ADVERTISEMENT

ಬ್ಯಾಂಕ್ ಗೋಡೆ ಕೊರೆದು ₹3.5 ಕೋಟಿ ಮೌಲ್ಯದ ನಗದು, ಚಿನ್ನಾಭರಣ ದೋಚಿದ ಕಳ್ಳರು!

ಏಜೆನ್ಸೀಸ್
Published 31 ಡಿಸೆಂಬರ್ 2025, 4:09 IST
Last Updated 31 ಡಿಸೆಂಬರ್ 2025, 4:09 IST
ಕಳ್ಳತನ (ಪ್ರಾತಿನಿಧಿಕ ಚಿತ್ರ)
ಕಳ್ಳತನ (ಪ್ರಾತಿನಿಧಿಕ ಚಿತ್ರ)   

ಬರ್ಲಿನ್: ಉಳಿತಾಯ ಬ್ಯಾಂಕ್‌ವೊಂದರ ಗೋಡೆ ಕೊರೆದು ₹3.5 ಕೋಟಿ ಮೌಲ್ಯದ ನಗದು, ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಜರ್ಮನಿಯ ಪಶ್ಚಿಮ ನಗರವಾದ ಗೆಲ್ಸೆನ್‌ಕಿರ್ಚೆನ್‌ನಲ್ಲಿ ನಡೆದಿದೆ.

ಕಳ್ಳರು ಬ್ಯಾಂಕ್‌ನ ಭದ್ರತಾ ಕೋಣೆಯ ಗೋಡೆ ಕೊರೆದು ಒಳಗೆ ಪ್ರವೇಶಿಸಿದ್ದು, 3,000ಕ್ಕೂ ಹೆಚ್ಚು ಭದ್ರತಾ ಠೇವಣಿ ಪೆಟ್ಟಿಗೆಗಳನ್ನು ದೊಚ್ಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶನಿವಾರ ರಾತ್ರಿ ಮತ್ತು ಭಾನುವಾರ ಬೆಳಿಗ್ಗೆ ಪಾರ್ಕಿಂಗ್ ಗ್ಯಾರೇಜ್‌ ಬಳಿ ಹಲವರು ದೊಡ್ಡ ಚೀಲಗಳನ್ನು ಹೊತ್ತೊಯ್ಯುತ್ತಿರುವುದನ್ನು ನೋಡಿದ್ದೇವೆ ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ.

ADVERTISEMENT

ಬ್ಯಾಂಕ್‌ ಒಳಗೆ ಮುಸುಕು ಧರಿಸಿದ್ದ ವ್ಯಕ್ತಿಗಳು ಓಡಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೃತ್ಯದ ಬಳಿಕ ಕಳ್ಳರು ಕಾರಿನಲ್ಲಿ ಪರಾರಿಯಾಗಿದ್ದಾರೆ. ಆರೋಪಿಗಳು ಸುಳಿವು ಸಿಗದಂತೆ ಕಾರಿನ ನಂಬರ್ ಪ್ಲೇಟ್ ಅನ್ನು ಬದಲಾಯಿಸಿದ್ದಾರೆ ಎಂದೂ ಪೊಲೀಸರು ವಿವರಿಸಿದ್ದಾರೆ.

ಈ ಕಳವು ಪ್ರಕರಣವನ್ನು ಅತ್ಯಂತ ಸಂಘಟಿತ ಕೃತ್ಯವಾಗಿದ್ದು, ಹಾಲಿವುಡ್‌ನ ‘ಓಷನ್ಸ್ ಇಲೆವೆನ್’ ಚಿತ್ರಕ್ಕೆ ಹೋಲಿಸಬಹುದಾಗಿದೆ. ವೃತ್ತಿಪರರಿಂದ ಮಾತ್ರ ಈ ರೀತಿ ಮಾಡಲು ಸಾಧ್ಯವೆಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಳವು ಪ್ರಕರಣ ವರದಿಯಾದ ಬೆನ್ನಲ್ಲೇ ತೊಂದರೆಗೀಡಾದ ನೂರಾರು ಗ್ರಾಹಕರು ಬ್ಯಾಂಕ್ ಬಳಿ ಜಮಾಯಿಸಿದ್ದಾರೆ. ಜನರನ್ನು ನಿಯಂತ್ರಿಸಲು ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.