ADVERTISEMENT

ಧಾರ್ಮಿಕ ಕಟ್ಟಡಕ್ಕೆ ಅನುಮತಿ ಇಲ್ಲ: ಅಲ್ಪಸಂಖ್ಯಾತರ ರಕ್ಷಣೆಗೆ ಬದ್ಧ; ಬಾಂಗ್ಲಾದೇಶ

ಪಿಟಿಐ
Published 28 ಜೂನ್ 2025, 14:00 IST
Last Updated 28 ಜೂನ್ 2025, 14:00 IST
<div class="paragraphs"><p>ಧಾರ್ಮಿಕ ಕಟ್ಟಡಕ್ಕೆ ಅನುಮತಿ ಇಲ್ಲ</p></div>

ಧಾರ್ಮಿಕ ಕಟ್ಟಡಕ್ಕೆ ಅನುಮತಿ ಇಲ್ಲ

   

ಢಾಕಾ: ‘ಸಾರ್ವಜನಿಕ ಸ್ಥಳದಲ್ಲಿ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸಲು ಯಾವುದೇ ಪರಿಸ್ಥಿತಿಯಲ್ಲೂ ಅನುಮತಿ ನೀಡುವುದಿಲ್ಲ’ ಎಂದು ಬಾಂಗ್ಲಾದೇಶ ಹೇಳಿದೆ.

‘ದೇಶದಲ್ಲಿರುವ ಎಲ್ಲ ಸಮುದಾಯದವರ ಹಕ್ಕುಗಳನ್ನು ಕಾಪಾಡಲು ಹಾಗೂ ಪೂಜಾ ಸ್ಥಳಗಳನ್ನು ರಕ್ಷಿಸಲು ಬದ್ಧ’ ಎಂದು ಇದೇ ಸಂದರ್ಭ ಪುನರುಚ್ಚರಿಸಿದೆ.

ADVERTISEMENT

ಢಾಕಾದಲ್ಲಿ ದುರ್ಗಾ ದೇವಾಲಯವನ್ನು ಧ್ವಂಸಗೊಳಿಸಿದ ಘಟನೆಯನ್ನು ಭಾರತವು ಖಂಡಿಸಿದ ಒಂದು ದಿನದ ನಂತರ, ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯ ಈ ರೀತಿ ಪ್ರತಿಕ್ರಿಯೆ ನೀಡಿದೆ. ಹಿಂದೂಗಳು ಮತ್ತು ಅವರ ಧಾರ್ಮಿಕ ಸಂಸ್ಥೆಗಳನ್ನು ರಕ್ಷಿಸುವುದಾಗಿಯೂ ಹೇಳಿದೆ.

ಢಾಕಾದ ಖಿಲ್‌ಖೆತ್‌ ಪ್ರದೇಶದಲ್ಲಿದ್ದ ದೇಗುಲವನ್ನು ಬಾಂಗ್ಲಾದ ರೈಲ್ವೆ ಒಡೆತನದ ಭೂಮಿಯಲ್ಲಿ ನಿರ್ಮಿಸಲಾಗಿತ್ತು ಎಂದು ಸಚಿವಾಲಯ ಹೇಳಿಕೊಂಡಿದೆ.

ಸಾರ್ವಜನಿಕ ಭೂಮಿಯನ್ನು ವಾಪಸ್‌ ಪಡೆಯಲು ಅಗತ್ಯವಿರುವ ಸೂಕ್ತ ಪ್ರಕ್ರಿಯೆ ನಡೆಸಿದ ನಂತರವೇ ಕ್ರಮಕೈಗೊಳ್ಳಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಬಿಎಸ್‌ಎಸ್‌ ಸುದ್ದಿಸಂಸ್ಥೆ ವರದಿ ಮಾಡಿದೆ.

ದೇಗುಲವನ್ನು ತಾತ್ಕಾಲಿಕವಾಗಿ ನಿರ್ಮಿಸಲಾಗಿತ್ತು. ಸಂಘಟಕರಿಗೆ ಹಲವು ಬಾರಿ ಎಚ್ಚರಿಕೆ ನೀಡಿದರೂ, ತಾತ್ಕಾಲಿಕ ವ್ಯವಸ್ಥೆಯನ್ನೇ ಶಾಶ್ವತವಾಗಿಸಲು ಯತ್ನಿಸಿದರು. ಜೂನ್‌ 26ರಂದು ರೈಲ್ವೆಯು, ಖಿಲ್‌ಖೆತ್‌ ಪ್ರದೇಶದ ರೈಲು ಹಳಿಯ ಎರಡೂ ಬದಿಗಳಲ್ಲಿದ್ದ ಎಲ್ಲ ಒತ್ತುವರಿಯನ್ನು ತೆರವುಗೊಳಿಸಿದೆ ಎಂದು ಹೇಳಿದೆ.

ಸರ್ಕಾರ ಭದ್ರತೆ ಒದಗಿಸಲಿ: ಜೈಸ್ವಾಲ್‌

‘ಢಾಕಾದ ಖಿಲ್‌ಖೆತ್‌ನಲ್ಲಿರುವ ದುರ್ಗಾ ದೇಗುಲವನ್ನು ಕೆಡವಲು ಉಗ್ರವಾದಿಗಳು ಹುಯಿಲೆಬ್ಬಿಸಿದ್ದಾರೆ. ಮಧ್ಯಂತರ ಸರ್ಕಾರವು ದೇಗುಲಕ್ಕೆ ಭದ್ರತೆ ಒದಗಿಸುವ ಬದಲು ಇದನ್ನು ಸರ್ಕಾರಿ ಭೂಮಿಯ ಅತಿಕ್ರಮಣ ಎಂದು ಬಿಂಬಿಸುತ್ತಿದೆ’ ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ಹೇಳಿದ್ದಾರೆ.

‘ಹಿಂದೂಗಳು ಅವರ ಆಸ್ತಿ ಹಾಗೂ ಧಾರ್ಮಿಕ ಸ್ಥಳಗಳನ್ನು ರಕ್ಷಿಸುವುದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಜವಾಬ್ದಾರಿಯಾಗಿದೆ’ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.