ಸಾವು (ಪ್ರಾತಿನಿಧಿಕ ಚಿತ್ರ)
ಢಾಕಾ: ಉತ್ತರ ಬಾಂಗ್ಲಾದೇಶದ ದಿನಾಜ್‌ಪುರ ಜಿಲ್ಲೆಯಲ್ಲಿ ಹಿಂದೂ ಸಮುದಾಯದ ನಾಯಕನನ್ನು ಅಪಹರಿಸಿ, ಹತ್ಯೆ ಮಾಡಲಾಗಿದೆ ಎಂದು ಮಾಧ್ಯಮ ವರದಿಯೊಂದು ಶುಕ್ರವಾರ ತಿಳಿಸಿದೆ.
ಢಾಕಾದಿಂದ ವಾಯವ್ಯಕ್ಕೆ ಸುಮಾರು 330 ಕಿಲೋಮೀಟರ್ ದೂರದಲ್ಲಿರುವ ದಿನಾಜ್‌ಪುರದ ಬಸುದೇಬ್‌ಪುರ ಗ್ರಾಮದ ನಿವಾಸಿ ಭಬೇಶ್ ಚಂದ್ರ ರಾಯ್(58) ಅವರ ಮೃತದೇಹ ಗುರುವಾರ ರಾತ್ರಿ ಪತ್ತೆಯಾಗಿದೆ ಎಂದು ಪೊಲೀಸರು ಮತ್ತು ಕುಟುಂಬ ಸದಸ್ಯರ ಹೇಳಿಕೆಯನ್ನು ಉಲ್ಲೇಖಿಸಿ 'ದಿ ಡೈಲಿ ಸ್ಟಾರ್' ವರದಿ ಮಾಡಿದೆ.
ರಾಯ್ ಅವರ ಪತ್ನಿ ಶಾಂತನಾ ಅವರು ಡೈಲಿ ಸ್ಟಾರ್‌ಗೆ ನೀಡಿದ ಮಾಹಿತಿಯ ಪ್ರಕಾರ, ಗುರುವಾರ ಸಂಜೆ 4.30ರ ಸುಮಾರಿಗೆ ಅವರಿಗೆ ಫೋನ್ ಕರೆ ಬಂದಿತ್ತು. ಸುಮಾರು 30 ನಿಮಿಷಗಳ ನಂತರ, 2 ಬೈಕ್‌ಗಳಲ್ಲಿ ಬಂದ ನಾಲ್ವರು ಭಬೇಶ್ ಅವರನ್ನು ಮನೆಯಿಂದಲೇ ಅಪಹರಿಸಿದ್ದಾರೆ. ಬಳಿಕ ರಾಯ್ ಅವರನ್ನು ನರಬರಿ ಗ್ರಾಮಕ್ಕೆ ಕರೆದೊಯ್ದು, ಅಲ್ಲಿ ಅವರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಲಾಗಿದೆ.
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಕುಟುಂಬ ಸದಸ್ಯರು ದಿನಾಜ್‌ಪುರದ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದರು ಎಂದಿದ್ದಾರೆ.
ರಾಯ್ ಬಾಂಗ್ಲಾದೇಶ ಪೂಜಾ ಉದ್ಜಪನ್ ಪರಿಷತ್ತಿನ ಬೀರಲ್ ಘಟಕದ ಉಪಾಧ್ಯಕ್ಷರಾಗಿದ್ದರು. ಅಲ್ಲದೇ ಆ ಪ್ರದೇಶದ ಹಿಂದೂ ಸಮುದಾಯದ ಪ್ರಮುಖ ನಾಯಕರಾಗಿದ್ದರು.
ಪ್ರಕರಣ ದಾಖಲಿಸಲು ಸಿದ್ಧತೆ ನಡೆಯುತ್ತಿದೆ ಎಂದು ಬೀರಲ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಅಬ್ದುಸ್ ಸಬೂರ್ ಹೇಳಿದ್ದಾರೆ ಎಂದು ಡೈಲಿ ಸ್ಟಾರ್ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.