
ಢಾಕಾ: ಬಾಂಗ್ಲಾದೇಶದ ನರಸಿಂಗ್ಡಿ ಜಿಲ್ಲೆಯ ಪಲಾಶ್ ಉಪಜಿಲಾದ ಚಾರ್‌ಸಿಂಧೂರ್ ಬಜಾರ್‌ನ ದಿನಸಿ ಅಂಗಡಿ ಮಾಲೀಕ, ಹಿಂದೂ ಧರ್ಮದ ಮೋನಿ ಚಕ್ರವರ್ತಿ (40) ಎಂಬವರ ಮೇಲೆ ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ದುಷ್ಕರ್ಮಿಗಳು ಹರಿತವಾದ ಆಯುಧದಿಂದ ದಾಳಿ ನಡೆಸಿ, ಹತ್ಯೆ ಮಾಡಿದ್ದಾರೆ.
ಬಾಂಗ್ಲಾದೇಶದ ಜೆಸ್ಸೋರ್ ಜಿಲ್ಲೆಯಲ್ಲಿ ಪತ್ರಿಕೆಯೊಂದರ ಹಂಗಾಮಿ ಸಂಪಾದಕರೂ ಆಗಿದ್ದ ಹಿಂದೂ ಉದ್ಯಮಿ ರಾಣಾ ಪ್ರತಾಪ್ ಬೈರಾಗಿ ಎಂಬವರ ತಲೆಗೆ ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿ ಕೊಲೆ ಮಾಡಿದ ಕೆಲವೇ ಗಂಟೆಗಳ ನಂತರ, ಸೋಮವಾರ ರಾತ್ರಿ ಈ ಘಟನೆ ನಡೆದಿದೆ.
‘ಶಿಬ್‌ಪುರ ಉಪಜಿಲಾದ ಸಾಧರ್‌ಚಾರ್ ಒಕ್ಕೂಟದ ಮದನ್ ಠಾಕೂರ್ ಅವರ ಪುತ್ರರಾದ ಮೋನಿ ಅವರು ಅಂಗಡಿ ಬಾಗಿಲು ಮುಚ್ಚಿ ಮನೆಗೆ ಹಿಂತಿರುಗುತ್ತಿದ್ದಾಗ ದುಷ್ಕರ್ಮಿಗಳು ಆಯುಧದಿಂದ ಹಲ್ಲೆ ನಡೆಸಿದ್ದರಿಂದ ಸ್ಥಳದಲ್ಲೇ ಕುಸಿದುಬಿದ್ದರು. ಸ್ಥಳೀಯರು ಅವರನ್ನು ಪಲಾಶ್ ಉಪಜಿಲ್ಲಾ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಆದರೆ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಪಲಾಶ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಶಾಹೆದ್ ಅಲ್ ಮಾಮುನ್ ತಿಳಿಸಿದ್ದಾರೆ.
ಮೋನಿ ಅವರು ಅನೇಕ ವರ್ಷಗಳಿಂದ ಚಾರ್‌ಸಿಂಧೂರ್ ಬಜಾರ್‌ನಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದರು. ಇವರು ಇತ್ತೀಚಿನ ದಿನಗಳಲ್ಲಿ ಹತ್ಯೆಯಾದ ಮೂರನೇ ಹಿಂದೂ ವ್ಯಕ್ತಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.