ADVERTISEMENT

ನಮ್ಮನ್ನು ಕೊಲ್ತಾ ಇದೀರಿ: ಕಚೇರಿಗೆ ಬೆಂಕಿ ಇಟ್ಟವರಿಗೆ ಬಾಂಗ್ಲಾ ಪತ್ರಕರ್ತೆ ಸಂದೇಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಡಿಸೆಂಬರ್ 2025, 7:20 IST
Last Updated 19 ಡಿಸೆಂಬರ್ 2025, 7:20 IST
<div class="paragraphs"><p>'ಪ್ರೋಥೋಮ್ ಅಲೋ' ಪತ್ರಿಕಾ ಕಚೇರಿಗೆ ಬೆಂಕಿ ಹಚ್ಚಿರುವುದು</p></div>

'ಪ್ರೋಥೋಮ್ ಅಲೋ' ಪತ್ರಿಕಾ ಕಚೇರಿಗೆ ಬೆಂಕಿ ಹಚ್ಚಿರುವುದು

   

ಚಿತ್ರ ಕೃಪೆ: ಪಿಟಿಐ

'ಜುಲೈ ದಂಗೆ' ನಾಯಕ ಷರೀಫ್‌ ಒಸ್ಮಾನ್‌ ಹಾದಿ ಹತ್ಯೆ ಬೆನ್ನಲ್ಲೇ, ಬಾಂಗ್ಲಾದೇಶದ ಹಲವೆಡೆ ಶುಕ್ರವಾರ ಪ್ರತಿಭಟನೆಗಳು, ಹಿಂಸಾಚಾರ ತೀವ್ರಗೊಂಡಿವೆ.

ADVERTISEMENT

ಪ್ರತಿಭಟನಾಕಾರರು ಬೀದಿಗಿಳಿದಿದ್ದು, ದೇಶದ ಪ್ರಮುಖ ದಿನಪತ್ರಿಕೆಗಳಾದ 'ಪ್ರೋಥೋಮ್ ಅಲೋ' ಹಾಗೂ 'ಡೈಲಿ ಸ್ಟಾರ್‌' ಕಚೇರಿಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ಕುರಿತಾದ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಢಾಕಾದ ಬಿಜೋಯ್‌ನಗರ ಪ್ರದೇಶದಲ್ಲಿ ಚುನಾವಣಾ ಪ್ರಚಾರಕ್ಕೆ ಸಿದ್ಧತೆ ನಡೆಸುತ್ತಿದ್ದ ಒಸ್ಮಾನ್ ಅವರ ತಲೆಗೆ ಮುಸುಕುಧಾರಿಯೊಬ್ಬ  ಕಳೆದವಾರ ಗುಂಡು ಹಾರಿಸಿದ್ದ. ಗಂಭೀರ ಸ್ಥಿತಿಯಲ್ಲಿದ್ದ ಅವರಿಗೆ ಸಿಂಗಪುರದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದಾಗ್ಯೂ ಅವರು, ಗುರುವಾರ ಮೃತಪಟ್ಟಿದ್ದಾರೆ.

ನಿಧನದ ಸುದ್ದಿ ಹೊರಬೀಳುತ್ತಿದ್ದಂತೆ, ಭಾರತ ವಿರೋಧಿ ಘೋಷಣೆಗಳೂ ಮೊಳಗಲಾರಂಭಿಸಿವೆ.

ಪತ್ರಿಕಾ ಕಚೇರಿಗಳ ಮೇಲೆ ಗುರುವಾರ ಮಧ್ಯರಾತ್ರಿ ದಾಳಿ ಮಾಡಿರುವ ಪ್ರತಿಭಟನಾಕಾರರು, ಕಟ್ಟಡಗಳಿಗೆ ಬೆಂಕಿ ಹಚ್ಚಿದ್ದಾರೆ.

ಮೊದಲು, 'ಡೈಲಿ ಸ್ಟಾರ್‌' ಕಚೇರಿ ಮೇಲೆ ದಾಳಿ ನಡೆಸಿ, ಬೆಂಕಿ ಹಚ್ಚಲಾಗಿದೆ. ಕಟ್ಟಡದ ಎರಡು ಮಹಡಿಗಳಿಗೆ ಬೆಂಕಿ ವ್ಯಾಪಿಸುತ್ತಿದ್ದಂತೆ, ರಾತ್ರಿಪಾಳಿಯಲ್ಲಿ ಕೆಲಸ ಮಾಡುತ್ತಿದ್ದವರು ಮೇಲ್ಛಾವಣಿಯಲ್ಲಿ ಆಶ್ರಯ ಪಡೆದಿದ್ದರು.

ಭಾರಿ ಜನಸಂದಣಿ ಇದ್ದ ಕಾರಣ, ಅಗ್ನಿಶಾಮಕ ವಾಹನ, ಸಿಬ್ಬಂದಿ ತಕ್ಷಣವೇ ಘಟನಾ ಸ್ಥಳಕ್ಕೆ ತಲುಪಲು ಸಾಧ್ಯವಾಗಿರಲಿಲ್ಲ ಎಂದು ವರದಿಯಾಗಿದೆ.

'ನನ್ನನ್ನು ಕೊಲ್ಲುತ್ತಿದ್ದೀರಿ'
'ಕಟ್ಟಡದಲ್ಲಿ ದಟ್ಟ ಹೊಗೆ ಆವರಿಸಿದೆ. ನಾನು ಒಳಗಿದ್ದೇನೆ. ಉಸಿರಾಡಲು ಸಾಧ್ಯವಾಗುತ್ತಿಲ್ಲ. ನೀವು ನನ್ನನ್ನು ಕೊಲ್ಲುತ್ತಿದ್ದೀರಿ' ಎಂದು ಪತ್ರಿಕೆಯ ವರದಿಗಾರ್ತಿ ಝೈಮಾ ಇಸ್ಲಾಂ ಎಂಬವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ತಡರಾತ್ರಿ 2ರ ಸುಮಾರಿಗೆ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿರುವ ಅಗ್ನಿಶಾಮಕ ಸಿಬ್ಬಂದಿ, ಕನಿಷ್ಠ 25 ಪತ್ರಕರ್ತರನ್ನು ರಕ್ಷಿಸಿದ್ದಾರೆ. 'ಡೈಲಿ ಸ್ಟಾರ್‌' ಕಚೇರಿ ಹೊರಗೆ ಸೇನೆಯನ್ನು ನಿಯೋಜಿಸಲಾಗಿದೆ ಎಂದು ವರದಿಯಾಗಿದೆ.

'ಡೈಲಿ ಸ್ಟಾರ್‌ ಪತ್ರಿಕೆಯ ಎಲ್ಲ ಸಿಬ್ಬಂದಿಯನ್ನು ಯಶಸ್ವಿಯಾಗಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಅಗ್ನಿಶಾಮಕ ದಳದ ಎಲ್ಲ ಸಿಬ್ಬಂದಿಗೆ ಧನ್ಯವಾದಗಳು' ಎಂದು ಮತ್ತೊಬ್ಬ ಪತ್ರಕರ್ತ ಮಹ್ಮುದ್ ಹಸನ್‌ ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.