ADVERTISEMENT

ಢಾಕಾ | ಉಲ್ಫಾ ಮುಖಂಡನಿಗೆ ಗಲ್ಲುಶಿಕ್ಷೆ ಬದಲು ಜೀವಾವಧಿ ಶಿಕ್ಷೆ

ಪಿಟಿಐ
Published 18 ಡಿಸೆಂಬರ್ 2024, 12:27 IST
Last Updated 18 ಡಿಸೆಂಬರ್ 2024, 12:27 IST
.
.   

ಢಾಕಾ: ಈಶಾನ್ಯ ಭಾರತದ ಯುನೈಟೆಡ್‌ ಲಿಬರೇಷನ್‌ ಫ್ರಂಟ್‌ ಆಫ್‌ ಅಸೋಮ್‌ (ಉಲ್ಫಾ) ಪ್ರತ್ಯೇಕವಾದಿ ಸಂಘಟನೆಯ ನಾಯಕ ಪರೇಶ್‌ ಬರುವಾಗೆ ವಿಧಿಸಿದ್ದ ಗಲ್ಲುಶಿಕ್ಷೆಯನ್ನು ಬಾಂಗ್ಲಾದೇಶದ ಹೈಕೋರ್ಟ್‌ ಬುಧವಾರ ಜೀವಾವಧಿ ಶಿಕ್ಷೆಗೆ ಇಳಿಸಿದೆ.

ಪ್ರತ್ಯೇಕತಾವಾದಿಗಳಿಗೆ 2004ರಲ್ಲಿ ಬೃಹತ್‌ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ ಪ್ರಕರಣದಲ್ಲಿ ಮಾಜಿ ಸಚಿವ ಲುಟ್ಫುಝಮಾನ್‌ ಬಾಬರ್‌ ಮತ್ತು ಇತರ ಐವರನ್ನು ಖುಲಾಸೆಗೊಳಿಸಿದೆ.

ನ್ಯಾಯಮೂರ್ತಿ ಮುಸ್ತಫಾ ಜಮಾನ್ ಇಸ್ಲಾಂ ಹಾಗೂ ನಸ್ರಿನ್‌ ಅಖ್ತರ್‌ ಅವರನ್ನೊಳಗೊಂಡ ಪೀಠವು ಈ ತೀರ್ಪು ನೀಡಿದೆ. ಬರುವಾ ಇದೀಗ ಚೀನಾದಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ.

ADVERTISEMENT

ಶಸ್ತ್ರಾಸ್ತ್ರ ಕಳ್ಳಸಾಗಣೆ ಪ್ರಕರಣದಲ್ಲಿ ಬಾಬರ್‌ ಸೇರಿದಂತೆ ನಿವೃತ್ತ ಮೇಜರ್ ಜನರಲ್‌ ರೆಝಾಕುಲ್‌ ಹೈದರ್‌ ಚೌಧರಿ, ಸರ್ಕಾರಿ ರಸಗೊಬ್ಬರ ಘಟಕದ ಮಾಜಿ ವ್ಯವಸ್ಥಾಪಕ ಮೊಹ್ಸಿನ್‌ ತಾಲೂಕ್ದರ್‌ ಹಾಗೂ ಜನರಲ್ ಮ್ಯಾನೇಜರ್‌ ಎನಾಮುಲ್‌ ಹೊಕ್‌, ಕೈಗಾರಿಕಾ ಸಚಿವಾಲಯದ ಮಾಜಿ ಹೆಚ್ಚುವರಿ ಕಾರ್ಯದರ್ಶಿ ನೂರುಲ್‌ ಅಮಿನ್‌ ಮತ್ತು ಜಮಾತ್ ಎ ಇಸ್ಲಾಮಿ ನಾಯಕ ಮೋತಿಯುರ್‌ ರಹಮಾನ್ ನಿಜಾಮಿ ಖುಲಾಸೆಗೊಂಡವರು.

ಬಾಂಗ್ಲಾದ ರಾಷ್ಟ್ರೀಯ ಭದ್ರತಾ ಗುಪ್ತಚರ ದಳದ ಮಾಜಿ ಮುಖ್ಯಸ್ಥ, ಡಿಜಿಎಫ್‌ನ ಮಾಜಿ ನಿರ್ದೇಶಕರೂ ಆಗಿದ್ದ ಬ್ರಿಗೇಡಿಯರ್‌ ಜನರಲ್ ಅಬ್ದುಲ್ ರಹೀಂ ಸಹ ಮರಣದಂಡನೆ ಶಿಕ್ಷೆಗೊಳಪಟ್ಟಿದ್ದರು. ಪ್ರಕರಣದ ವಿಚಾರಣೆ ನಡೆಯುವ ಹಂತದಲ್ಲೇ ಜೈಲಿನಲ್ಲಿ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.