
ಢಾಕಾ: ಬಾಂಗ್ಲಾದೇಶದಲ್ಲಿ ಫೆ.12ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಸೋಮವಾರ ವಿವಿಧ ಪಕ್ಷಗಳು ಬಿರುಸಿನ ಪ್ರಚಾರ ನಡೆಸಿದವು. ರಾಜಧಾನಿ ಢಾಕಾ ಸೇರಿದಂತೆ ಹಲವು ಕಡೆಗಳಲ್ಲಿ ಅಬ್ಬರದ ರ‍್ಯಾಲಿಗಳು ನಡೆದವು.
ಮತದಾನಕ್ಕೆ 48 ಗಂಟೆಗಳ ಮುಂಚೆ, ಅಂದರೆ ಮಂಗಳವಾರ ಬೆಳಿಗ್ಗೆ 7.30ಕ್ಕೆ ಪ್ರಚಾರಕ್ಕೆ ತೆರೆ ಬೀಳಲಿದೆ. ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರನ್ನು ಅಧಿಕಾರದಿಂದ ಕೆಳಗಿಸಲು ಕಾರಣವಾದ 2024ರ ದಂಗೆಯನ್ನು ಪಕ್ಷಗಳು ಪ್ರಚಾರದ ಪ್ರಮುಖ ವಿಷಯವನ್ನಾಗಿ ಬಳಸಿಕೊಂಡವು.
17 ವರ್ಷ ಗಡಿಪಾರಿನಲ್ಲಿದ್ದ, ತಾರಿಕ್ ರೆಹಮಾನ್ ಅವರ ನೇತೃತ್ವದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಕ್ಷವು (ಬಿಎನ್‌ಪಿ) ಚುನಾವಣೆಯಲ್ಲಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆಗಳು ಅಂದಾಜಿಸಿವೆ. ಮಾಜಿ ಪ್ರಧಾನಿ, ದಿವಂಗತ ಖಾಲಿದಾ ಜಿಯಾ ಅವರ ನಿಧನದ ಬಳಿಕ ಪುತ್ರ ರೆಹಮಾನ್ ಅವರು ಪಕ್ಷದ ಅಧ್ಯಕ್ಷತೆ ವಹಿಸಿಕೊಂಡಿದ್ದಾರೆ.
ರೆಹಮಾನ್ ಅವರು ಢಾಕಾದಲ್ಲಿ ಭಾನುವಾರ ಬೃಹತ್ ರ್‍ಯಾಲಿ ನಡೆಸಿದರು. ಜಮಾತ್-ಎ-ಇಸ್ಲಾಮಿ ಪಕ್ಷದ ಮುಖ್ಯಸ್ಥ ಶಫೀಕುರ್ ರೆಹಮಾನ್ ಅವರು ಢಾಕಾ ಹೊರವಲಯದ ಮೀರ್‌ಪುರದಲ್ಲಿ ಪ್ರಚಾರ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.