
ನವದೆಹಲಿ/ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಸರ್ಕಾರದ ಪತನಕ್ಕೆ ಕಾರಣವಾಗಿದ್ದ ವಿದ್ಯಾರ್ಥಿಗಳ ಗುಂಪು (ಸ್ಟೂಡೆಂಟ್ಸ್ ಅಗೈನ್ಸ್ಟ್ ಡಿಸ್ಕ್ರಿಮಿನೇಷನ್) ಇದೀಗ ನ್ಯಾಷನಲ್ ಸಿಟಿಜನ್ ಪಾರ್ಟಿ (ಎನ್‌ಸಿಪಿ) ಹೆಸರಿನಲ್ಲಿ ಅಧಿಕೃತವಾಗಿ ಬಾಂಗ್ಲಾದೇಶದ ರಾಜಕೀಯ ಪಕ್ಷವಾಗಿ ನೋಂದಣಿಯಾಗಿದೆ.
ಎನ್‌ಸಿಪಿ ಪಕ್ಷದ ಚಿಹ್ನೆಯಾಗಿ ತಾವರೆ ಹೂವಿನ ಮೊಗ್ಗಿನ ಚಿತ್ರವನ್ನು ಚುನಾವಣಾ ಆಯೋಗವು ನಿಗದಿಪಡಿಸಿದೆ. ಮುಂದಿನ ಫೆಬ್ರುವರಿಯಲ್ಲಿ ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆ ಇದೆ. ಈ ನಡುವೆಯೇ ಎನ್‌ಸಿಪಿ ನೋಂದಣಿಯಾಗಿರುವುದು ಮಹತ್ವ ಪಡೆದಿದೆ. ಎಲ್ಲಾ 300 ಕ್ಷೇತ್ರಗಳಲ್ಲೂ ಎನ್‌ಸಿಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಚಿಂತನೆ ನಡೆಸುತ್ತಿದೆ ಎಂದೂ ತಿಳಿದುಬಂದಿದೆ.
ತಾವರೆ ಹೂವು ಬಾಂಗ್ಲಾದೇಶದ ರಾಷ್ಟ್ರೀಯ ಚಿಹ್ನೆಯೂ ಆಗಿದ್ದು, ಇದೇ ಚಿಹ್ನೆಯನ್ನು ತಮ್ಮ ಪಕ್ಷಕ್ಕೆ ನೀಡಬೇಕೆಂದು ಎನ್‌ಸಿಪಿ ಈ ಹಿಂದೆ ಮನವಿ ಮಾಡಿತ್ತು. ಆದರೆ, ಚುನಾವಣಾ ಆಯೋಗದ ಅನುಮೋದನೆ ಪಡೆದಿರುವ 115 ಚಿಹ್ನೆಗಳ ಪೈಕಿ ಈ ಚಿಹ್ನೆ ಇಲ್ಲದ ಕಾರಣ ಅದಕ್ಕೆ ಅನುಮತಿ ನಿರಾಕರಿಸಲಾಗಿತ್ತು.
ಇದಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುವುದಾಗಿಯೂ ಎನ್‌ಸಿಪಿ ಎಚ್ಚರಿಕೆ ನೀಡಿತ್ತು. ಬಳಿಕ ತಾವರೆ ಮೊಗ್ಗಿನ ಚಿತ್ರವನ್ನು ಪಕ್ಷದ ಚಿಹ್ನೆಯಾಗಿ ಹಂಚಿಕೆ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.