ADVERTISEMENT

ಹಾದಿ ಹತ್ಯೆಯ ಬೆನ್ನಲ್ಲೇ ದಾಳಿ l ಬಾಂಗ್ಲಾದೇಶದಲ್ಲಿ ಪ್ರಕ್ಷುಬ್ಧ ಸ್ಥಿತಿ

ಪಿಟಿಐ
Published 22 ಡಿಸೆಂಬರ್ 2025, 20:41 IST
Last Updated 22 ಡಿಸೆಂಬರ್ 2025, 20:41 IST
   

ಢಾಕಾ: ಬಾಂಗ್ಲಾದೇಶ ಮೀಸಲಾತಿ ವಿರೋಧಿ ಹೋರಾಟದ ಮುಂಚೂಣಿ
ಯಲ್ಲಿದ್ದ ಮತ್ತೊಬ್ಬ ಯುವನಾಯಕ ಮುತ್ತಲಿಬ್‌ ಸಿಕ್ದರ್‌ ಮೇಲೆ ಅಪರಿಚಿತ ಬಂದೂಕುಧಾರಿಗಳು ಸೋಮವಾರ ಬೆಳಿಗ್ಗೆ ಗುಂಡಿನ ದಾಳಿ ನಡೆಸಿದ್ದಾರೆ.

ಖುಲ್ನಾ ನಗರದ ನೈಋತ್ಯ ಭಾಗದ ಮಜೀದ್‌ ಸರಾನಿ ಪ್ರದೇಶದಲ್ಲಿ ಈ ದಾಳಿ ನಡೆದಿದೆ. 

‘ನ್ಯಾಷನಲ್‌ ಸಿಟಿಜಿನ್‌ ಪಕ್ಷದ (ಎನ್‌ಸಿಪಿ) ಖುಲ್ನಾ ವಿಭಾಗೀಯ ಮುಖ್ಯಸ್ಥ, ಕೇಂದ್ರ ಸಂಯೋಜಕ
ರಾಗಿದ್ದ ಸಿಕ್ದರ್‌ ಅವರ ಮೇಲೆ ಗುಂಡಿನ ದಾಳಿಯಾಗಿದೆ’ ಎಂದು ಎನ್‌ಸಿಪಿಯ ಜಂಟಿ ಸಂಯೋಜಕ ಹಾಗೂ ವೈದ್ಯ ಮಹ್‌ಮುದಾ ಮಿಟು ಅವರು ‘ಫೇಸ್‌ಬುಕ್‌’ನಲ್ಲಿ ಸೋಮವಾರ ಪೋಸ್ಟ್ ಮಾಡಿದ್ದರು. 

ADVERTISEMENT

‘ಅತ್ಯಂತ ಗಂಭೀರ ಸ್ಥಿತಿಯಲ್ಲಿ ಖುಲ್ನಾ ಆಸ್ಪತ್ರೆಗೆ ಸಿಕ್ದರ್ ಅವರನ್ನು ದಾಖಲಿಸ ಲಾಗಿದೆ. ಅವರ ತಲೆಯ ಎಡಭಾಗಕ್ಕೆ ಗುಂಡು ಹೊಕ್ಕಿದೆ.

ಹಾದಿ ಹತ್ಯೆ: ಖಚಿತ ಮಾಹಿತಿ ಸಿಕ್ಕಿಲ್ಲ

‘ಉಸ್ಮಾನ್‌ ಹಾದಿ ಹತ್ಯೆಗೆ ಸಂಬಂಧಿಸಿದಂತೆ ಪ್ರಮುಖ ಶಂಕಿತರ ಖಚಿತ ಮಾಹಿತಿ ಇನ್ನೂ ಸಿಕ್ಕಿಲ್ಲ’ ಎಂದು ಬಾಂಗ್ಲಾದೇಶ ಪೊಲೀಸರು ತಿಳಿಸಿದ್ದಾರೆ.

ಹತ್ಯೆ ನಡೆಸಿದವರನ್ನು ಬಂಧಿಸಲು ಹಾದಿ ಅವರ ಇಂಕ್ವಿಲಾಬ್‌ ಮಂಚ್‌ ಪಕ್ಷವು ಮಧ್ಯಂತರ ಸರ್ಕಾರಕ್ಕೆ 24 ತಾಸುಗಳ ಗಡುವು ನೀಡಿತ್ತು.

ಇದರ ಬೆನ್ನಲ್ಲೇ, ಗೃಹ ಸಚಿವಾಲಯದಲ್ಲಿ ತುರ್ತು ‍ಪತ್ರಿಕಾಗೋಷ್ಠಿ ನಡೆಸಿದ ಹೆಚ್ಚುವರಿ ಐಜಿಪಿ ಖಾಂಡೇಕರ್ ರಫೀಕುಲ್ ಇಸ್ಲಾಂ, ‘ದಾಳಿಕೋರ ಫೈಸಲ್‌ ಕರೀಂ ಮಸೂದ್‌ ಪತ್ತೆಗೆ ಪೊಲೀಸ್‌ ಇಲಾಖೆ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಆದರೆ, ಆತ ಇರುವ ಸ್ಥಳ ಇನ್ನೂ ಪತ್ತೆಯಾಗಿಲ್ಲ. ಗುಪ್ತಚರ ತಂಡಗಳು ಹಾಗೂ ಸೇನಾ ಪಡೆಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ’ ಎಂದು ತಿಳಿಸಿದ್ದಾರೆ.

‘ದಾಳಿಯು ರಾಜಕೀಯ ಕಾರಣದಿಂದ ನಡೆದಿರುವ ಸಾಧ್ಯತೆ ಮೇಲ್ನೋಟಕ್ಕೆ ಕಂಡುಬಂದಿದೆ. ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುವುದು’ ಎಂದು ಪತ್ತೇದಾರಿ ವಿಭಾಗದ ಮುಖ್ಯಸ್ಥ ಶಫೀಕುಲ್‌ ಇಸ್ಲಾಂ ತಿಳಿಸಿದ್ದಾರೆ.

ಬಾಂಗ್ಲಾ ಬೆಳವಣಿಗೆ–ಅಸ್ಸಾಂನಲ್ಲಿ ಗರಿಷ್ಠ ಭದ್ರತೆ

ಗುವಾಹಟಿ (ಪಿಟಿಐ): ‘ಬಾಂಗ್ಲಾದೇಶದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿರುವ ಬೆನ್ನಲ್ಲೇ, ಅಸ್ಸಾಂನಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ’ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ತಿಳಿಸಿದ್ದಾರೆ.

‘ಬಾಂಗ್ಲಾದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ರಾಜ್ಯ ಸರ್ಕಾರವು ಸೂಕ್ಷ್ಮವಾಗಿ ಗಮನಿಸುತ್ತಿದೆ. ಹಿಂದೂಗಳು ದೌರ್ಜನ್ಯಕ್ಕೊಳಗಾಗುತ್ತಿದ್ದು, ಜೀವಂತವಾಗಿ ಸುಡಲಾಗುತ್ತಿದೆ. ಅಲ್ಲಿ ಅಧಿಕಾರ ನಡೆಸುತ್ತಿರುವವರು ಈಶಾನ್ಯ ಭಾರತ ಸೇರಿದಂತೆ ಇಡೀ ಭಾರತವನ್ನು ಸೇರ್ಪಡೆಗೊಳಿಸುವ ಕುರಿತು ಮಾತನಾಡುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.

‘ಹಲವು ಸಂದರ್ಭದಲ್ಲಿ ಬಾಂಗ್ಲಾದೇಶಿಯರು ಅಸ್ಸಾಂಗೆ ಬಂದಿದ್ದು, ಇಡೀ ರಾಜ್ಯವೇ ಅವರಿಂದ ತುಂಬಿದೆ. ಅವರ ಮೇಲೆ ನಿಗಾ ವಹಿಸಿದ್ದು, ಆ ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಮೇಲೂ ಗಮನಹರಿಸಿದ್ದೇವೆ’ ಎಂದು ಹೇಳಿದ್ದಾರೆ.

ಜಮ್ಮುವಿನಲ್ಲಿ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ

ಜಮ್ಮು (ಪಿಟಿಐ): ಬಾಂಗ್ಲಾದೇಶದಲ್ಲಿ ಹಿಂದೂಗಳ ಮನೆಗಳ ಮೇಲೆ ದಾಳಿ ಹಾಗೂ ವ್ಯಕ್ತಿಯೊಬ್ಬರನ್ನು ಜೀವಂತವಾಗಿ ಸುಟ್ಟಿರುವುದನ್ನು ಖಂಡಿಸಿ ಜಮ್ಮು ಮತ್ತು ಕಾಶ್ಮೀರದ ಕಿಶ್ತವಾಡ ಜಿಲ್ಲೆಯಲ್ಲಿ ಸೋಮವಾರ ಪ್ರತಿಭಟನೆ ಹಾಗೂ ಬಂದ್‌ ಆಚರಿಸಲಾಯಿತು.

ಸನಾತನ ಧರ್ಮ ಸಭಾ ಕರೆ ನೀಡಿದ್ದ ಪ‍್ರತಿಭಟನೆ ಹಿನ್ನೆಲೆಯಲ್ಲಿ ನಗರದಲ್ಲಿ ಎಲ್ಲ ಅಂಗಡಿಗಳು ಮುಚ್ಚಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.