಾತ್‌–ಎ–ಇಸ್ಲಾಮಿಯ ಮೊಹಮ್ಮದ್‌ ಶಾಹಿನುರ್‌ ಇಸ್ಲಾಮ್‌ 83,264 ಮತಗಳನ್ನು ಗಳಿಸಿದರು. 

ದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದವರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದೆ ಎಂಬ ಆರೋಪ ಕೇಳಿಬರುತ್ತಿರುವ ಸಂದರ್ಭದಲ್ಲೇ ಈ ಗೆಲುವು ಬಂದಿದೆ. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ಅದರಲ್ಲೂ ವಿಶೇಷವಾಗಿ ಹಿಂದೂಗಳ ಮೇಲಿನ ದಾಳಿಗಳ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ.

ಜಮಾತ್‌–ಎ–ಇಸ್ಲಾಮಿ ಕಣಕ್ಕಿಳಿಸಿದ ಏಕೈಕ ಹಿಂದೂ ಅಭ್ಯರ್ಥಿ ಸೋಲು ಅನುಭವಿಸಿದ್ದಾರೆ. ಖುಲ್ನಾ–1 ಕ್ಷೇತ್ರದಿಂದ ಕಣಕ್ಕಿಳಿದ ಕೃಷ್ಣ ನಂದಿ (70,346 ಮತಗಳು) ಅವರು ಬಿಎನ್‌ಪಿಯ ಅಮೀರ್‌ ಎಜಾಜ್ ಖಾನ್ (1,21,352 ಮತಗಳು) ಎದುರು ಪರಾಭವಗೊಂಡರು.

ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ಸನ್ನದುವಿಗೆ ಶೇ 86ರಷ್ಟು ಮತ

* ತಮ್ಮ ಮುಂದಿನ ಪ್ರಧಾನಿಯನ್ನು ಆಯ್ಕೆ ಮಾಡುವುದರೊಂದಿಗೆ ‘ಜುಲೈ ನ್ಯಾಷನಲ್‌ ಚಾಟರ್‌’ ಎಂಬ 84 ಅಂಶಗಳ ಸಾಂವಿಧಾನಿಕವಾದ ಕೆಲವು ಬದಲಾವಣೆಗಳನ್ನು ಮಾಡುವ ಸನ್ನದುವಿಗೂ ಮತ ಚಲಾಯಿಸುವಂತೆ ಕೋರಲಾಗಿತ್ತು. ಇದಕ್ಕೆ ಸುಮಾರು ಶೇ 68.1ರಷ್ಟು ಜನರು ‘ಯೆಸ್‌’ ಎಂದಿದ್ದಾರೆ. ಶೇ 31.9ರಷ್ಟು ಜನರು ‘ನೋ’ ಎಂದಿದ್ದಾರೆ. ಸರ್ಕಾರ ರಚನೆಗೊಂಡ 185 ದಿನಗಳ ಒಳಗೆ ಈ ಎಲ್ಲ ಅಂಶಗಳನ್ನು ಜಾರಿ ಮಾಡಬೇಕು.

ಹಸೀನಾ ಅವರು ಅಧಿಕಾರ ಬಿಟ್ಟು ಓಡಿಹೋದ ಮೇಲೆ ಯೂನುಸ್‌ ನೇತೃತ್ವದ ಸರ್ಕಾರ ಮತ್ತು ಕೆಲವು ಸಾಂವಿಧಾನಿಕ ಸಂಸ್ಥೆಗಳು ಸೇರಿ ಈ ಸನ್ನದುವನ್ನು ತಯಾರು ಮಾಡಿವೆ. ವ್ಯಕ್ತಿಯೊಬ್ಬರು ಎರಡು ಬಾರಿಗೆ ಮಾತ್ರವೇ ಪ್ರಧಾನಿಯಾಗಬಹುದು, ಸಂಸತ್ತಿನಲ್ಲಿ ಮೇಲ್ಮನೆ ಸ್ಥಾಪನೆ, ರಾಷ್ಟ್ರಪತಿಗೆ ಹೆಚ್ಚಿನ ಅಧಿಕಾರ, ನ್ಯಾಯಾಂಗದ ಸ್ವಾಯತ್ತೆ ಕಾಪಾಡುವುದು, ಸಂಸದೀಯ ಸಮಿತಿಗಳಿಗೆ ವಿರೋಧ ಪಕ್ಷಗಳ ನಾಯಕರನ್ನು ಮುಖ್ಯಸ್ಥರನ್ನಾಗಿಸುವ ಪ್ರವೃತ್ತಿ ಹೆಚ್ಚಿಸುವುದು ಈ ಸನ್ನದುವಿನ ಮುಖ್ಯ ವಿಚಾರಗಳು.

‘ಶಾಂತಿ, ಪ್ರಗತಿಗೆ ಭಾರತದ ಬದ್ಧತೆ’

ತಾರಿಕ್ ಅವರೊಂದಿಗೆ ಮಾತನಾಡಲು ತುಂಬಾ ಸಂತಸವಾಯಿತು. ಬಾಂಗ್ಲಾದೇಶದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಕ್ಕೆ ನಾನು ಅವರನ್ನು ಅಭಿನಂದಿಸಿದೆ. ಬಾಂಗ್ಲಾದೇಶದ ಜನರ ಆಕಾಂಕ್ಷೆಗಳನ್ನು ಪೂರೈಸುವ ಅವರ ಪ್ರಯತ್ನಕ್ಕೆ ಬೆಂಬಲ ಸೂಚಿಸಿದ್ದೇನೆ. ನೆರೆಹೊರೆಯವರಾಗಿದ್ದುಕೊಂಡು ಎರಡೂ ದೇಶಗಳ ಜನರ ಶಾಂತಿ, ಪ್ರಗತಿ ಮತ್ತು ಸಮೃದ್ಧಿಗೆ ನಿರಂತರ ಬದ್ಧತೆಯನ್ನು ನಾನು ಪುನರುಚ್ಚರಿಸಿದ್ದೇನೆ‌
ನರೇಂದ್ರ ಮೋದಿ, ಪ್ರಧಾನಿ

(ತಾರಿಕ್‌ ರೊಂದಿಗೆ ಕರೆ ಮಾಡಿ ಮಾತನಾಡಿದುದದರ ಸಾರಾಂಶ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.