ADVERTISEMENT

ಚಿನ್ಮಯಿ ಕೃಷ್ಣದಾಸ್‌ಗೆ ಜಾಮೀನು ನಿರಾಕರಿಸಿದ ಬಾಂಗ್ಲಾದೇಶದ ನ್ಯಾಯಾಲಯ

ಪಿಟಿಐ
Published 2 ಜನವರಿ 2025, 6:57 IST
Last Updated 2 ಜನವರಿ 2025, 6:57 IST
<div class="paragraphs"><p>ಚಿನ್ಮಯ ಕೃಷ್ಣ ದಾಸ್ ಬ್ರಹ್ಮಚಾರಿ</p></div>

ಚಿನ್ಮಯ ಕೃಷ್ಣ ದಾಸ್ ಬ್ರಹ್ಮಚಾರಿ

   

ಢಾಕಾ: ದೇಶದ್ರೋಹ ಪ್ರಕರಣದಲ್ಲಿ ಬಂಧಿತರಾಗಿರುವ ಹಿಂದೂ ಮುಖಂಡ, ಇಸ್ಕಾನ್‌ನ ಮಾಜಿ ನಾಯಕ ಚಿನ್ಮಯಿ ಕೃಷ್ಣದಾಸ್ ಅವರಿಗೆ ಚಟ್ಟೋಗ್ರಾಮದ ನ್ಯಾಯಾಲಯ ಗುರುವಾರ ಜಾಮೀನು ನಿರಾಕರಿಸಿತು.

ಚಿನ್ಮಯ್‌ ಅವರು ವಿಚಾರಣೆಗೆ ವರ್ಚುವಲ್‌ ಆಗಿ ಹಾಜರಾದರು. ಅವರ ಪರ ವಾದಿಸಲು 11 ವಕೀಲರಿದ್ದ ತಂಡ ಹಾಜರಿತ್ತು. ಸುಮಾರು 30 ನಿಮಿಷಗಳವರೆಗೆ ವಿಚಾರಣೆ ನಡೆಯಿತು.

ADVERTISEMENT

ವಾದ, ಪ್ರತಿವಾದಗಳನ್ನು ಆಲಿಸಿದ ಮೆಟ್ರೊಪಾಲಿಟನ್‌ ಸೆಷನ್ಸ್ ನ್ಯಾಯಾಧೀಶ ಮೊಹಮ್ಮದ್‌ ಸೈಫುಲ್‌ ಇಸ್ಲಾಂ ಅವರು ಚಿನ್ಮಯಿ ಕೃಷ್ಣದಾಸ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು ಎಂದು ನ್ಯಾಯಾಲಯದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಬಾಂಗ್ಲಾದೇಶ ಸಮ್ಮಿಲಿತ ಸನಾತನಿ ಜಾಗರಣ್ ಜೋತೆ’ ವಕ್ತಾರರಾದ ಚಿನ್ಮಯಿ ಕೃಷ್ಣದಾಸ್ ಅವರನ್ನು ನವೆಂಬರ್ 25ರಂದು ಢಾಕಾದ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಅವರಿಗೆ ಜಾಮೀನು ನಿರಾಕರಿಸಿದ್ದ ಚಟ್ಟೋಗ್ರಾಮದ ನ್ಯಾಯಾಲಯವು, ಜೈಲಿಗೆ ಕಳುಹಿಸಿತ್ತು.

ಚಿನ್ಮಯಿ ಅವರು ಬಾಂಗ್ಲಾ ದೇಶದ ಧ್ವಜವನ್ನು ಅಪವಿತ್ರ ಗೊಳಿಸಿದ ಆರೋಪದ ಮೇರೆಗೆ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ, ಬಂಧಿಸಲಾಯಿತು. ಅವರ ಬಂಧನ ವಿರೋಧಿಸಿ ಪ್ರತಿಭಟನೆಗಳು ನಡೆದಿದ್ದ ವಲ್ಲದೇ, ಹಿಂಸಾಚಾರಕ್ಕೆ ತಿರುಗಿತ್ತು. ವಕೀಲರೊಬ್ಬರ ಹತ್ಯೆ ನಡೆದ ಮೇಲೆ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿತು. 

‘ಚಿನ್ಮಯಿ ಅವರು ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ್ದಾರೆ ಎಂಬ ಆರೋಪ ನಿರಾಧಾರ. ಏಕೆಂದರೆ ಅದು ರಾಷ್ಟ್ರಧ್ವಜವಾಗಿರಲಿಲ್ಲ. ಹೀಗಾಗಿ ಈ ಪ್ರಕರಣ ಮುಂದುವರಿಸಲು ಯೋಗ್ಯವಲ್ಲ ಎಂದು ನಾವು
ನ್ಯಾಯಾಲಯದಲ್ಲಿ ವಾದಿಸಿದೆವು’ ಎಂದು ಚಿನ್ಮಯಿ ಪರ ವಕೀಲ ಅಪೂರ್ವ ಕುಮಾರ್‌ ಭಟ್ಟಾಚಾರ್ಯ ಸುದ್ದಿಗಾರರಿಗೆ ತಿಳಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಮೊಫಿಜುಲ್‌ ಹಕ್‌ ಭುಯಾನ್‌, ‘ಈ ಜಾಮೀನು ಅರ್ಜಿಯನ್ನು ನಾವು ವಿರೋಧಿಸಿದೆವು. ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ’ ಎಂದರು. ಕೋರ್ಟ್‌ ಸುತ್ತ ಪೊಲೀಸರು ಬಿಗಿ ಬಂದೋಬಸ್ತ್‌ ವ್ಯವಸ್ಥೆ ಕಲ್ಪಿಸಿದ್ದರು.

ಕೋಲ್ಕತ್ತ: ಇಸ್ಕಾನ್‌ ಬೇಸರ

ಕೋಲ್ಕತ್ತ: ಚಿನ್ಮಯಿ ಕೃಷ್ಣದಾಸ್‌ ಅವರಿಗೆ ಬಾಂಗ್ಲಾದೇಶದ ನ್ಯಾಯಾಲಯ ಜಾಮೀನು ನಿರಾಕರಿಸಿದ್ದಕ್ಕೆ ಕೋಲ್ಕತ್ತದ ಇಸ್ಕಾನ್‌ ಬೇಸರ ವ್ಯಕ್ತಪಡಿಸಿದೆ.

‘ಚಿನ್ಮಯಿ ಅವರ ಜಾಮೀನು ಮನವಿಯನ್ನು ನಿರಾಕರಿಸಿರುವುದು ದುಃಖಕರ. ಹೊಸ ವರ್ಷದಲ್ಲಿ ಅವರ ಬಿಡುಗಡೆಯಾಗುತ್ತದೆ ಎಂದು ನಾವು ಭಾವಿಸಿದ್ದೆವು’ ಎಂದು ಕೋಲ್ಕತ್ತದ ಇಸ್ಕಾನ್‌ ವಕ್ತಾರ ರಾಧಾರಮಣ್‌ ದಾಸ್‌ ಹೇಳಿದ್ದಾರೆ.

‘ಆದರೆ, ಈ ಬಾರಿ ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ದಾಸ್‌ ಅವರನ್ನು ವಕೀಲರು ಪ್ರತಿನಿಧಿಸಿದ್ದರು ಎಂಬುದು ತುಸು ಸಮಾಧಾನ ತರಿಸಿದೆ. ಈ ಹಿಂದಿನ ವಿಚಾರಣೆಗಳಲ್ಲಿ ಹೀಗಾಗಿರಲಿಲ್ಲ’ ಎಂದು ಅವರು ತಿಳಿಸಿದ್ದಾರೆ.

‘40 ದಿನಗಳಿಂದ ಜೈಲಿನಲ್ಲಿರುವ ಚಿನ್ಮಯಿ ಅವರ ಆರೋಗ್ಯ ಹದಗೆಟ್ಟಿರುವ ಬಗ್ಗೆ ವರದಿಯಾಗಿದೆ. ಹೀಗಾಗಿ ಅವರಿಗೆ ಜಾಮೀನು ದೊರೆಯಬಹುದು ಎಂಬ ನಿರೀಕ್ಷೆ ಇತ್ತು’ ಎಂದ ಅವರು, ‘ವಕೀಲರು ಈ ಕುರಿತು ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಯೋಚಿಸಿರಬಹುದು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.