ADVERTISEMENT

ಟ್ರಂಪ್‌ ಭಾಷಣ ತಿರುಚಿದ ಆರೋಪ: BBC ಮುಖ್ಯಸ್ಥ ಟಿಮ್‌, CEO ಟರ್ನಿಸ್ ರಾಜೀನಾಮೆ

ಏಜೆನ್ಸೀಸ್
Published 10 ನವೆಂಬರ್ 2025, 4:41 IST
Last Updated 10 ನವೆಂಬರ್ 2025, 4:41 IST
<div class="paragraphs"><p>ಟಿಮ್ ಡೇವಿ</p></div>

ಟಿಮ್ ಡೇವಿ

   

ಚಿತ್ರಕೃಪೆ: ಎಕ್ಸ್‌

ಲಂಡನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಭಾಷಣವನ್ನು ಎಡಿಟ್ ಮಾಡಿ, 2021ರ ಕ್ಯಾಪಿಟಲ್‌ ಗಲಭೆಗೆ ಕುಮ್ಮಕ್ಕು ನೀಡಿದಂತೆ ಬಿಂಬಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಬಿಸಿ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಅದರ ಬೆನ್ನಲ್ಲೇ, ಸಂಸ್ಥೆಯ ಪ್ರಧಾನ ನಿರ್ದೇಶಕ ಟಿಮ್‌ ಡೇವಿ ಮತ್ತು ಸಿಇಒ ಡೆಬ್ರೊ ಟರ್ನಿಸ್‌ ಅವರು ತಮ್ಮ ಹುದ್ದೆಗಳಿಗೆ ಭಾನುವಾರ ರಾಜೀನಾಮೆ ಸಲ್ಲಿಸಿದ್ದಾರೆ.

ADVERTISEMENT

ಬ್ರಿಟಿಷ್‌ ಬ್ರಾಡ್‌ಕಾಸ್ಟಿಂಗ್‌ ಕಾರ್ಪೊರೇಷನ್‌ (ಬಿಬಿಸಿ) ಪ್ರಸಾರ ಮಾಡಿರುವ ಸಾಕ್ಷ್ಯಚಿತ್ರದಲ್ಲಿ ಟ್ರಂಪ್ ಅವರ ಭಾಷಣವನ್ನು ತಪ್ಪಾಗಿ ನಿರೂಪಿಸಲಾಗಿದೆ. ಗಲಭೆಗೆ ಅವರು ಪ್ರಚೋದನೆ ನೀಡಿದಂತೆ ಬಿಂಬಿಸಲಾಗಿದೆ. ಆದರೆ ಟ್ರಂಪ್‌, ‘ಶಾಂತಿಯುತವಾಗಿ ಪ್ರತಿಭಟನೆ ನಡೆಸಿ’ ಎಂದು ಪ್ರತಿಭಟನಕಾರರಿಗೆ ಕರೆ ನೀಡಿದ್ದನ್ನು ತೆಗೆದುಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರವಾಗಿ ಬಿಬಿಸಿ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ. ವಿವಾದದ ನಂತರ ಬಿಬಿಸಿಗೆ 500ಕ್ಕೂ ಹೆಚ್ಚು ದೂರುಗಳು ಬಂದಿವೆ.

‘ಬಿಬಿಸಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆದಾಗ್ಯೂ ಕೆಲವು ತಪ್ಪುಗಳಾಗಿವೆ. ಪ್ರಧಾನ ನಿರ್ದೇಶಕನಾಗಿ ನಾನೇ ಅದರ ಹೊಣೆ ಹೊರಬೇಕಾಗುತ್ತದೆ. ಇದು ಸಂಪೂರ್ಣ ನನ್ನದೇ ನಿರ್ಧಾರ’ ಎಂದು ಟಿಮ್‌ ಹೇಳಿದ್ದಾರೆ.

‘ಪ್ರಧಾನ ನಿರ್ದೇಶಕ ಸ್ಥಾನಕ್ಕೆ ಹೊಸಬರು ಆಯ್ಕೆಯಾಗುವವರೆಗೆ ಆ ಸ್ಥಾನದಲ್ಲಿ ಮುಂದುವರಿಯುವೆ’ ಎಂದು ಅವರು ತಿಳಿಸಿದ್ದಾರೆ.

‘ಈ ವಿವಾದವು ನಾವು ಪ್ರೀತಿಸುವ ಸುದ್ದಿಸಂಸ್ಥೆಯ ಗೌರವಕ್ಕೆ ಧಕ್ಕೆ ತರುತ್ತಿದೆ. ಸಂಸ್ಥೆಯ ಸಿಇಒ ಆಗಿ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಸಂಸ್ಥೆಯ ವಿರುದ್ಧದ ಟೀಕೆಗಳು ನನ್ನ ರಾಜೀನಾಮೆಯೊಂದಿಗೆ ಕೊನೆಗೊಳ್ಳಲಿ’ ಎಂದು ಟರ್ನಿಸ್‌ ಅವರು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

‘ತಪ್ಪುಗಳು ಘಟಿಸಿವೆ. ಆದರೆ ಬಿಬಿಸಿ ಸುದ್ದಿಸಂಸ್ಥೆಯು ಪಕ್ಷಪಾತಿಯಾಗಿದೆ ಎಂಬ ಆರೋಪವು ಖಂಡಿತ ತಪ್ಪು’ ಎಂದು ಹೇಳಿದ್ದಾರೆ.

ವಿವಾದ ಏನು ಬಹಿರಂಗವಾಗಿದ್ದು ಹೇಗೆ?

ಅಮೆರಿಕ ಕ್ಯಾಪಿಟಲ್ (ಸಂಸತ್‌) ಮೇಲೆ 2021ರ ಜನವರಿ 6ರಂದು ಪ್ರತಿಭಟನಕಾರರು ದಾಳಿ ನಡೆಸುವುದಕ್ಕೂ ಮುನ್ನ ಬೆಂಬಲಿಗರನ್ನು ಉದ್ದೇಶಿಸಿ ಟ್ರಂಪ್ ಮಾಡಿದ್ದ ಭಾಷಣದ ತುಣುಕುಗಳನ್ನು ‘ಪನೋರಮಾ’ ಸಾಕ್ಷ್ಯಚಿತ್ರದಲ್ಲಿ ಬಿಬಿಸಿ ಬಳಸಿತ್ತು.

‘ಟ್ರಂಪ್‌: ಎ ಸೆಕೆಂಡ್‌ ಚಾನ್ಸ್‌?’ ಶೀರ್ಷಿಕೆಯ ಸಾಕ್ಷ್ಯಚಿತ್ರವು ಅಮೆರಿಕ ಅಧ್ಯಕ್ಷೀಯ ಚುನಾವಣೆಗೂ ಒಂದು ದಿನ ಮೊದಲು ಅಂದರೆ 2024ರ ಅಕ್ಟೋಬರ್‌ 28ರಂದು ಪ್ರಸಾರವಾಗಿತ್ತು. ಬಿಬಿಸಿಯ ನಿಯಮಗಳು ಮತ್ತು ಮಾರ್ಗಸೂಚಿ ಕುರಿತ ಮಾಜಿ ಸಲಹೆಗಾರ ಮೈಕೆಲ್‌ ಪ್ರಿಸ್ಕಾಟ್‌ ಅವರು ‘ಪನೋರಮಾ’ ಸಾಕ್ಷ್ಯಚಿತ್ರದ ಸಂಕಲನದಲ್ಲಿ ಆದ ದೋಷದ ಬಗ್ಗೆ ಸಂಸ್ಥೆಗೆ ಪತ್ರ ಬರೆದಿದ್ದರು. ಈ ಪತ್ರ ಸೋರಿಕೆಯಾಗಿತ್ತು. ಅದನ್ನು ‘ದಿ ಡೈಲಿ ಟೆಲಿಗ್ರಾಫ್‌’ ದಿನ ಪತ್ರಿಕೆಯು ಕಳೆದ ವಾರ ಪ್ರಕಟಿಸಿತ್ತು. ಈ ಬೆನ್ನಲ್ಲೇ ವಿವಾದ ತೀವ್ರಗೊಂಡಿದೆ.

ಮುಖ್ಯಸ್ಥ ಸಮೀರ್‌ ಶಾ ಕ್ಷಮೆಯಾಚನೆ‌

‘ಸಾಕ್ಷ್ಯಚಿತ್ರದಲ್ಲಿ ಟ್ರಂಪ್ ಅವರ ಜನವರಿ 6ರ ಎರಡು ಪ್ರತ್ಯೇಕ ಭಾಷಣದ ತುಣುಕುಗಳನ್ನು ಜೋಡಿಸಿ ಎಡಿಟ್ ಮಾಡಲಾಗಿದೆ. ಆದರೆ ಅದು ಏಕಕಾಲದಲ್ಲಿ ಅವರು ಮಾತನಾಡಿದಂತೆ ಭಾಸವಾಗುತ್ತಿದೆ. ಜೊತೆಗೆ ಟ್ರಂಪ್‌ ಅವರು ಹಿಂಸಾಚಾರಕ್ಕೆ ನೇರವಾಗಿ ಕರೆ ನೀಡಿದಂತೆ ಭಾಸವಾಗುತ್ತಿದೆ. ಎಡಿಟ್‌ ಮಾಡುವಾಗ ಉಂಟಾದ ಈ ದೋಷಕ್ಕೆ  ಕ್ಷಮೆಯಾಚಿಸುತ್ತೇವೆ’ ಎಂದು ಬಿಬಿಸಿ ಮುಖ್ಯಸ್ಥ ಸಮೀರ್‌ ಶಾ ಅವರು ಹೇಳಿದ್ದಾರೆ. ಇದರ ಹಿಂದೆ ಜನರನ್ನು ದಾರಿ ತಪ್ಪಿಸುವ ಉದ್ದೇಶ ಇಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.