
ಢಾಕಾದ ಮತದಾನ ಕೇಂದ್ರವೊಂದಕ್ಕೆ ಬುಧವಾರ ಮತಪೆಟ್ಟಿಗೆಗಳನ್ನು ಪೊಲೀಸ್ ಭದ್ರತೆಯಲ್ಲಿ ಸಾಗಿಸಲಾಯಿತು
ಢಾಕಾ: ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಯ ಮತದಾನ ಗುರುವಾರ ನಡೆಯಲಿದ್ದು, 12.77 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮತದಾನ ಪ್ರಕ್ರಿಯೆ ಸುಸೂತ್ರವಾಗಿ ನಡೆಯಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.
ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಅಧಿಕಾರದಿಂದ ಕೆಳಗಿಳಿದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದೆ. 2024ರ ಆಗಸ್ಟ್‌ನಲ್ಲಿ ವಿದ್ಯಾರ್ಥಿಗಳು ದೇಶದಾದ್ಯಂತ ಪ್ರತಿಭಟನೆ ನಡೆಸಿ ಹಸೀನಾ ನೇತೃತ್ವದ ಸರ್ಕಾರವನ್ನು ಕಿತ್ತುಹಾಕಿದ್ದರು.
ಶೇ 50ಕ್ಕೂ ಅಧಿಕ ಮತದಾನ ಕೇಂದ್ರಗಳನ್ನು ‘ಸೂಕ್ಷ್ಮ’ ಅಥವಾ ‘ಅತಿಸೂಕ್ಷ್ಮ’ ಎಂದು ಗುರುತಿಸಲಾಗಿದ್ದು, ಭದ್ರತೆಗಾಗಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ‘ಸೂಕ್ಷ್ಮ’ ಮತದಾನ ಕೇಂದ್ರಗಳಲ್ಲಿ ಶೇ 90ರಷ್ಟು ಕೂಡಾ ಸಿ.ಸಿ.ಟಿ.ವಿ ಕ್ಯಾಮೆರಾ ಕಣ್ಗಾವಲಿನಲ್ಲಿರಲಿವೆ’ ಎಂದು ಚುನಾವಣಾ ಆಯುಕ್ತ ಅಬುಲ್ ಫಝಲ್ ಮೊಹಮ್ಮದ್ ಸನಾವುಲ್ಲಾ ತಿಳಿಸಿದರು.
‘ಮುಕ್ತ, ನ್ಯಾಯಯುತ ಮತ್ತು ನಿಷ್ಪಕ್ಷಪಾತ ಚುನಾವಣೆಯನ್ನು ಖಚಿತಪಡಿಸಿಕೊಳ್ಳಲು ದೇಶದಾದ್ಯಂತ ಸುಮಾರು 9.58 ಲಕ್ಷ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದೇ ಮೊದಲ ಬಾರಿಗೆ, ಚುನಾವಣಾ ಭದ್ರತೆಗಾಗಿ ಯುಎವಿಗಳು (ಮಾನವರಹಿತ ವೈಮಾನಿಕ ವಾಹನ), ಡ್ರೋನ್‌ಗಳು ಮತ್ತು ಬಾಡಿ ವೋರ್ನ್ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
300 ಕ್ಷೇತ್ರಗಳ ಪೈಕಿ 299 ಕ್ಷೇತ್ರಗಳಿಗೆ ಗುರುವಾರ ಮತದಾನ ನಡೆಯಲಿದೆ. ಶೇರ್‌ಪುರ್-3 ಕ್ಷೇತ್ರದ ಅಭ್ಯರ್ಥಿಯೊಬ್ಬರು ಮೃತಪಟ್ಟಿರುವ ಕಾರಣ ಮತದಾನ ಮುಂದೂಡಲಾಗಿದೆ.
ಬೆಳಿಗ್ಗೆ 7.30ರಿಂದ ಸಂಜೆ 4.30ರವರೆಗೆ ಮತದಾನ ನಡೆಯಲಿದೆ. ಮತದಾನ ಕೊನೆಗೊಂಡ ಬೆನ್ನಲ್ಲೇ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಶುಕ್ರವಾರ ಬೆಳಿಗ್ಗೆ ಅಧಿಕೃತ ಫಲಿತಾಂಶ ಹೊರಬೀಳುವ ಸಾಧ್ಯತೆಯಿದೆ. ಒಟ್ಟು ಮತದಾರರಲ್ಲಿ ಹೊಸ ಮತದಾರರ ಪ್ರಮಾಣ ಶೇ 3.58ರಷ್ಟಿದೆ ಎಂದು ಚುನಾವಣಾ ಆಯೋಗದ ಮಾಹಿತಿ ತಿಳಿಸಿದೆ.
ಈ ಬಾರಿಯ ಚುನಾವಣೆಯಲ್ಲಿ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ಮತ್ತು ಜಮಾತ್–ಎ–ಇಸ್ಲಾಮಿ ನಡುವೆ ಪೈಪೋಟಿ ಏರ್ಪಟ್ಟಿದೆ. ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷಕ್ಕೆ ಸ್ಪರ್ಧಿಸಲು ಅವಕಾಶ ನೀಡಿಲ್ಲ.
50 ರಾಜಕೀಯ ಪಕ್ಷಗಳಿಂದ 1,755 ಅಭ್ಯರ್ಥಿಗಳು ಮತ್ತು 273 ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಎನ್‌ಪಿಯು ಅತಿಹೆಚ್ಚು ಅಂದರೆ 291 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.