ADVERTISEMENT

ಬಾಂಗ್ಲಾ ವಿಮಾನ ದುರಂತ | 25 ಮಕ್ಕಳು ಸೇರಿ 27 ಮಂದಿ ಸಾವು; ಹಲವರ ಸ್ಥಿತಿ ಗಂಭೀರ

ಪಿಟಿಐ
Published 22 ಜುಲೈ 2025, 6:00 IST
Last Updated 22 ಜುಲೈ 2025, 6:00 IST
   

ಢಾಕಾ(ಬಾಂಗ್ಲಾದೇಶ): ವಾಯುಪಡೆ ವಿಮಾನ ದುರಂತದಲ್ಲಿ ಸಾವಿನ ಸಂಖ್ಯೆ 27ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

‘ಮೃತರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ. ಸುಮಾರು 170 ಮಂದಿ ಗಾಯಗೊಂಡಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ಮೃತರಾದ 27 ಜನರಲ್ಲಿ 25 ಮಕ್ಕಳಿದ್ದಾರೆ. ಪೈಲಟ್‌ ಲೆಫ್ಟಿನೆಂಟ್ ಮೊಹಮ್ಮದ್ ಟೋಕಿರ್ ಇಸ್ಲಾಂ ಮೃತರಲ್ಲಿ ಒಬ್ಬರು’ ಎಂದು ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರ ವಿಶೇಷ ಸಲಹೆಗಾರ ಸೈದೂರ್ ರೆಹಮಾನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ವಿಮಾನ ದುರಂತದಲ್ಲಿ ಮೃತಪಟ್ಟವರಿಗೆ ಗೌರವಾರ್ಥವಾಗಿ ಇಂದು ದೇಶದಾದ್ಯಂತ ಶೋಕಾಚರಣೆ ಘೋಷಿಸಲಾಗಿದೆ. ಎಲ್ಲಾ ಸರ್ಕಾರಿ, ಅರೆ ಸರ್ಕಾರಿ, ಸ್ವಾಯತ್ತ ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗುವುದು ಎಂದು ಹೇಳಿದ್ದಾರೆ.

ADVERTISEMENT

ಸೋಮವಾರ ಮಧ್ಯಾಹ್ನ 1:06ಕ್ಕೆ ಟೇಕ್‌ಆಫ್‌ ಆದ ಎಫ್‌–7 ಬಿಜಿಐ ತರಬೇತಿ ವಿಮಾನವು, ಢಾಕಾ ಸಮೀಪದ ಉತ್ತರಾ ಪ್ರದೇಶದಲ್ಲಿನ ಮೈಲ್‌ಸ್ಟೋನ್‌ ಶಾಲೆ ಮತ್ತು ಕಾಲೇಜು ಆವರಣದಲ್ಲಿನ ಎರಡು ಮಹಡಿಯ ಕಟ್ಟಡಕ್ಕೆ ಅಪ್ಪಳಿಸಿತ್ತು.

ಅಪಘಾತ ಸಂಭವಿಸಿದ ಕೂಡಲೇ ಭಾರಿ ಶಬ್ದದೊಂದಿಗೆ ದೊಡ್ಡ ಪ್ರಮಾಣದಲ್ಲಿ ಬೆಂಕಿ ಮತ್ತು ಹೊಗೆ ಕಾಣಿಸಿಕೊಂಡಿತು. ತಕ್ಷಣವೇ ಪೊಲೀಸರು, ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.