ADVERTISEMENT

ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಖಾಲಿದಾ ಜಿಯಾ ನಿಧನ: ಸಾಗಿದ ಹಾದಿ ಹೀಗಿದೆ

ಪಿಟಿಐ
Published 30 ಡಿಸೆಂಬರ್ 2025, 14:20 IST
Last Updated 30 ಡಿಸೆಂಬರ್ 2025, 14:20 IST
ಖಾಲಿದಾ ಜಿಯಾ
ಖಾಲಿದಾ ಜಿಯಾ   

ಢಾಕಾ: ಮಿಲಿಟರಿ ಆಡಳಿತದ ನಂತರ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮತ್ತು ದಶಕಗಳ ಕಾಲ ದೇಶದ ರಾಜಕೀಯದಲ್ಲಿ ಸಕ್ರಿಯವಾಗಿದ್ದ ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಖಾಲಿದಾ ಜಿಯಾ (79) ಮಂಗಳವಾರ ನಿಧನರಾದರು.

ಮೂರು ಸಲ ಪ್ರಧಾನಿಯಾಗಿದ್ದ ಖಾಲಿದಾ ಅವರು ಸುದೀರ್ಘ ಅವಧಿಗೆ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಕ್ಷದ (ಬಿಎನ್‌ಪಿ) ಅಧ್ಯಕ್ಷರಾಗಿದ್ದರು. ‘ನನ್ನ ಅಮ್ಮ ಇನ್ನಿಲ್ಲ’ ಎಂದು ಜಿಯಾ ಅವರ ಹಿರಿಯ ಮಗ, ಬಿಎನ್‌ಪಿ ಹಂಗಾಮಿ ಅಧ್ಯಕ್ಷ ತಾರಿಕ್‌ ರೆಹಮಾನ್‌ ಅವರು ನಿಧನ ಸುದ್ದಿಯನ್ನು ಪ್ರಕಟಿಸಿದರು.

ಢಾಕಾದ ಎವರ್‌ಕೇರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಸ್ಥಳೀಯ ಕಾಲಮಾನ ಬೆಳಿಗ್ಗೆ 6ಕ್ಕೆ ಕೊನೆಯುಸಿರೆಳೆದರು ಎಂದು ಅವರ ಆರೋಗ್ಯವನ್ನು ನೋಡಿಕೊಳ್ಳುತ್ತಿದ್ದ ಡಾ. ಜಾಹಿದ್‌ ಹೊಸೇನ್‌ ಹೇಳಿದರು. ತಾರಿಕ್‌ ರೆಹಮಾನ್, ಅವರ ಪತ್ನಿ ಜುಬೇದಾ ರೆಹಮಾನ್ ಮತ್ತು ಪುತ್ರಿ ಝೈಮಾ ಸೇರಿದಂತೆ ಜಿಯಾ ಅವರ ಕುಟುಂಬದ ಸದಸ್ಯರು ಈ ವೇಳೆ ಆಸ್ಪತ್ರೆಯಲ್ಲಿದ್ದರು.

ADVERTISEMENT

ಆರೋಗ್ಯ ತಪಾಸಣೆಗಾಗಿ ಜಿಯಾ ಅವರನ್ನು ನವೆಂಬರ್ 23ರಂದು ಎವರ್‌ಕೇರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ವೈದ್ಯರು ಅವರ ಎದೆಯಲ್ಲಿ ಸೋಂಕು ಇರುವುದನ್ನು ಪತ್ತೆಹಚ್ಚಿ ಚಿಕಿತ್ಸೆ ಮುಂದುವರಿಸಲು ನಿರ್ಧರಿಸಿದ್ದರು. ನವೆಂಬರ್‌ 27ರಂದು ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಆಸ್ಪತ್ರೆಯ ಕೊರೊನರಿ ಕೇರ್‌ ವಿಭಾಗಕ್ಕೆ (ಸಿಸಿಯು) ಸ್ಥಳಾಂತರಿಸಲಾಗಿತ್ತು.

ಜಿಯಾ ಅವರು ಯಕೃತ್ತು ಮತ್ತು ಮೂತ್ರಪಿಂಡದ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆ, ಅಧಿಕ ರಕ್ತದೊತ್ತಡ, ಮಧುಮೇಹ, ಸಂಧಿವಾತ ಮತ್ತು ಸೋಂಕು ಸಂಬಂಧಿತ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಈ ವರ್ಷದ ಆರಂಭದಲ್ಲಿ ಅವರು ಲಂಡನ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

ಜಿಯಾ ಅವರು ನವೆಂಬರ್ 21ರಂದು ಢಾಕಾ ಕಂಟೋನ್ಮೆಂಟ್‌ನಲ್ಲಿ ನಡೆದ ಸಶಸ್ತ್ರ ಪಡೆಗಳ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು. ಅವರು ಕೊನೆಯದಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಸಮಾರಂಭ ಅದಾಗಿದೆ.

ಅವರ ನಾಲ್ಕು ದಶಕಗಳ ರಾಜಕೀಯ ಪ್ರಯಾಣವು ಹಲವು ಏರಿಳಿತಗಳಿಂದ ಕೂಡಿದೆ. ದೇಶದ ಪ್ರಮುಖ ಪಕ್ಷವನ್ನು ಮುನ್ನಡೆಸಿ ಪ್ರಧಾನಿ ಹುದ್ದೆಗೆ ಏರಿದ ಅವರು ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆಯನ್ನೂ ಅನುಭವಿಸಿದರು.

ಅವರ ರಾಜಕೀಯ ಪ್ರವೇಶ ಪೂರ್ವಯೋಜಿತವಾಗಿರಲಿಲ್ಲ. ಅದನ್ನು ಆಕಸ್ಮಿಕ ಎಂದೇ ನೋಡಲಾಗುತ್ತದೆ. 35ನೇ ವಯಸ್ಸಿನಲ್ಲಿ ವಿಧವೆಯಾದ ಅವರು ಒಂದು ದಶಕದ ಬಳಿಕ ಪ್ರಧಾನಿ ಹುದ್ದೆ ಅಲಂಕರಿಸಿದರು.

ಪತಿ ಹಾಗೂ ಬಾಂಗ್ಲಾದ ಮಾಜಿ ಅಧ್ಯಕ್ಷ ಜಿಯಾವುರ್‌ ರೆಹಮಾನ್‌ ಅವರು ಸೇನಾ ದಂಗೆಯಲ್ಲಿ 1981ರ ಮೇ 30ರಂದು ಹತ್ಯೆಯಾದ ಬಳಿಕವಷ್ಟೇ ಅವರು ರಾಜಕೀಯ ಪ್ರವೇಶಿಸಿದರು. ಅದುವರೆಗೂ ಅವರು ಬಾಂಗ್ಲಾದ ‘ಪ್ರಥಮ ಮಹಿಳೆ’ ಎಂದಷ್ಟೇ ಗುರುತಿಸಲ್ಪಡುತ್ತಿದ್ದರು. ರಾಜಕೀಯ ಕ್ಷೇತ್ರದೊಂದಿಗೆ ಹೆಚ್ಚಿನ ಒಡನಾಟ ಇಟ್ಟುಕೊಂಡಿರಲಿಲ್ಲ.

ಢಾಕಾದಲ್ಲಿ 2015ರಲ್ಲಿ ಖಾಲಿದಾ ಜಿಯಾ ಮತ್ತು ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ಕ್ಷಣ

2015ರಲ್ಲಿ ಖಾಲಿದಾ ಅವರ ಭೇಟಿಯ ಕ್ಷಣವನ್ನು ನೆನಪಿಸಿಕೊಳ್ಳುವೆ. ಅವರ ದೂರದೃಷ್ಟಿಯು ಭಾರತ–ಬಾಂಗ್ಲಾ ಪಾಲುದಾರಿಕೆಗೆ ಮಾರ್ಗದರ್ಶನ ನೀಡುವುದನ್ನು ಮುಂದುವರಿಸುತ್ತದೆ ಎಂದು ಭಾವಿಸುವೆ
ನರೇಂದ್ರ ಮೋದಿ ಪ್ರಧಾನಿ
ಖಾಲಿದಾ ಜಿಯಾ ಅವರು ಸುದೀರ್ಘ ಸಾರ್ವಜನಿಕ ಜೀವನದುದ್ದಕ್ಕೂ ಬಾಂಗ್ಲಾದೇಶದ ರಾಜಕೀಯಕ್ಕೆ ಹೊಸ ಹಾದಿಯನ್ನು ತೋರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ
ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ
ರಾಷ್ಟ್ರವು ಒಬ್ಬ ರಾಜಕೀಯ ನಾಯಕಿಯನ್ನು ಮಾತ್ರವಲ್ಲದೆ ಬಾಂಗ್ಲಾದ ಇತಿಹಾಸದಲ್ಲಿ ಪ್ರಮುಖ ಅಧ್ಯಾಯವನ್ನು ಪ್ರತಿನಿಧಿಸಿದ ಒಬ್ಬ ಮುತ್ಸದ್ದಿಯನ್ನು ಕಳೆದುಕೊಂಡಿದೆ
ಮೊಹಮ್ಮದ್‌ ಯೂನುಸ್‌ ಬಾಂಗ್ಲಾ ಮಧ್ಯಂತರ ಸರ್ಕಾರದ ಮುಖ್ಯಸ್ಥ
ಮೊದಲ ಮಹಿಳಾ ಪ್ರಧಾನಿಯಾಗಿ ಮತ್ತು ಪ್ರಜಾಪ್ರಭುತ್ವವನ್ನು ಸ್ಥಾಪಿಸಲು ನಡೆದ ಹೋರಾಟಕ್ಕೆ ನೀಡಿದ ಬೆಂಬಲಕ್ಕಾಗಿ ಜಿಯಾ ಅವರು ಸದಾ ಸ್ಮರಿಸಲ್ಪಡುವರು
ಶೇಖ್‌ ಹಸೀನಾ ಬಾಂಗ್ಲಾದ ಪದಚ್ಯುತ ಪ್ರಧಾನಿ

ಖಾಲಿದಾ ಸಾಗಿದ ಹಾದಿ...

* 1946ರ ಆಗಸ್ಟ್‌ 15ರಂದು ಅವಿಭಜಿತ ಭಾರತದ ದಿನಾಜ್‌ಪುರ (ಪಶ್ಚಿಮ ಬಂಗಾಳದಲ್ಲಿದೆ) ಜಿಲ್ಲೆಯಲ್ಲಿ ತಯ್ಯಬಾ– ಇಸ್ಕಂದರ್‌ ಮಜುಮ್ದಾರ್‌ ದಂಪತಿಗೆ ಜನನ

* 1981ರ ಮೇ 30ರಂದು ಪತಿ ಮಾಜಿ ಅಧ್ಯಕ್ಷ ಜಿಯಾವುರ್‌ ರೆಹಮಾನ್‌ ಹತ್ಯೆಯ ಬಳಿಕ ಸಕ್ರಿಯ ರಾಜಕಾರಣ ಪ್ರವೇಶ

* 1982ರ ಜನವರಿ 3ರಂದು ಬಿಎನ್‌ಪಿ ಪಕ್ಷದ ಸದಸ್ಯರಾದರು. ಈ ಪಕ್ಷವನ್ನು ಜಿಯಾವುರ್‌ ರೆಹಮಾನ್‌ ಅವರು 1978ರಲ್ಲಿ ಸ್ಥಾಪಿಸಿದ್ದರು

* 1983ರ ಮಾರ್ಚ್‌ನಲ್ಲಿ ಪಕ್ಷದ ಉಪಾಧ್ಯಕ್ಷರಾದ ಅವರು 1984ರ ಮೇನಲ್ಲಿ ಅಧ್ಯಕ್ಷರಾದರು

* 1982ರಲ್ಲಿ ಅಂದಿನ ಸೇನಾ ಮುಖ್ಯಸ್ಥ ಜನರಲ್‌ ಎಚ್‌.ಎಂ.ಇರ್ಷಾದ್‌ ನೇತೃತ್ವದಲ್ಲಿ ನಡೆದ ಸೇನಾ ದಂಗೆಯ ಬಳಿಕ ಪ್ರಜಾಪ್ರಭುತ್ವ ಮರು ಸ್ಥಾಪಿಸುವ ನಿಟ್ಟಿನಲ್ಲಿ ಹೋರಾಟ ಆರಂಭಿಸಿದರು

* 1990ರ ಡಿಸೆಂಬರ್‌ನಲ್ಲಿ ಇರ್ಷಾದ್‌ ನೇತೃತ್ವದ ಸೇನಾಡಳಿತ ಕೊನೆಗೊಂಡ ಬಳಿಕ 1991ರ ಫೆಬ್ರುವರಿಯಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಿತು

* ಚುನಾವಣೆಯಲ್ಲಿ ಗೆದ್ದ ಬಿಎನ್‌ಪಿ ಪಕ್ಷದ ಖಾಲಿದಾ ಅವರು 1991ರಲ್ಲಿ ಬಾಂಗ್ಲಾದ ಮೊದಲ ಮಹಿಳಾ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು 

* 1996ರ ಚುನಾವಣೆಯಲ್ಲೂ ಬಿಎನ್‌ಪಿ ಗೆಲುವು ಸಾಧಿಸಿ ಖಾಲಿದಾ ಎರಡನೇ ಬಾರಿ ಪ್ರಧಾನಿ ಹುದ್ದೆಗೇರಿದರು. ಆದರೆ ಅವರ ಸರ್ಕಾರ 12 ದಿನ ಮಾತ್ರ ಅಧಿಕಾರದಲ್ಲಿತ್ತು. ಜಿಯಾ ಅವರ ಸರ್ಕಾರ ಹಂಗಾಮಿ ಸರ್ಕಾರಕ್ಕೆ ಅಧಿಕಾರ ಹಸ್ತಾಂತರಿಸಿತು

* 1999ರಲ್ಲಿ ಇತರ ಪಕ್ಷಗಳ ಜತೆ ಸೇರಿಕೊಂಡು ಮೈತ್ರಿಕೂಟ ರಚಿಸಿದರು. 2001ರ ಚುನಾವಣೆಯಲ್ಲಿ ಗೆದ್ದು ಮೂರನೇ ಬಾರಿ ಪ್ರಧಾನಿ ಹುದ್ದೆಗೇರಿ 2006ರವರೆಗೆ ಅಧಿಕಾರ ನಡೆಸಿದರು

* 2007ರಲ್ಲಿ ಭ್ರಷ್ಟಾಚಾರ ಆರೋಪದಲ್ಲಿ ಬಂಧನಕ್ಕೆ ಒಳಗಾದರು. ಸೇನಾಡಳಿತದ ಅವಧಿಯಲ್ಲಿ ಹಲವು ಬಾರಿ ಗೃಹಬಂಧನಕ್ಕೂ ಒಳಗಾದರು

ಅಂತ್ಯಕ್ರಿಯೆ

ಇಂದು ಖಾಲಿದಾ ಜಿಯಾ ನಿಧನದ ಕಾರಣದಿಂದ ಬಾಂಗ್ಲಾದೇಶದಲ್ಲಿ ಮೂರು ದಿನ ಶೋಕಾಚರಣೆ ನಡೆಯಲಿದೆ. ಅಂತ್ಯಕ್ರಿಯೆ ನಡೆಯಲಿರುವ ಬುಧವಾರ ಸಾರ್ವಜನಿಕ ರಜೆ ಘೋಷಿಸಲಾಗಿದೆ ಎಂದು ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನುಸ್ ಪ್ರಕಟಿಸಿದರು. ಖಾಲಿದಾ ಅವರ ಅಂತ್ಯಸಂಸ್ಕಾರದ ವೇಳೆ ಮತ್ತು ದೇಶದಾದ್ಯಂತ ಶೋಕಾಚರಣೆಯ ಸಮಯದಲ್ಲಿ ಜನರು ಶಿಸ್ತು ಮತ್ತು ಶಾಂತಿ ಕಾಪಾಡಿಕೊಳ್ಳಬೇಕು ಎಂದು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಅವರು ಮನವಿ ಮಾಡಿದರು.

ಜೈಶಂಕರ್‌ ಭಾಗಿ

ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ಭಾರತದ ಪ್ರತಿನಿಧಿಯಾಗಿ ಖಾಲಿದಾ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.