ADVERTISEMENT

ಭಾರತ–ಬಾಂಗ್ಲಾ ಗಡಿಯಲ್ಲಿ ಉದ್ವಿಗ್ನ: ಭಾರತದ ರಾಯಭಾರಿಗೆ ಸಮನ್ಸ್

ಐದು ಸ್ಥಳಗಳಲ್ಲಿ ತಂತಿ ಬೇಲಿ ನಿರ್ಮಾಣ ಮಾಡಲು ಮಧ್ಯಂತರ ಸರ್ಕಾರ ವಿರೋಧ

ಪಿಟಿಐ
Published 12 ಜನವರಿ 2025, 14:38 IST
Last Updated 12 ಜನವರಿ 2025, 14:38 IST
<div class="paragraphs"><p>ಬಾಂಗ್ಲಾ ಗಡಿಯಲ್ಲಿ ಉದ್ವಿಗ್ನ</p></div>

ಬಾಂಗ್ಲಾ ಗಡಿಯಲ್ಲಿ ಉದ್ವಿಗ್ನ

   

ಢಾಕಾ: ಗಡಿಯಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯವು ಭಾನುವಾರ ಭಾರತದ ರಾಯಭಾರಿ ಪ್ರಣಯ್ ವರ್ಮಾ ಅವರನ್ನು ಕಚೇರಿಗೆ ಕರೆಸಿಕೊಂಡು ಎಚ್ಚರಿಕೆ ನೀಡಿದೆ.

ದ್ವಿಪಕ್ಷೀಯ ಒಪ್ಪಂದ ಉಲ್ಲಂಘಿಸಿ ಭಾರತ-ಬಾಂಗ್ಲಾ ಗಡಿಯಲ್ಲಿ, ಐದು ಸ್ಥಳಗಳಲ್ಲಿ ತಂತಿ ಬೇಲಿ ನಿರ್ಮಿಸಲು ಭಾರತ ಪ್ರಯತ್ನಿಸುತ್ತಿದೆ ಎಂದು ಬಾಂಗ್ಲಾದೇಶ ಆರೋಪಿಸಿದ ಕೆಲವೇ ಗಂಟೆಗಳ ನಂತರ ಈ ಬೆಳವಣಿಗೆ ನಡೆದಿದೆ.

ADVERTISEMENT

ವರ್ಮಾ ಅವರು ಮಧ್ಯಾಹ್ನ ಸ್ಥಳೀಯ ಕಾಲಮಾನ 3 ಗಂಟೆ ಸುಮಾರಿಗೆ ವಿದೇಶಾಂಗ ಸಚಿವಾಲಯಕ್ಕೆ ಭೇಟಿ ನೀಡಿದರು. ವಿದೇಶಾಂಗ ಕಾರ್ಯದರ್ಶಿ ಜಾಶಿಮ್ ಉದ್ದೀನ್ ಮತ್ತು ಅರ್ಮಾ ಅವರು ಸುಮಾರು 45 ನಿಮಿಷ ಸಭೆ ನಡೆಸಿದರು ಎಂದು ಸರ್ಕಾರಿ ಸುದ್ದಿ ಸಂಸ್ಥೆ ‘ಬಿಎಸ್ಎಸ್’ ವರದಿ ಮಾಡಿದೆ.

ಸಭೆಯಲ್ಲಿ ನಡೆದಿರುವ ಚರ್ಚೆಯ ಬಗ್ಗೆ ಮಧ್ಯಂತರ ಸರ್ಕಾರವು ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡದಿದ್ದರೂ ಅಧಿಕಾರಿಗಳು ರಾಯಭಾರಿ ಕರೆಸಿದ್ದನ್ನು ದೃಢಪಡಿಸಿದೆ.

ಸಭೆ ಮುಗಿಸಿ ಹೊರಬಂದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪ್ರಣಯ್‌ ವರ್ಮಾ, ‘ಭದ್ರತೆಗಾಗಿ ಗಡಿಯಲ್ಲಿ ಬೇಲಿ ನಿರ್ಮಿಸುವ ಸಂಬಂಧ ಉಭಯ ರಾಷ್ಟ್ರಗಳ ನಡುವೆ ಒಪ್ಪಂದಗಳಾಗಿವೆ’ ಎಂದು ಹೇಳಿದರು.

‘ಗಡಿ ಕಾವಲು ಪಡೆಗಳಾದ ಬಿಎಸ್ಎಫ್ ಮತ್ತು ಬಿಜಿಬಿ (ಬಾರ್ಡರ್ ಸೆಕ್ಯುರಿಟಿ ಫೋರ್ಸ್ ಮತ್ತು ಬಾರ್ಡರ್ ಗಾರ್ಡ್ ಬಾಂಗ್ಲಾದೇಶ)  ಈ ನಿಟ್ಟಿನಲ್ಲಿ ಮಾತುಕತೆ ನಡೆಸುತ್ತಿವೆ. ಗಡಿಯುದ್ದಕ್ಕೂ ಅಪರಾಧಗಳನ್ನು ತಡೆಗಟ್ಟಲು ಪರಸ್ಪರ ಸಹಕಾರಿ ವಿಧಾನವಿದೆ. ಹಾಗಾಗಿ, ಈ ಒಪ್ಪಂದವನ್ನು ಕಾರ್ಯಗತಗೊಳಿಸುತ್ತೇವೆ. ಇದನ್ನು ಬಾಂಗ್ಲಾ ಕೂಡ ಅರ್ಥ ಮಾಡಿಕೊಳ್ಳುತ್ತದೆ ಎಂದು ನಾವು ನಿರೀಕ್ಷಿಸಿದ್ದೇವೆ’ ಎಂಬುದಾಗಿ ಅವರು ಹೇಳಿದರು. 

ಬಾಂಗ್ಲಾದೇಶದ ಗೃಹ ವ್ಯವಹಾರಗಳ ಸಲಹೆಗಾರ, ನಿವೃತ್ತ ಲೆಫ್ಟಿನೆಂಟ್ ಜನರಲ್ ಜಹಾಂಗೀರ್ ಆಲಂ ಚೌಧರಿ ಅವರು ಬಾಂಗ್ಲಾದೇಶ ಗಡಿ ಕಾವಲು ಪಡೆ ಮತ್ತು ಸ್ಥಳೀಯರ ತೀವ್ರ ವಿರೋಧದಿಂದಾಗಿ ಗಡಿಯಲ್ಲಿ ಮುಳ್ಳುತಂತಿ ಬೇಲಿ ನಿರ್ಮಾಣವನ್ನು ಭಾರತ ಸ್ಥಗಿತಗೊಳಿಸಿದೆ ಎಂದು ಶನಿವಾರವಷ್ಟೇ ಹೇಳಿದ್ದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಚೌಧರಿ, ಹಿಂದಿನ ಸರ್ಕಾರದ ಅವಧಿಯಲ್ಲಿ ಸಹಿ ಹಾಕಲಾದ ಕೆಲವು ಅಸಮಾನ ಒಪ್ಪಂದಗಳಿಂದಾಗಿ ಬಾಂಗ್ಲಾದೇಶ-ಭಾರತದ ಗಡಿಯಲ್ಲಿ ಹಲವು ಸಮಸ್ಯೆಗಳು ಉದ್ಭವಿಸಿವೆ ಎಂದು ಹೇಳಿದರು.

ಬಾಂಗ್ಲಾದೇಶದ ಜತೆಗೆ ಹಂಚಿಕೊಂಡಿರುವ 4,156 ಕಿಲೋಮೀಟರ್ ಉದ್ದದ ಗಡಿಯಲ್ಲಿ ಭಾರತವು ಈಗಾಗಲೇ 3,271 ಕಿಲೋಮೀಟರ್‌ವರೆಗೆ ಬೇಲಿ ಹಾಕಿದೆ. ಸರಿಸುಮಾರು 885 ಕಿಲೋಮೀಟರ್‌ಗಳನ್ನು ಬೇಲಿಯಿಲ್ಲದೆ ಬಿಟ್ಟಿದೆ. ಪದಚ್ಯುತ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಹಿಂದಿನ ಸರ್ಕಾರವು ಗಡಿಯಲ್ಲಿ ಭಾರತಕ್ಕೆ ಅಸಮಾನ್ಯವಾದ ಅವಕಾಶಗಳನ್ನು ನೀಡಿದೆ ಎಂದು ಚೌಧರಿ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.