ADVERTISEMENT

ಬಿಡೆನ್‌–ಸ್ಯಾಂಡರ್ಸ್‌ ನೇರ ಹಣಾಹಣಿ

ಅಧ್ಯಕ್ಷೀಯ ಅಭ್ಯರ್ಥಿ: ಇಬ್ಬರಿಗೆ ಸೀಮಿತವಾದ ಡೆಮಾಕ್ರಟಿಕ್‌ ಆಂತರಿಕ ಚುನಾವಣೆ

ಪಿಟಿಐ
Published 4 ಮಾರ್ಚ್ 2020, 20:28 IST
Last Updated 4 ಮಾರ್ಚ್ 2020, 20:28 IST
ಬಿಡೆನ್‌ ಹಾಗೂ ಸ್ಯಾಂಡರ್ಸ್‌
ಬಿಡೆನ್‌ ಹಾಗೂ ಸ್ಯಾಂಡರ್ಸ್‌   

ವಾಷಿಂಗ್ಟನ್‌ : ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿಯ ಆಯ್ಕೆ ಚುನಾವಣೆಯು ಮಾಜಿ ಉಪಾಧ್ಯಕ್ಷ ಜೋ ಬಿಡೆನ್‌ ಮತ್ತು ಸೆನೆಟರ್‌ ಬರ್ನಿ ಸ್ಯಾಂಡರ್ಸ್‌ ನಡುವಣ ನೇರ ಹಣಾಹಣಿಯಾಗಿ ಮಾರ್ಪಟ್ಟಿದೆ. ವಿವಿಧ ರಾಜ್ಯಗಳಲ್ಲಿ ಮಂಗಳವಾರ ನಡೆದ ಚುನಾವಣೆಗಳಲ್ಲಿ ಈ ಇಬ್ಬರೂ ಮಹತ್ವದ ಗೆಲುವು ದಾಖಲಿಸಿದ್ದಾರೆ.

ಮಾರ್ಚ್‌ 3ರಂದು 15 ರಾಜ್ಯಗಳಲ್ಲಿ ಚುನಾವಣೆ ನಡೆದಿದೆ. ವರ್ಜೀನಿಯಾ, ನಾರ್ಥ್ ಕೆರೊಲಿನಾ, ಅಲಬಾಮಾ, ಓಕ್ಲಹಾಮಾ, ಟೆನಿಸ್ಸಿ, ಮಿನ್ನಿಸೋಟ, ಮೆಸ್ಸಾಚುಸೆಟ್ಸ್‌ ಮತ್ತು ಅರ್ಕಾನ್ಸಸ್‌ನಲ್ಲಿ 77 ವರ್ಷದ ಬಿಡೆನ್‌ ಗೆಲುವು ಪಡೆದಿದ್ದಾರೆ. ಅಧ್ಯಕ್ಷ ಅಭ್ಯರ್ಥಿ ಸ್ಥಾನಕ್ಕೆ ತಾವು ಪ್ರಬಲ ಪ್ರತಿಸ್ಪರ್ಧಿ ಎಂಬುದನ್ನು ಈ ಗೆಲುವಿನ ಮೂಲಕ ಬಿಡೆನ್‌ ಸಾಬೀತು ಮಾಡಿದ್ದಾರೆ.

ಆದರೆ, ಅತ್ಯಂತ ಮಹತ್ವದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಸ್ಯಾಂಡರ್ಸ್‌ (78) ಭಾರಿ ಗೆಲುವು ಸಾಧಿಸಿದ್ದಾರೆ. ಹಾಗಾಗಿ, ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಎದುರಾಳಿ ಯಾರು ಎಂಬುದನ್ನು ನಿರ್ಧರಿಸುವ ಹೋರಾಟ ಇನ್ನೂ ಮುಗಿದಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ.

ADVERTISEMENT

ಸ್ಯಾಂಡರ್ಸ್‌ ಅವರು ತಮ್ಮ ತವರು ರಾಜ್ಯ ವರ್ಮೊಂಟ್‌, ಯೂಟಾ ಮತ್ತು ಕೊಲೆರಾಡೊದಲ್ಲಿ ಗೆಲುವು ಪಡೆದಿದ್ದಾರೆ. ಮೈನ್‌ ಮತ್ತು ಟೆಕ್ಸಾಸ್‌ನಲ್ಲಿ ಇಬ್ಬರ ನಡುವೆ ತೀವ್ರ ಹಣಾಹಣಿ ಇದೆ.

ಮೆಸ್ಸಾಚುಸೆಟ್ಸ್‌ನ ಸೆನೆಟರ್‌ ಎಲಿಜಬೆತ್‌ ವಾರನ್‌ ಅವರು ತನ್ನ ತವರು ರಾಜ್ಯದಲ್ಲಿ ಬಿಡೆನ್‌ ವಿರುದ್ಧ ಭಾರಿ ಸೋಲು ಕಂಡಿದ್ದಾರೆ. ಹಾಗಾಗಿ, ಅವರ ಉಮೇದುವಾರಿಕೆ ಬಹುತೇಕ ಇಲ್ಲಿಗೆ ಮುಗಿದಂತೆಯೇ ಲೆಕ್ಕ.

ನ್ಯೂಯಾರ್ಕ್‌ನ ಮಾಜಿ ಮೇಯರ್‌ ಮೈಕೆಲ್‌ ಬ್ಲೂಮ್‌ಬರ್ಗ್‌ ಅವರು ಈ ಸ್ಪರ್ಧೆಗೆ ಕೊನೆ ಕ್ಷಣದಲ್ಲಿ ಪ್ರವೇಶಿಸಿದವರು. ಅವರು ಪ್ರಚಾರಕ್ಕಾಗಿ ಈವರೆಗೆ ₹50 ಕೋಟಿ ಡಾಲರ್‌ (ಸುಮಾರು ₹3,500 ಕೋಟಿ) ವೆಚ್ಚ ಮಾಡಿದ್ದಾರೆ. ಆದರೆ, ಬಿಡೆನ್‌ ಮತ್ತು ಸ್ಯಾಂಡರ್ಸ್‌ ಅವರ ಅವಕಾಶಗಳನ್ನು ಮೊಟಕುಗೊಳಿಸಲು ಮೈಕೆಲ್‌ಗೆ ಸಾಧ್ಯವಾಗಿಲ್ಲ.

ಜನಪ್ರತಿನಿಧಿ ಸಭೆಗೆ ಪ್ರವೇಶ ಪಡೆದ ಮೊದಲ ಹಿಂದೂ ಮಹಿಳೆ ಎಂಬ ಹೆಗ್ಗಳಿಕೆ ಹೊಂದಿರುವ ತುಳಸಿ ಗಬ್ಬಾರ್ಡ್‌ ಅವರು ಅಧ್ಯಕ್ಷೀಯ ಅಭ್ಯರ್ಥಿಯಾಗುವ ಆಕಾಂಕ್ಷೆ ಹೊಂದಿದ್ದರು. ಆದರೆ, ಅದು ಸಾಕಾರಗೊಳ್ಳಲೇ ಇಲ್ಲ.

ಟೆಕ್ಸಾಸ್‌ ಮತ್ತು ಕ್ಯಾಲಿಫೋರ್ನಿಯಾ ರಾಜ್ಯಗಳಲ್ಲಿ ಬಿಡೆನ್‌ ಅವರಿಗೆ 327 ಚುನಾಯಿತ ಪ್ರತಿನಿಧಿಗಳ ಬೆಂಬಲ ಸಿಕ್ಕಿದ್ದರೆ, ಸ್ಯಾಂಡರ್ಸ್‌ ಅವರು 218 ಪ್ರತಿನಿಧಿಗಳ ಬೆಂಬಲ ಪಡೆದು ಹಿನ್ನಡೆಯಲ್ಲಿದ್ದಾರೆ.

ಪ್ರತಿನಿಧಿಗಳು ನಿರ್ಣಾಯಕ

ಡೆಮಾಕ್ರಟಿಕ್‌ ಪಕ್ಷದಲ್ಲಿ 3,979 ಚುನಾಯಿತ ಪ್ರತಿನಿಧಿಗಳಿದ್ದಾರೆ. ಇವರ ಪೈಕಿ 1991ಕ್ಕಿಂತ ಹೆಚ್ಚು ಪ್ರತಿನಿಧಿಗಳ ಬೆಂಬಲ ಪಡೆದವರನ್ನು ಅಧ್ಯಕ್ಷೀಯ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗುತ್ತದೆ. ಮಂಗಳವಾರ ನಡೆದ ಚುನಾವಣೆಗಳಲ್ಲಿ 1,357 ಪ್ರತಿನಿಧಿಗಳು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಸದ್ಯಕ್ಕೆ ಬಿಡೆನ್ ಅವರಿಗೆ ಮುನ್ನಡೆ ಇದ್ದಂತೆ ಕಾಣಿಸುತ್ತಿದೆ. ಆದರೆ, ಕ್ಯಾಲಿಫೋರ್ನಿಯಾದಲ್ಲಿ ಸ್ಯಾಂಡರ್ಸ್‌ಗೆ ಭಾರಿ ಗೆಲುವು ಸಿಕ್ಕಿದೆ. ಹಾಗಾಗಿ, ಈ ಅಂತರವನ್ನು ತುಂಬಲು ಸಾಧ್ಯ ಎಂದು ಸ್ಯಾಂಡರ್ಸ್‌ ಭಾವಿಸಿದ್ದಾರೆ.

ಮೈಕಲ್ ಹಿನ್ನಡೆ; ಟ್ರಂಪ್ ಲೇವಡಿ
‘ಸುಮಾರು 70 ಕೋಟಿ ಡಾಲರ್‌ ಚರಂಡಿಯಲ್ಲಿ ಕೊಚ್ಚಿ ಹೋಯಿತು. ಅವರಿಗೆ (ಮೈಕೆಲ್‌ ಬ್ಲೂಮ್‌ಬರ್ಗ್‌) ಮಿನಿ ಮೈಕ್‌ ಎಂಬ ಅಡ್ಡ ಹೆಸರು ಬಿಟ್ಟು ಬೇರೇನೂ ಸಿಗಲಿಲ್ಲ. ಜತೆಗೆ, ಇದ್ದ ಒಳ್ಳೆಯ ಹೆಸರನ್ನೂ ಕಳೆದುಕೊಂಡರು. ಮೈಕ್‌ ಈಗ ನೇರವಾಗಿ ಮನೆಗೆ ಹೋಗಬಹುದು’ ಎಂದು ಮೈಕೆಲ್‌ ಅವರ ಹಿನ್ನಡೆಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಲೇವಡಿ ಮಾಡಿದ್ದಾರೆ.

‘ಮಿನಿ ಮೈಕ್‌ ಅವರಂತೆಯೇ ಸೋತು ಸುಣ್ಣವಾಗಿರುವ ಇನ್ನೊಬ್ಬರು ಎಲಿಜಬೆತ್‌ ವಾರನ್‌. ಸ್ವಂತ ರಾಜ್ಯ ಮೆಸ್ಸಾಚುಸೆಟ್ಸ್‌ನಲ್ಲಿಯೂ ಅವರಿಗೆ ಗೆಲ್ಲಲಾಗಿಲ್ಲ. ಈಗ, ಅವರು ಗಂಡನ ಜತೆಗೆ ಮನೆಯಲ್ಲಿ ಕುಳಿತು ತಣ್ಣಗಿನ ಬಿಯರ್‌ ಕುಡಿಯಬಹುದು’ ಎಂದೂ ಟ್ರಂಪ್‌ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.